Zodiac Signs : ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಏನಾಗುತ್ತದೆ? ಉದ್ಯೋಗ ಸಿಗುತ್ತದೆಯೇ ಅಥವಾ ಇಲ್ಲವೇ? ಮದುವೆ ಆಗುತ್ತಾ? ಚೆನ್ನಾಗಿ ಓದಿ, ಒಳ್ಳೆಯ ಉದ್ಯೋಗ ಪಡೆದು ಜೀವನದಲ್ಲಿ ಸೆಟಲ್ ಆಗ್ತೀನಾ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ಜನರು ತೋರಿಸುತ್ತಾರೆ. ಆದರೆ, ಕೆಲವರಿಗೆ ಜ್ಯೋತಿಷ್ಯದ ಮೇಲೆ ನಂಬಿಕೆ ಇರುವುದಿಲ್ಲ. ಆದರೂ ಬಹುತೇಕ ಮಂದಿ ಜಾತಕವನ್ನು ನಂಬುತ್ತಾರೆ. ಈ ಕಾರಣಕ್ಕೆ ಇಂದಿಗೂ ಜ್ಯೋತಿಷಿಗಳಿಗೆ ತುಂಬಾ ಬೇಡಿಕೆ ಇದೆ.
ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಅವನ ಭವಿಷ್ಯದ ಜೀವನ, ವ್ಯಕ್ತಿತ್ವದ ಗುಣ ಲಕ್ಷಣಗಳು, ಆರ್ಥಿಕ ಪರಿಸ್ಥಿತಿ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಈ ಕಾರಣಕ್ಕೆ ಹುಟ್ಟಿದ ತಕ್ಷಣ ಸಮಯವನ್ನು ನೋಡಲಾಗುತ್ತದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅಂದಹಾಗೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಹುಟ್ಟಿನಿಂದಲೇ ಹೆಚ್ಚು ಬುದ್ಧಿವಂತರು ಮತ್ತು ಅತ್ಯಂತ ಪ್ರತಿಭಾನ್ವಿತರು ಎಂದು ಹೇಳಲಾಗುತ್ತದೆ. ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಕುಂಭ ರಾಶಿಯ ಅಡಿಯಲ್ಲಿ ಜನಿಸಿದ ಜನರು ಅತ್ಯಂತ ಬುದ್ಧಿವಂತ ರಾಶಿಚಕ್ರ ಚಿಹ್ನೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಯಾವುದೇ ವಿಷಯವನ್ನು ತ್ವರಿತವಾಗಿ ಕಲಿಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ಖಂಡಿತವಾಗಿಯೂ ಅನೇಕ ಕ್ಷೇತ್ರಗಳಲ್ಲಿ ಜ್ಞಾನವನ್ನು ಹೊಂದಿರುತ್ತಾರೆ. ಕೇವಲ ಪುಸ್ತಕದ ಜ್ಞಾನವನ್ನು ಮೀರಿ, ಈ ರಾಶಿಯವರು ತಮ್ಮ ವಿಶ್ಲೇಷಣಾತ್ಮಕ ಕೌಶಲ್ಯ ಮತ್ತು ಇತರರು ತಪ್ಪಿಸಿಕೊಳ್ಳುವ ವಿಷಯಗಳನ್ನು ಹೊಕ್ಕಿ ನೋಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ.
ಕನ್ಯಾರಾಶಿಯ ಚಿಹ್ನೆಯಡಿಯಲ್ಲಿ ಜನಿಸಿದ ಜನರು ಸಾಮಾನ್ಯವಾಗಿ ಎಲ್ಲದರಲ್ಲೂ ಪರಿಪೂರ್ಣತೆ ಮತ್ತು ಅಚ್ಚುಕಟ್ಟನ್ನು ನಿರೀಕ್ಷಿಸುತ್ತಾರೆ. ಅವರ ಬುದ್ಧಿವಂತಿಕೆಯು ಇತರರನ್ನು ಬೆರಗುಗೊಳಿಸುತ್ತದೆ. ಅವರು ಅರ್ಥಮಾಡಿಕೊಳ್ಳದ ವಿಷಯಗಳನ್ನು ಎಂದಿಗೂ ನಂಬುವುದಿಲ್ಲ. ಅವರು ಯಾವುದೇ ವಿಷಯವನ್ನು ಸಂಶೋಧನೆ ಮತ್ತು ತಿಳಿದ ನಂತರವೇ ನಂಬುವ ಅಭ್ಯಾಸವನ್ನು ಹೊಂದಿರುತ್ತಾರೆ. ಅವರು ಯಾವುದನ್ನೂ ಸುಲಭವಾಗಿ ಮರೆಯುವುದಿಲ್ಲ ಮತ್ತು ಹಲವು ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಈಗ ನಡೆಯುತ್ತಿರುವಂತೆ ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ.
ವೃಶ್ಚಿಕ ರಾಶಿಯಲ್ಲಿ ಜನಿಸಿದ ಜನರು ಜನರನ್ನು ಓದುವುದರಲ್ಲಿ ಪರಿಣಿತರು. ಅವರು ಅತ್ಯಂತ ಕಷ್ಟಕರವಾದ ಸಮಸ್ಯೆಗಳನ್ನು ಸಹ ಸುಲಭವಾಗಿ ಪರಿಹರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ಎಲ್ಲಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಜ್ಞಾನವನ್ನು ಹೊಂದಿರುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.