ಭೀಕರ ಸುಂಟರಗಾಳಿಗೆ ತತ್ತರಿಸಿದ ಕೊಲಂಬಿಯಾ: 300ಕ್ಕೂ ಹೆಚ್ಚು ಮನೆಗಳಿಗೆ ಹಾನಿ | Colombia windstorm

ಕೊಲಂಬಿಯಾದ ಫುನ್ಜಾ ನಗರದಲ್ಲಿ ಭೀಕರ ಗಾಳಿ-ಮಳೆಗೆ ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿದ್ದು, ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಘಟನೆಯಿಂದ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
Colombia windstorm
ಕೊಲಂಬಿಯಾದಲ್ಲಿ ಭೀಕರ ಸುಂಟರಗಾಳಿ ಅಬ್ಬರ
Published on: 

Colombia Windstorm: ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಭೀಕರ ಗಾಳಿ-ಮಳೆ ಅಪ್ಪಳಿಸಿದ್ದು, ನೂರಾರು ಮನೆಗಳಿಗೆ ಹಾನಿಯಾಗಿದೆ. ಈ ಪ್ರಕೃತಿ ವಿಕೋಪದಿಂದ ನೂರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕೊಲಂಬಿಯಾದ ಕುಂಡಿನಮಾರ್ಕಾ ಪ್ರಾಂತ್ಯದ ಫುನ್ಜಾ ನಗರದಲ್ಲಿ ಪ್ರಬಲ ಗಾಳಿ ಅಪ್ಪಳಿಸಿದ್ದು, ಮನೆಗಳ ಮೇಲ್ಛಾವಣಿಗಳು ಕಿತ್ತು ಹಾರಿಹೋಗಿವೆ. ರಸ್ತೆ ಬದಿಯ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಸಾರ್ವಜನಿಕ ಕ್ರೀಡಾಂಗಣದ ಕಟ್ಟಡವೂ ಹಾನಿಗೊಳಗಾಗಿದೆ.

248ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ

ಆರಂಭಿಕ ವರದಿಗಳ ಪ್ರಕಾರ, 300ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಸ್ಥಳೀಯ ಸರ್ಕಾರದ ವಿಪತ್ತು ನಿರ್ವಹಣಾ ಘಟಕವಾದ ಯುಎಇಜಿಆರ್‌ಡಿ (UAEGRD) ನಡೆಸಿದ ಸಮೀಕ್ಷೆಯ ಪ್ರಕಾರ, ಸುಮಾರು 156ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗಳು ಸಂಪೂರ್ಣ ಹಾನಿಗೊಳಗಾಗಿವೆ. ಈ ಘಟನೆಯಿಂದ 248ಕ್ಕೂ ಹೆಚ್ಚು ಕುಟುಂಬಗಳ ಅಂದಾಜು 842 ಜನರು ತೊಂದರೆಗೆ ಒಳಗಾಗಿದ್ದಾರೆ.

ಪರಿಹಾರ ಕಾರ್ಯ ಚುರುಕು

ಗಾಳಿ-ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸ್ಥಳೀಯ ಮುನ್ಸಿಪಲ್ ಅಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಪರಿಹಾರ ಕಾರ್ಯ ಕೈಗೊಂಡಿವೆ. ಸಂತ್ರಸ್ತರಿಗೆ ತುರ್ತು ನೆರವು ಒದಗಿಸುವುದರ ಜೊತೆಗೆ, ಹಾನಿಗೊಳಗಾದ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸುವ ಕಾರ್ಯವೂ ನಡೆಯುತ್ತಿದೆ.

ಇದನ್ನೂ ಓದಿ: ದೆಹಲಿಯ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ರಾರಾಜಿಸುತ್ತಿರುವ ಲಡಾಖ್‌ನ ವಿಶ್ವವಿಖ್ಯಾತ ಪಶ್ಮಿನಾ ಕಲೆ! Ladakh Pashmina

ಪ್ರಬಲ ಗಾಳಿಯಿಂದ ಮನೆಗಳು ಮತ್ತು ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗಿದ್ದರೂ, ಯಾವುದೇ ಜೀವಹಾನಿ ಸಂಭವಿಸದಿರುವುದು ಸಮಾಧಾನಕರ ಸಂಗತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net