ನ್ಯೂಸ್

ಬೆಂಕಿ ಹತ್ತಿ ಉರಿಯುತ್ತಿದ್ದ ಮನೆಯಿಂದ ಹಾರಿದವರನ್ನು ಕ್ಯಾಚ್​ ಹಿಡಿದರು!

ನವದೆಹಲಿ: ಮನೆ ಅಥವಾ ಕಚೇರಿಗೆ ಬೆಂಕಿ ಹೊತ್ತಿಕೊಂಡಾಗ ಕೆಲವರು ಕಿಟಕಿಗಳ ಮೂಲಕ ಹೊರಬಂದು ಪ್ರಾಣ ಉಳಿಸಿಕೊಳ್ಳಲು ಯತ್ನಿಸುತ್ತಾರೆ. ಜೀವ ಉಳಿಯಬಹುದು. ಯಾರಾದರೂ ನಮ್ಮನ್ನು ರಕ್ಷಿಸಬಹುದು ಎಂಬ ಆಸೆಯಿಂದಲೋ ಅಥವಾ ಕೈಸೋತು ಇಲ್ಲವೇ ಕೈಜಾರಿ ಕೆಳಬಿದ್ದು ಸಾಯುವವರ ಸಂಖ್ಯೆಯೂ ದೊಡ್ಡದಿರುತ್ತದೆ. ಆದರೆ, ಈ ಘಟನೆಯಲ್ಲಿ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಕಿಟಕಿಯಿಂದ ಹೊರಬಂದ ಇಬ್ಬರು ಸಹೋದರರು ಮೂರನೇ ಮಹಡಿಯಿಂದ ಜಿಗಿದರೂ ಸುರಕ್ಷಿತವಾಗುಳಿದಿದ್ದಾರೆ. ಹೇಗೆ?

ಹೇಗೆ ಅಂದರೆ, ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡು ಕುತೂಹಲದಿಂದ ಸೇರಿದ ಜನರಿಗೆ 10 ವರ್ಷ ಮತ್ತು 3 ವರ್ಷದ ಇಬ್ಬರು ಸಹೋದರರು ಕಿಟಕಿಯಿಂದ ಹೊರಬಂದಿದ್ದು ಕಂಡಿದೆ. ತಕ್ಷಣವೇ ನಾಲ್ಕು ಜನರು ಸೇರಿ ಕೈಕೈ ಸೇರಿಸಿ ಹಾರುವವರನ್ನು ಕ್ಯಾಚ್​ ಹಿಡಿಯಲು ಸಿದ್ಧರಾಗಿದ್ದಾರೆ. ಬಳಿಕ ಮೇಲಿಂದ ಜಿಗಿಯುವಂತೆ ಬಾಲಕರಿಗೆ ಸೂಚಿಸಿದ್ದಾರೆ. ಅದರಂತೆ ಜಿಗಿದ ಬಾಲಕರನ್ನು ಕ್ಯಾಚ್​ ಹಿಡಿದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರು ಮಾಡಿದ್ದಾರೆ.

ಫ್ರಾನ್ಸ್​ನ ಗ್ರೆನೋಬಲ್​ ಎಂಬ ನಗರದಲ್ಲಿ ಈ ಘಟನೆ ನಡೆದಿದೆ. ಅಗ್ನಿ ಅನಾಹುತದಲ್ಲಿ ಈ ಇಬ್ಬರು ಬಾಲಕರು ಸೇರಿ ಒಟ್ಟು 19 ಮಂದಿ ಗಾಯಗೊಂಡಿದ್ದು, ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ, ಬಾಲಕರನ್ನು ಕ್ಯಾಚ್​ ಹಿಡಿದ ನಾಲ್ವರ ಕೈಗಳ ಮೂಳೆಗಳಿಗೆ ಏನಾದರೂ ಏಟು ಆಗಿದೆಯೇ ಎಂಬುದನ್ನು ಪರಿಶೀಲಿಸುವ ಸಲುವಾಗಿ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಒಬ್ಬ ಯುವಕನ ಮಣಿಕಟ್ಟಿನಲ್ಲಿ ಮೂಳೆ ಮುರಿತ ಉಂಟಾಗಿರುವುದಾಗಿ ಹೇಳಲಾಗಿದೆ.

ಅತೌಮನಿ ವಾಲೀದ್​ (25) ಮಣಿಕಟ್ಟಿನ ಮೂಳೆ ಮುರಿತಕ್ಕೆ ಒಳಗಾಗಿರುವ ಯುವಕ. ಬಾಲಕರನ್ನು ಕ್ಯಾಚ್​ ಹಿಡಿಯುವ ಐಡಿಯಾದ ಬಗ್ಗೆ ವಿವರಿಸಿರುವ ಇವರು, ನಮಗೆ ಯಾರೋ ಕಿರುಚುತ್ತಿರುವುದು ಕೇಳಿಸಿತು. ಏನೆಂದು ನೋಡಲು ಹೋದಾಗ ನಮ್ಮ ಮನೆಯ ಹತ್ತಿರದಲ್ಲೇ ಇದ್ದ ಅಪಾರ್ಟ್​ಮೆಂಟ್​ನಲ್ಲಿ ಬೆಂಕಿ ಹೊತ್ತಿಕೊಂಡು ಜನರು, ರಕ್ಷಣೆಗಾಗಿ ಮೊರೆಯಿಡುತ್ತಿದ್ದರು. ಅಲ್ಲಿಗೆ ಹೋದ ನಮಗೆ ಒಂದು ಕ್ಷಣ ಏನು ಮಾಡಬೇಕು ಎಂಬುದೇ ಗೊತ್ತಾಗಲಿಲ್ಲ. ನಾವು ಮನೆಗಳ ಬಾಗಿಲುಗಳನ್ನು ಒಡೆದು ಒಳಹೋಗಲು ನಿರ್ಧರಿಸಿದೆವು. ಆದರೆ, ಬೆಂಕಿಯ ಕೆನ್ನಾಲಗೆ ಅದಕ್ಕೆ ಅವಕಾಶ ಕೊಡಲಿಲ್ಲ ಎಂದು ಹೇಳಿದ್ದಾರೆ.

ಕೊನೆಗೆ ಕಟ್ಟಡದ ಹೊರಗೆ ಬಂದ ನಮಗೆ ಬಾಲಕರು ಕಿಟಕಿಯಿಂದ ನೇತಾಡುತ್ತಿರುವುದು ಕಾಣಿಸಿತು. ಮೊದಲಿಗೆ ಹೆದರಿಕೆಯಾದರೂ ಅವರನ್ನು ಕ್ಯಾಚ್​ ಹಿಡಿಯುವುದೇ ಒಳಿತು ಎಂಬ ನಿರ್ಧಾರಕ್ಕೆ ಬಂದೆವು. ಅದರಂತೆ ಮೊದಲ ಬಾಲಕನಿಗೆ ಹಾರಲು ಹೇಳಿದಾಗ ಮನದಲ್ಲಿ ಸ್ವಲ್ಪ ಅಳುಕಿತ್ತು. ಆದರೆ ಆತನನ್ನು ಕ್ಯಾಚ್​ ಹಿಡಿದ ಬಳಿಕ ಎರಡನೆಯವನನ್ನು ಸುಲಭವಾಗಿ ಕ್ಯಾಚ್​ ಹಿಡಿದೆವು ಎಂದು ವಿವರಿಸಿದ್ದಾರೆ.