ನವದೆಹಲಿ: ಚುನಾವಣಾ ಆಯೋಗವು ಎರಡನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (SIR Phase 2) ಇದೀಗ 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸುವುದಾಗಿ ತಿಳಿಸಿದೆ. ಈ ಮೊದಲು ಬಿಹಾರಕ್ಕೆ ಮಾತ್ರ ಸೀಮಿತವಾಗಿದ್ದ ಎಸ್‌ಐಆರ್ ಪ್ರಕ್ರಿಯೆ ಮೇಲ್ಕಂಡ ಪ್ರದೇಶಗಳಲ್ಲಿಯೂ ನಡೆಯಲಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಛತ್ತೀಸ್‌ಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಈ ಪಟ್ಟಿಗೆ ಸೇರಿವೆ. ಎಸ್ಐಆರ್ಗಾಗಿ ಮತದಾರರು ಸಲ್ಲಿಸಬೇಕಾದ ದಾಖಲೆಗಳ ಪಟ್ಟಿಯನ್ನು ಈಗಾಗಲೇ ಚುನಾವಣಾ ಆಯೋಗವು ಬಿಡುಗಡೆಗೊಳಿಸಿದೆ. ಈ ದಾಖಲೆಗಳನ್ನು ಹೊಂದಿರುವವರು, ಅವುಗಳನ್ನು ತಮ್ಮ ಬಿಎಲ್ಓಗೆ ತೋರಿಸಬೇಕು. ಈ ದಾಖಲೆಗಳನ್ನು ಸಲ್ಲಿಸದವರು ಮಾತ್ರ SIR ಸಿದ್ಧಪಡಿಸಿದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಹೊಂದಿರುತ್ತಾರೆ.
ಇದನ್ನೂ ಓದಿ: ರಷ್ಯಾ ಹೊಸ ಪರಮಾಣು ಕ್ಷಿಪಣಿ ಪರೀಕ್ಷಿಸುವುದನ್ನು ನಿಲ್ಲಿಸಬೇಕು: ಯುಕ್ರೇನ್ ಯುದ್ಧವನ್ನು ಕೊನೆಗೊಳಿಸಿ ಎಂದ Donald Trump
ಎಸ್‌ಐಆರ್ ಪ್ರಕ್ರಿಯೆಯ ಎರಡನೇ ಹಂತವು ನಾಳೆಯಿಂದ ಪ್ರಾರಂಭವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ. ಮುದ್ರಣ ಮತ್ತು ತರಬೇತಿ ಅ.28ರಿಂದ ನ.3, 2025 ರವರೆಗೆ ಮುಂದುವರಿಯುತ್ತದೆ. ನವೆಂಬರ್ 4ರಿಂದ ಡಿಸೆಂಬರ್ 4, 2025 ರವರೆಗೆ ಮತದಾರರ ಮಾಹಿತಿಯನ್ನು ಮನೆ ಮನೆಗೆ ತೆರಳಿ ಸಂಗ್ರಹಿಸಲಾಗುತ್ತದೆ. ಕರಡು ಮತದಾರರ ಪಟ್ಟಿಯನ್ನು ಡಿಸೆಂಬರ್ 9, 2025ರಂದು ಪ್ರಕಟಿಸಲಾಗುವುದು. ಕರಡು ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ವಿವಾದಗಳಿದ್ದಲ್ಲಿ, ಹಕ್ಕು ಮತ್ತು ಆಕ್ಷೇಪಣೆಗಳಿಗೆ ಡಿಸೆಂಬರ್ 9, 2025ರಿಂದ ಜನವರಿ 8, 2026 ರವರೆಗೆ ಗಡುವು ಇರುತ್ತದೆ. ತನಿಖೆ ಮತ್ತು ಪರಿಶೀಲನೆ ಹಂತವು ಇದೇ ಡಿ.9ರಿಂದ ಜನವರಿ 31, 2026 ರವರೆಗೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 7, 2026ರಂದು ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ,(ಏಜೆನ್ಸೀಸ್).