AI ಡೀಪ್‌ಫೇಕ್ ಮಾರ್ಫಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಟಿ ಶ್ರಿಯಾ ಶರಣ್ 
ನ್ಯೂಸ್

"ಬಟ್ಟೆ ಮಾಯ ಮಾಡ್ತಾರೆ, ಎದೆಯಳತೆ ಬದಲಿಸ್ತಾರೆ!": ಆನ್‌ಲೈನ್ ಕಾಮುಕರ ಕರಾಳ ಮುಖ ಬಿಚ್ಚಿಟ್ಟ ನಟಿ ಶ್ರಿಯಾ ಶರಣ್! Shriya Saran

ಎದೆಯ ಅಳತೆ ಬದಲಿಸ್ತಾರೆ, ಬಟ್ಟೆ ಮಾಯ ಮಾಡ್ತಾರೆ! AI ಡೀಪ್‌ಫೇಕ್ ಹಾಗೂ ಅಶ್ಲೀಲ ಮಾರ್ಫಿಂಗ್ ಹಾವಳಿ ವಿರುದ್ಧ ನಟಿ ಶ್ರಿಯಾ ಶರಣ್ ಆಕ್ರೋಶ. ಜಾನ್ವಿ ಬೆನ್ನಲ್ಲೇ ಬೆಂಕಿ ಉಗುಳಿದ 'ದೃಶ್ಯಂ' ಬೆಡಗಿ!

ಮುಂಬೈ: ತಂತ್ರಜ್ಞಾನ ಬೆಳೆದ ಹಾಗೆ ಜನರಿಗೆ ಅನುಕೂಲ ಎಷ್ಟಾಗುತ್ತಿದೆಯೋ, ಕಿಡಿಗೇಡಿಗಳ ವಿಕೃತಿಯೂ ಅಷ್ಟೇ ಮಿತಿಮೀರುತ್ತಿದೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ನಕಲಿ ಅಶ್ಲೀಲ ಫೋಟೋ, ವಿಡಿಯೋಗಳನ್ನು ಸೃಷ್ಟಿಸೋ AI (ಕೃತಕ ಬುದ್ಧಿಮತ್ತೆ) ಡೀಪ್‌ಫೇಕ್ ದಂಧೆ ಸಿನಿಮಾರಂಗವನ್ನು ಬೆಚ್ಚಿಬೀಳಿಸಿದೆ. ರಶ್ಮಿಕಾ ಮಂದಣ್ಣ, ಆಲಿಯಾ ಭಟ್ ನಂತರ ಈಗ ಈ ಆನ್‌ಲೈನ್ ಕಾಮುಕರ ಬಲೆಗೆ ನಟಿ ಶ್ರಿಯಾ ಶರಣ್ ಮತ್ತು ಜಾನ್ವಿ ಕಪೂರ್ ಬಿದ್ದಿದ್ದಾರೆ.

ತಮ್ಮ ಫೋಟೋಗಳನ್ನು ಕಂಪ್ಯೂಟರ್‌ನಲ್ಲಿ ತಿದ್ದಿ, ಅಶ್ಲೀಲವಾಗಿ ಹರಿಬಿಡುತ್ತಿರುವ ಕಿಡಿಗೇಡಿಗಳ ವಿರುದ್ಧ ನಟಿ ಶ್ರಿಯಾ ಶರಣ್ ನೇರವಾಗಿಯೇ ಗುಡುಗಿದ್ದಾರೆ. 'ದೃಶ್ಯಂ' ಸಿನಿಮಾ ಖ್ಯಾತಿಯ ಶ್ರಿಯಾ, ಆನ್‌ಲೈನ್‌ನಲ್ಲಿ ನಟಿಯರ ಖಾಸಗಿತನಕ್ಕೆ ಕನ್ನ ಹಾಕುತ್ತಿರುವ AI ವಿಕೃತಿಯ ಬಗ್ಗೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.Indian Embassy

ನನ್ನ ಫೋಟೋ ನೋಡಿ, ನನಗೇ ಅನುಮಾನ ಬರುತ್ತೆ!

ಇತ್ತೀಚೆಗೆ, ಈ ಡೀಪ್​ಫೇಕ್​ ಬಗ್ಗೆ ಮಾತನಾಡಿದ ಶ್ರಿಯಾ ಶರಣ್, ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಈ ಮಾರ್ಫಿಂಗ್ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಆನ್‌ಲೈನ್‌ನಲ್ಲಿ ಕೆಲವೊಮ್ಮೆ ನನ್ನದೇ ಎನ್ನಲಾದ ಚಿತ್ರಗಳನ್ನು ನೋಡಿದಾಗ ನನಗೇ ವಿಚಿತ್ರ ಅನ್ನಿಸುತ್ತೆ. ಇದು ನಿಜವಾಗಿಯೂ ನಾನೇನಾ ಅಂತ ನನಗೇ ಗೊತ್ತಾಗಲ್ಲ. ಫೋಟೋಗಳಲ್ಲಿ ನಿಮ್ಮ ಎದೆಯ ಅಳತೆಯನ್ನು ಬದಲಾಯಿಸಿಬಿಡುತ್ತಾರೆ.

ನೀವು ಹಾಕಿಕೊಂಡಿರುವ ಮೈಮೇಲಿನ ಬಟ್ಟೆ ಇದ್ದಕ್ಕಿದ್ದಂತೆ ಮಾಯವಾಗಿಬಿಡುತ್ತದೆ, ಹಿಂಭಾಗದ ಅಂಗಾಂಗಗಳನ್ನು ದೊಡ್ಡದಾಗಿ ಎಡಿಟ್ ಮಾಡುತ್ತಾರೆ. ಇದನ್ನು ನೋಡಿದಾಗ ತಲೆಕೆಡಿಸಿಕೊಳ್ಳಬಾರದು, ಲಘುವಾಗಿ ಬಿಡಬೇಕು ಅಂದುಕೊಂಡರೂ ಒಳಗೆ ತುಂಬಾ ಕಿರಿಕಿರಿಯಾಗುತ್ತದೆ. ಇದು ಖಂಡಿತವಾಗಿಯೂ ಸರಿ ಇಲ್ಲ ಎಂದು ಶ್ರಿಯಾ ಬೇಸರ ವ್ಯಕ್ತಪಡಿಸಿದ್ದಾರೆ.

ತಂತ್ರಜ್ಞಾನದಿಂದ ಒಳ್ಳೆಯದೂ ಇದೆ, ಆದರೆ ಇಂತಹ ಕೆಟ್ಟ ಬುದ್ಧಿಯ ವಿಕೃತಿಗಳು ಮಿತಿಮೀರಿದಾಗ ತಡೆದುಕೊಳ್ಳೋದು ಕಷ್ಟವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಜಾನ್ವಿ ಕಪೂರ್ ಹಾಡಿನ ವಿವಾದ

ಶ್ರಿಯಾ ಈ ಮಾತುಗಳನ್ನಾಡಲು ಮುಖ್ಯ ಕಾರಣ, ಇತ್ತೀಚೆಗೆ ಜಾನ್ವಿ ಕಪೂರ್ ಅವರ 'ದೇವರ: ಪಾರ್ಟ್ 1' ಸಿನಿಮಾದ 'ಚುಟ್ಟಮಲ್ಲೆ' ಹಾಡಿಗೆ ಸಂಬಂಧಿಸಿದಂತೆ ನಡೆದ ಅಸಹ್ಯಕರ ಘಟನೆ. ಕಿಡಿಗೇಡಿಗಳು ಈ ಹಾಡಿನ ವಿಡಿಯೋವನ್ನು AI ಮೂಲಕ ಎಡಿಟ್ ಮಾಡಿ, ಜಾನ್ವಿ ಕಪೂರ್ ಅವರನ್ನು ಅತ್ಯಂತ ಅಶ್ಲೀಲ ಹಾಗೂ ಲೈಂಗಿಕವಾಗಿ ಅವಮಾನಿಸುವ ರೀತಿಯಲ್ಲಿ ತೋರಿಸಿ ಇಂಟರ್ನೆಟ್‌ನಲ್ಲಿ ಹರಿಬಿಟ್ಟಿದ್ದರು.

ಇದರಿಂದ ತೀವ್ರ ನೊಂದ ಜಾನ್ವಿ ಕಪೂರ್, ಇನ್‌ಸ್ಟಾಗ್ರಾಮ್‌ನಲ್ಲಿ ಕಿಡಿಕಾರಿದ್ದರು. "ಮಹಿಳೆಯರನ್ನು ಕೇವಲ ಭೋಗದ ವಸ್ತುವನ್ನಾಗಿ ನೋಡಲು ಈ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಒಬ್ಬರ ಅನುಮತಿಯಿಲ್ಲದೆ ಇಂತಹ ವಿಕೃತ ವಿಡಿಯೋಗಳನ್ನು ಹಂಚಿಕೊಳ್ಳುವುದು ಒಬ್ಬ ವ್ಯಕ್ತಿಯ ಗೌರವ, ಸ್ವಾಭಿಮಾನ ಮತ್ತು ಖಾಸಗಿತನದ ಮೇಲಿನ ನೇರ ದಾಳಿ" ಎಂದು ಕಣ್ಣೀರಿಟ್ಟಿದ್ದರು.

ಮಹಿಳೆಯರನ್ನು ಗೌರವಿಸುವ ನಾಡಿನಲ್ಲಿ ಈ ವಿಕೃತಿ ಏಕೆ?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಅತ್ಯಂತ ಆಕ್ಷೇಪಾರ್ಹ ಮತ್ತು ಅಸಹ್ಯಕರವಾಗಿದೆ ಎಂದು ಜೂನಿಯರ್ ಎನ್‌ಟಿಆರ್ ಕಿಡಿಕಾರಿದ್ದಾರೆ. "ಮಹಿಳೆಯರನ್ನು ದೇವತೆಯರಂತೆ ಪೂಜಿಸುವ ನಾಡು ನಮ್ಮದು. 'ಮಾತೃದೇವೋ ಭವ' ಎನ್ನುವುದು ನಮ್ಮ ಸಂಸ್ಕೃತಿಯ ರಕ್ತದಲ್ಲಿದೆ.

ಆದರೆ, ಕೆಲವರು ತಮ್ಮ ವಿಕೃತ ಮನಸ್ಥಿತಿಯನ್ನು ತೋರಿಸಲು AI ತಂತ್ರಜ್ಞಾನವನ್ನು ಎಷ್ಟು ಕೀಳು ಮಟ್ಟಕ್ಕೆ ಬಳಸುತ್ತಿದ್ದಾರೆ ನೋಡಿ. ಇದು ಪದಗಳಲ್ಲಿ ವಿವರಿಸಲಾಗದಷ್ಟು ನಾಚಿಕೆಗೇಡಿನ ವಿಷಯ," ಎಂದು ಜೂನಿಯರ್ ಎನ್‌ಟಿಆರ್ ತಮ್ಮ ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು, (ಏಜೆನ್ಸೀಸ್​).