ನ್ಯೂಸ್

Video | ನಿಮ್ಮ ವಾಹನದ ಮೇಲೆ 'ಆರ್​ಎಸ್ಎಸ್​' ಸ್ಟಿಕ್ಕರ್ ಇದ್ಯಾ?; ಹಾಗಿದ್ದರೆ ಇಲ್ಲಿಗೆ ಹೋಗುವಾಗ ಒಮ್ಮೆ ಯೋಚಿಸಿ...

ತಿರುಪತಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ವಿರುದ್ಧ ಆಗಾಗ ಚಿತಾವಣೆಗಳು ನಡೆಯುವುದು ಹೊಸದೇನಲ್ಲ. ಅದು ಹಿಂದುಪರ ನಿಲುವುಗಳನ್ನು ಹೊಂದಿದೆ ಎಂಬ ಕಾರಣಕ್ಕೆ, ಅದು ಬಿಜೆಪಿಗೆ ಬೆಂಬಲ ನೀಡುತ್ತಿದೆ ಎಂಬ ವಿಷಯಕ್ಕೆ ಆಗಾಗ ಕೆಲ ವಿರೋಧಿಗಳ ಅಸಮಾಧಾನಕ್ಕೆ ಗುರಿಯಾಗುತ್ತಿರುವುದೂ ಹೊಸದೇನಲ್ಲ.

ಇಷ್ಟು ದಿನ ಆರ್​ಎಸ್​ಎಸ್​ ವಿರುದ್ಧ, ಅದರ ಸ್ವಯಂಸೇವಕರ ವಿರುದ್ಧ ವ್ಯಕ್ತವಾಗುತ್ತಿದ್ದ ವಿರೋಧ ಇದೀಗ ಅದರ ಸ್ಟಿಕ್ಕರ್​ನವರೆಗೂ ಬಂದುಬಿಟ್ಟಿದೆಯಾ ಎಂಬ ಅನುಮಾನ ಮೂಡಲಾರಂಭಿಸಿದೆ. ಏಕೆಂದರೆ ವಾಹನದ ಮೇಲೆ ಆರ್​ಎಸ್​ಎಸ್​ ಕುರಿತ ಸ್ಟಿಕ್ಕರ್ ಇದೆ ಎಂಬ ಕಾರಣಕ್ಕೇ ತಿರುಮಲಕ್ಕೆ ಪ್ರವೇಶ ನಿಷೇಧಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ತಿರುಪತಿಯ ಅಲಿಪಿರಿ ನಿಲ್ದಾಣದಲ್ಲಿ ತಾವು ಹೋಗುತ್ತಿದ್ದ ವಾಹನವನ್ನು ತಡೆದು, ಅದರಲ್ಲಿದ್ದ ಆರ್​ಎಸ್​ಎಸ್​ ಸ್ಟಿಕ್ಕರ್ ತೆಗೆದರಷ್ಟೇ ತಿರುಮಲಕ್ಕೆ ಪ್ರವೇಶಿಸಲು ಬಿಡುವುದಾಗಿ ಹೇಳಿದ್ದಾರೆ ಎಂದು ವ್ಯಕ್ತಿಯೊಬ್ಬರು ವಿಡಿಯೋ ಮೂಲಕ ನೋವು ತೋಡಿಕೊಂಡಿದ್ದಾರೆ. ಆರ್​ಎಸ್ಎಸ್​ ಕ್ರಿಶ್ಚಿಯನ್​ ಅಥವಾ ಮುಸ್ಲಿಂ ಸಂಘಟನೆಯಲ್ಲ. ಆರ್​ಎಸ್ಎಸ್​ ಬಿಜೆಪಿ ಥರ ರಾಜಕೀಯ ಪಕ್ಷವೂ ಅಲ್ಲ. ಹೀಗಿದ್ದೂ ಯಾಕೆ ಪ್ರವೇಶಿಸಲು ಬಿಡುತ್ತಿಲ್ಲ, ಯಾಕೆ ತಿರುಮಲದಲ್ಲಿ ಹಿಂದೂಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಅಸಮಾಧಾನ ಹೊರಹಾಕಿರುವ ವಿಡಿಯೋ ದೃಶ್ಯಾವಳಿ ಇದೀಗ ವೈರಲ್​ ಆಗಿದೆ.