Zodiac Signs : ಸಾಮಾನ್ಯವಾಗಿ ಎಲ್ಲಾ ಮನುಷ್ಯರು ಇತರರಿಂದ ಸಹಾಯ ಕೇಳುವ ಸಹಜ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಆದರೆ, ಕೆಲವೇ ಜನರಿಗೆ ಮಾತ್ರ ಇತರರಿಗೆ ಸಹಾಯ ಮಾಡುವ ಸ್ವಾಭಾವಿಕ ಬಯಕೆ ಇರುತ್ತದೆ. ಅಂತಹ ಜನರು ಸಿಗುವುದು ತುಂಬಾ ಅಪರೂಪ.
ಹುಟ್ಟಿದ ದಿನ ಮತ್ತು ಗಳಿಗೆಯ ಆಧಾರದ ಮೇಲೆ ವ್ಯಕ್ತಿಯ ರಾಶಿ ಮತ್ತು ನಕ್ಷತ್ರಗಳನ್ನು ನಿರ್ಧರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಆತನ ಭವಿಷ್ಯ ಜೀವನ ಮತ್ತು ವ್ಯಕ್ತಿತ್ವ ಹಾಗೂ ಹಣಕಾಸಿನ ಸ್ಥಿತಿಯ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅಂದಹಾಗೆ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಇತರರಿಗೆ ಸಹಾಯ ಮಾಡಲು ಹುಟ್ಟಿರುವಂತೆಯೇ ವರ್ತಿಸುತ್ತಾರೆ. ಸಹಾಯ ಕೇಳುವವರಿಗೆ, ತಮ್ಮ ಬಳಿ ಏನೂ ಇಲ್ಲದಿದ್ದರೂ ಸಹ, ಏನಾದರೂ ಕೊಡುವ ಗುಣ ಅವರಲ್ಲಿರುತ್ತದೆ. ಅಂತಹ ಉದಾತ್ತ ಗುಣಗಳನ್ನು ಹೊಂದಿರುವ ರಾಶಿಚಕ್ರ ಚಿಹ್ನೆಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ವೃಷಭ ರಾಶಿಯಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿ ನಿಷ್ಠಾವಂತರು ಮತ್ತು ವಿಶ್ವಾಸಾರ್ಹರು. ಅವರು ಇತರರಿಗೆ ಸಹಾಯ ಮಾಡುವಲ್ಲಿ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಸ್ವಾಭಾವಿಕ ಆಸಕ್ತಿಯನ್ನು ಹೊಂದಿರುತ್ತಾರೆ. ಶುಕ್ರನ ಆಳ್ವಿಕೆಯ ವೃಷಭ ರಾಶಿಯವರು ಪ್ರೀತಿ, ಸೌಕರ್ಯ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಪ್ರೀತಿಸುವವರನ್ನು ರಕ್ಷಿಸುವ ಮತ್ತು ಕಾಳಜಿ ವಹಿಸುವ ನೈಸರ್ಗಿಕ ಪ್ರವೃತ್ತಿಯನ್ನು ಹೊಂದಿರುತ್ತಾರೆ. ನೀವು ಅವರ ಸಹಾಯ ಕೇಳಿದರೆ, ಅವರು ಅದನ್ನು ಹೇಗಾದರೂ ಪೂರೈಸಬೇಕು ಅಂದುಕೊಳ್ಳುತ್ತಾರೆ. ಈ ರಾಶಿಚಕ್ರ ಚಿಹ್ನೆಗಳು ಸ್ವಾಭಾವಿಕವಾಗಿಯೇ ತುಂಬಾ ಸೌಮ್ಯವಾಗಿರುತ್ತವೆ.
ಇದನ್ನೂ ಓದಿ: ಟಿಎಂಸಿ ಸಂಸದೆಯ ರಹಸ್ಯ ಮದುವೆ: 65 ವರ್ಷದ ಬಿಜೆಡಿ ನಾಯಕನನ್ನು ವರಿಸಿದ ಮಹುವಾ ಮೊಯಿತ್ರಾ! Mahua Moitra
ಕನ್ಯಾ ರಾಶಿಯವರು ತಮ್ಮ ವಿಶ್ಲೇಷಣಾತ್ಮಕ ಮನಸ್ಥಿತಿ ಮತ್ತು ಸಂಶೋಧನೆಯತ್ತ ಗಮನಹರಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಆದರೆ, ಅವರು ಬಹಳ ಸೇವಾ ಮನೋಭಾವವನ್ನು ಹೊಂದಿರುತ್ತಾರೆ. ಅವರು ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಕೇಳದೆಯೇ ಅವರಿಗೆ ಸಹಾಯ ಮಾಡುವ ನೈಸರ್ಗಿಕ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಈ ಗುಣವನ್ನು ಇತರರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಆದಾಗ್ಯೂ, ಅವರು ತಮ್ಮ ಜೀವನದುದ್ದಕ್ಕೂ ತಮ್ಮ ಸಹಾಯಕ ಸ್ವಭಾವವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ.
ಪ್ರೀತಿ ಮತ್ತು ಸೌಂದರ್ಯದ ಗ್ರಹವಾದ ಶುಕ್ರನಿಂದ ಆಳಲ್ಪಡುವ ತುಲಾ ರಾಶಿಯವರು ಸಾಮರಸ್ಯ ಮತ್ತು ಸಮತೋಲನಕ್ಕೆ ಹೆಸರುವಾಸಿಯಾಗಿದ್ದಾರೆ. ಈ ರಾಶಿಯವರು ದಯೆಯ ಸಾಕಾರರೂಪ. ಅವರು ನೈಸರ್ಗಿಕವಾಗಿ ಶಾಂತಿಪ್ರಿಯರಾಗಿದ್ದು, ಎಲ್ಲರೂ ಸಹಕರಿಸುವ ಜಗತ್ತನ್ನು ಸೃಷ್ಟಿಸಲು ಶ್ರಮಿಸುತ್ತಾರೆ. ಅವರು ಯಾವಾಗಲೂ ಸಂಘರ್ಷಗಳನ್ನು ಮಧ್ಯಸ್ಥಿಕೆ ವಹಿಸಲು ಮತ್ತು ನ್ಯಾಯಯುತ ದೃಷ್ಟಿಕೋನವನ್ನು ಹೊಂದಲು ಸಿದ್ಧರಿರುತ್ತಾರೆ. ಅವರಿಗೆ ಸಮಾಜ ಸೇವೆಯಲ್ಲಿ ಬಲವಾದ ಆಸಕ್ತಿ ಇರುತ್ತದೆ. ಯಾವುದೇ ನಿರೀಕ್ಷೆಗಳಿಲ್ಲದೆ ಇತರರಿಗೆ ಸಹಾಯ ಮಾಡುವ ಸಹಜ ಸಾಮರ್ಥ್ಯ ಅವರಲ್ಲಿರುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.