ವಿಪಕ್ಷ ನಾಯಕ ರಾಹುಲ್ ಗಾಂಧಿ  
ನ್ಯೂಸ್

ಮೋದಿ ಜೀ, ನಿಮ್ಮ ಅಧಿಕಾರಿಗಳೇ ಗೊಂದಲದಲ್ಲಿದ್ದಾರೆ': ಮಾರ್ಕೊ ರೂಬಿಯೊ ಭೇಟಿ ವಿಚಾರವಾಗಿ ರಾಹುಲ್ ಗಾಂಧಿ ಟೀಕೆ | Rahul Gandhi on Modi

ಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭಾರತ ಭೇಟಿ ವಿಚಾರವಾಗಿ ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ. ವಿದೇಶಾಂಗ ಸಚಿವಾಲಯ ಗೊಂದಲದಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ.

Marco Rubio India Visit: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ಭಾರತ ಭೇಟಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಈ ವಿಚಾರದಲ್ಲಿ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಗೊಂದಲದಲ್ಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಶ್ರೀ ರೂಬಿಯೊ ತಮ್ಮ ಉದ್ಯೋಗಿಯನ್ನು ಮುಂಬೈಗೆ ಕರೆಸಿಕೊಂಡಿದ್ದಾರೆ. ಮೋದಿ ಜೀ, ನಿಮ್ಮ ವಿದೇಶಾಂಗ ಸಚಿವಾಲಯದ ಅಧಿಕಾರಿಗಳಿಗೆ ಏನಾಗುತ್ತಿದೆ ಎಂಬುದರ ಬಗ್ಗೆ ಗೊಂದಲವಿದೆ. ನೀವು ಅವರಿಗೆ ವಿವರಿಸಬೇಕಾಗಬಹುದು. ಇಲ್ಲದಿದ್ದರೆ, ನಾನೇ ವಿವರಿಸಬೇಕೇ?” ಎಂದು ಟೀಕಿಸಿದ್ದಾರೆ.

ಅಕ್ಟೋಬರ್ 17ರಿಂದ 22ರವರೆಗೆ ರೂಬಿಯೊ ಪ್ರವಾಸ

ಅಮೆರಿಕದ ವಿದೇಶಾಂಗ ಇಲಾಖೆಯ ಪ್ರಕಟಣೆ ಪ್ರಕಾರ, ಮಾರ್ಕೊ ರೂಬಿಯೊ ಅಕ್ಟೋಬರ್ 17ರಿಂದ 22ರವರೆಗೆ ಭಾರತ ಮತ್ತು ಉಜ್ಬೇಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಭಾರತ ಪ್ರವಾಸದ ವೇಳೆ ಅವರು ಮುಂಬೈ ಮತ್ತು ಜಾಮ್‌ನಗರಕ್ಕೆ ತೆರಳಿ, ಹಿರಿಯ ಭಾರತೀಯ ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ಭಾರತ-ಅಮೆರಿಕ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವುದು, ಪ್ರಾದೇಶಿಕ ಹಾಗೂ ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚಿಸುವುದು ಮತ್ತು ಇಂಧನ ಕ್ಷೇತ್ರದಲ್ಲಿ ಸಹಕಾರ ಹೆಚ್ಚಿಸುವ ಅವಕಾಶಗಳನ್ನು ಪರಿಶೀಲಿಸುವುದು ಪ್ರಮುಖ ಉದ್ದೇಶಗಳಾಗಿವೆ.

ವ್ಯಾಪಾರಕ್ಕೆ ಹೆಚ್ಚಿನ ಆದ್ಯತೆ

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮುಂಬೈನಲ್ಲಿ ರೂಬಿಯೊ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಈ ಭೇಟಿ ವ್ಯಾಪಾರಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದು, ದ್ವಿಪಕ್ಷೀಯ ವ್ಯಾಪಾರ, ಇಂಧನ ಸಹಕಾರ, ತಂತ್ರಜ್ಞಾನ ಮತ್ತು ಹೂಡಿಕೆ ಅವಕಾಶಗಳ ಕುರಿತು ಚರ್ಚೆ ನಡೆಯಲಿದೆ ಎಂದು ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ತಿಳಿಸಿದ್ದಾರೆ.

ಜಾಮ್‌ನಗರ ಭೇಟಿ ಏಕೆ ಮಹತ್ವದ್ದು?

ರೂಬಿಯೊ ಅವರ ಜಾಮ್‌ನಗರ ಭೇಟಿ ಕೂಡ ಮಹತ್ವ ಪಡೆದುಕೊಂಡಿದೆ. ಇಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ತೈಲ ಸಂಸ್ಕರಣಾಗಾರವಿದ್ದು, ಇದು ವಿಶ್ವದ ಅತಿದೊಡ್ಡ ಏಕಸ್ಥಳದ ತೈಲ ಸಂಸ್ಕರಣಾ ಘಟಕವಾಗಿದೆ. ದಿನಕ್ಕೆ 14 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಸಂಸ್ಕರಿಸುವ ಸಾಮರ್ಥ್ಯ ಈ ಘಟಕಕ್ಕಿದೆ. ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ಹೂಡಿಕೆ ಹಾಗೂ ಆರ್ಥಿಕ ಸಹಕಾರವನ್ನು ಉತ್ತೇಜಿಸುವ ಉದ್ದೇಶದಿಂದ ರೂಬಿಯೊ ಉದ್ಯಮ ವಲಯದ ಪ್ರಮುಖರನ್ನೂ ಭೇಟಿಯಾಗಲಿದ್ದಾರೆ.

ಈ ವರ್ಷದ ಎರಡನೇ ಭಾರತ ಭೇಟಿ

2026ರಲ್ಲಿ ರೂಬಿಯೊ ಭಾರತಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು ಮೇ 23ರಿಂದ 26ರವರೆಗೆ ಅವರು ಭಾರತ ಪ್ರವಾಸ ಕೈಗೊಂಡಿದ್ದರು. ಮತ್ತೊಂದೆಡೆ, ರಿಲಯನ್ಸ್ ಇಂಡಸ್ಟ್ರೀಸ್‌ನ ಹೂಡಿಕೆಯೊಂದಿಗೆ ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆಯಲ್ಲಿ ಹೊಸ ತೈಲ ಸಂಸ್ಕರಣಾಗಾರ ನಿರ್ಮಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾರ್ಚ್‌ನಲ್ಲಿ ಘೋಷಿಸಿದ್ದರು. ಈ ಯೋಜನೆಗೆ 300 ಶತಕೋಟಿ ಡಾಲರ್ ವೆಚ್ಚವಾಗಲಿದೆ ಎಂದು ಅವರು ತಿಳಿಸಿದ್ದರು.

ಇದನ್ನೂ ಓದಿ: ಭೀಕರ ಸುಂಟರಗಾಳಿಗೆ ತತ್ತರಿಸಿದ ಕೊಲಂಬಿಯಾ: 300ಕ್ಕೂ ಹೆಚ್ಚು ಮನೆಗಳಿಗೆ ಹಾನಿ | Colombia windstorm

ಭಾರತಕ್ಕೆ ಆಗಮಿಸುವ ಮೊದಲು ರೂಬಿಯೊ ಉಜ್ಬೇಕಿಸ್ತಾನದ ಸಮರ್‌ಕಂಡ್‌ಗೆ ತೆರಳಿ, C5+1 ಸಚಿವರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯ ಏಷ್ಯಾದ ದೇಶಗಳ ಹಿರಿಯ ಅಧಿಕಾರಿಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಕಾರ್ಯತಂತ್ರದ ಸಹಕಾರ ಮತ್ತು ವಾಣಿಜ್ಯ ಸಂಬಂಧಗಳ ಬಗ್ಗೆಯೂ ಚರ್ಚಿಸಲಿದ್ದಾರೆ.