ನ್ಯೂಸ್

Delhi Blast | ಅವರಿಗೆ ನಮ್ಮ ನೆರವಿನ ಅಗತ್ಯವಿಲ್ಲ....; ಭಾರತದ ತನಿಖಾಧಿಕಾರಿಗಳಿಗೆ ಅಮೆರಿಕಾ ಸೆನೆಟರ್ ಮಾರ್ಕೊ ರೂಬಿಯೊ ಮೆಚ್ಚುಗೆ

Dehli: ಸೋಮವಾರ ( ನ 10) ದೆಹಲಿ ಕೆಂಪು ಕೋಟೆ ಬಳಿ ನಡೆದ ಕಾರ್​ ಸ್ಫೋಟದ (Delhi Blast) ತನಿಖೆಯ ವಿಷಯದಲ್ಲಿ, ಭಾರತದ ಅಧಿಕಾರಿಗಳ ಕಾರ್ಯವನ್ನು ಅಮೆರಿಕದ ಸೆನೆಟರ್ ಮಾರ್ಕೊ ರೂಬಿಯೊ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಎಂದು ವರದಿಯಾಗಿದೆ.

ಬುಧವಾರ ಕೆನಡಾದಲ್ಲಿ ನಡೆದ ಜಿ7 ವಿದೇಶಾಂಗ ಮಂತ್ರಿಗಳ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರೂಬಿಯೊ, ಪ್ರಕರಣದ ವಿಷಯವಾಗಿ ಭಾರತದ ತನಿಖಾಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದ್ದು, ಸಹಾಯ ಮಾಡಲು ನಾವು ಮುಂದಾಗಿದ್ದೆವು, ಆದರೆ, ತನಿಖೆ ನಡೆಸಲು ಅವರೆಲ್ಲಾ ಸಮರ್ಥರಾಗಿದ್ದು, ನಮ್ಮ ನೆರವಿನ ಅಗತ್ಯವಿಲ್ಲ ಎಂದು ತಿಳಿಸಿರುವುದಾಗಿ ಮೂಲಗಳ ಮಾಹಿತಿ.

ಜೈಶಂಕರ್ ರುಬಿಯೊ ಭೇಟಿ.....

ನಯಾಗರಾದಲ್ಲಿ ನಡೆದ G7 ವಿದೇಶಾಂಗ ಸಚಿವರ ಸಭೆಯ ಹೊರತಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್​, ರುಬಿಯೊರನ್ನು ಭೇಟಿಯಾಗಿದ್ದು, ಉಭಯ ನಾಯಕರು ಹಲವಾರು ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸಿದ್ದು, ಇದರಲ್ಲಿ ಇತ್ತೀಚಿನ ದೆಹಲಿಯ ಕೆಂಪು ಕೋಟೆ ಬಳಿಯ ಸ್ಫೋಟದ ಮಾತುಕತೆಗಳು ಸೇರಿವೆ ಎನ್ನಲಾಗಿದೆ. ದೆಹಲಿ ಸ್ಫೋಟದಲ್ಲಿ ಜೀವಹಾನಿಗೆ ರುಬಿಯೊ ಸಂತಾಪ ವ್ಯಕ್ತಪಡಿಸಿದ್ದಕ್ಕೆ ತಮ್ಮ ಎಕ್ಸ್​ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿರುವ ಜೈಶಂಕರ್, ದೆಹಲಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಜೀವಹಾನಿಗೆ ಅವರ ಸಂತಾಪವನ್ನು ಶ್ಲಾಘಿಸುತ್ತೇನೆ. ವ್ಯಾಪಾರ ಮತ್ತು ಪೂರೈಕೆ ಸರಪಳಿಗಳ ಮೇಲೆ ಕೇಂದ್ರೀಕರಿಸಿ ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಚರ್ಚಿಸಲಾಗಿದೆ. ಉಕ್ರೇನ್ ಸಂಘರ್ಷ, ಮಧ್ಯಪ್ರಾಚ್ಯ, ಪಶ್ಚಿಮ ಏಷ್ಯಾ ಪರಿಸ್ಥಿತಿ ಮತ್ತು ಇಂಡೋ-ಪೆಸಿಫಿಕ್ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಈ ವೇಳೆ ತಿಳಿಸಿದರು.

ಕೆಂಪು ಕೋಟೆ ಬಳಿ ಕಾರು ಸ್ಫೋಟ 'ಭಯೋತ್ಪಾದಕ ಘಟನೆ' ಎಂದ ಸರ್ಕಾರ

ಸೋಮವಾರ ನಡೆದ ಕಾರ್​ ಸ್ಫೋಟವನ್ನು "ಭಯೋತ್ಪಾದಕ ಘಟನೆ" ಎಂದಿರುವ ಕೇಂದ್ರ ಸರ್ಕಾರ, ಸ್ಫೋಟಕಗಳಿಂದ ತುಂಬಿದ ಕಾರನ್ನು ಚಲಾಯಿಸುತ್ತಿದ್ದ ಡಾ. ಉಮರ್ ನಬಿ ಡಿಸೆಂಬರ್ 6 ರಂದು ಇಲ್ಲಿ ದಾಳಿ ನಡೆಸಲು ಯೋಜಿಸಿದ್ದರು ಎಂದು ತನಿಖೆಯ ಸಮಯದಲ್ಲಿ ತಿಳಿದುಬಂದಿದೆ.

ದೆಹಲಿ ಘಟನೆ...

ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ಚಲಿಸುತ್ತಿದ್ದ ಹುಂಡೈ ಐ20 ಕಾರಿನೊಳಗೆ ಸಂಭವಿಸಿರುವ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ್ದು, 29 ಜನ ಗಾಯಗೊಂಡಿದ್ದಾರೆ. ಸ್ಫೋಟದ ವೇಳೆ ಹತ್ತಿರವೇ ಇದ್ದ ಅನೇಕ ವಾಹನಗಳು ಸುಟ್ಟುಹೋಗಿದ್ದು, ಹರಿಯಾಣ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕಾರಿನಲ್ಲಿ ಸಂಭವಿಸಿದ ಈ ಘಟನೆ ದೆಹಲಿ ಪೊಲೀಸರು, ಎನ್‌ಐಎ, ಎನ್‌ಎಸ್‌ಜಿ ಮತ್ತು ವಿಧಿವಿಜ್ಞಾನ ತಂಡಗಳಿಂದ ಉನ್ನತ ಮಟ್ಟದ ತನಿಖೆಗೆ ಕಾರಣವಾಗಿದೆ. ಯುಎಪಿಎ ಮತ್ತು ಸ್ಫೋಟಕ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಭದ್ರತಾ ತಪಾಸಣೆಯೊಂದಿಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳವಾರ 11 ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಈ ವೇಳೆ ಮಾತನಾಡಿದ ಷಾ, ಎಲ್ಲಾ ಕೋನದಿಂದಲೂ ಸಮಗ್ರ ತನಿಖೆ ನಡೆಸುವ ಭರವಸೆ ನೀಡಿದರು. ಪ್ರಾರಂಭಿಕ ತನಿಖೆಯ ಪ್ರಕಾರ ಈ ವಾಹನವನ್ನು ಪುಲ್ವಾಮಾ ನಿವಾಸಿಗೆ ಸಂಬಂಧಿಸಿದ್ದು ಎನ್ನಲಾಗಿದ್ದು, ಇದು ಭಯೋತ್ಪಾದಕ ಸಂಪರ್ಕದ ಕುರಿತಾದ ಅನುಮಾನಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.

ಸ್ಫೋಟವಾಗುವ ಕೆಲವೇ ಕ್ಷಣಗಳ ಮೊದಲು ಕೆಂಪು ಕೋಟೆಯ ಬಳಿ, ಶಂಕಿತನ ಕಾರು ಇರುವುದನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದು, ಪೊಲೀಸರು 100 ಕ್ಕೂ ಹೆಚ್ಚು ವೀಡಿಯೊ ತುಣುಕುಗಳನ್ನು ಪರಿಶೀಲಿಸುತ್ತಿದ್ದಾರೆ. ಸಂಭವಿಸಿರುವ ಘಟನೆಯು ಯೋಜಿತ ಭಯೋತ್ಪಾದಕ ದಾಳಿಯೇ, ಇಲ್ಲವೇ ಆತ್ಮಹುತಿ ಬಾಂಬ್ ದಾಳಿಯೇ ಎಂದು ತನಿಖೆ ನಡೆಸುತ್ತಿದ್ದು, ನಾಲ್ವರನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)