Prabhas Spirit: ತೆಲುಗು ನಿರ್ದೇಶಕ ಸಂದೀಪ್ ವಂಗಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಡಾರ್ಲಿಂಗ್ ಪ್ರಭಾಸ್ ಅಭಿನಯಿಸುತ್ತಿರುವ ‘ಸ್ಪಿರಿಟ್’ ಚಿತ್ರದಿಂದ ಇದೀಗ ನಟಿ ದೀಪಿಕಾ ಪಡುಕೋಣೆ ಹೊರನಡೆದಿದ್ದಾರೆ. ಈ ಸುದ್ದಿ ಅಧಿಕೃತವಾಗಿ ಹೊರಬಿದ್ದಿದ್ದು, ದುಬಾರಿ ಮೊತ್ತದ ಸಂಭಾವನೆ ಮತ್ತು ಚಿತ್ರದ ಲಾಭದ ಪಾಲು ಕೇಳಿದ ಹಿನ್ನೆಲೆ ದೀಪಿಕಾರನ್ನು ಚಿತ್ರದಿಂದ ತೆಗೆದುಹಾಕಲು ಸಂದೀಪ್ ಕಠಿಣ ನಿರ್ಧಾರ ಕೈಗೊಂಡಿರುವುದಾಗಿ ವರದಿಗಳು ಸೂಚಿಸಿವೆ.
ಇನ್ನೇನು ಕೆಲವೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸಲು ಸಜ್ಜಾಗಿದ್ದ ನಿರ್ದೇಶಕರಿಗೆ ದೀಪಿಕಾ ಅವರ ಹಲವು ಷರತ್ತುಗಳು ಅತೀವ ಬೇಸರ ತಂದಿದ್ದು, ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದ ಬಾಲಿವುಡ್ ಬೆಡಗಿಗೆ ಗೇಟ್ಪಾಸ್ ಕೊಟ್ಟಿದ್ದಾರೆ. ತಾನು ಹಾಕಿದ್ದ ಡಿಮಾಂಡ್ಗಳನ್ನು ತಿರಸ್ಕರಿಸಿದ ಹಿನ್ನೆಲೆ ದೀಪಿಕಾ ಕೂಡ ಬೇಸರಗೊಂಡಿದ್ದು, ದಿಢೀರ್ ಎಂಬಂತೆ ಚಿತ್ರತಂಡದಿಂದ ಹೊರನಡೆದಿದ್ದಾರೆ.
'ಸ್ಪಿರಿಟ್'ನಿಂದ ದೀಪಿಕಾ ಪಡುಕೋಣೆ ಹೊರನಡೆದಿದ್ದೇ ತಡ ಅವರ ಪಾತ್ರದಲ್ಲಿ ಇನ್ಯಾವ ಸ್ಟಾರ್ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಟಾಲಿವುಡ್ ಮತ್ತು ಬಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡಿವೆ. ಒಂದೆಡೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರ ಹೆಸರು ಮುನ್ನೆಲೆಗೆ ಬಂದರೆ, ಮತ್ತೊಂದೆಡೆ, 'ಸೀತಾ ರಾಮಂ' ಖ್ಯಾತಿಯ ಮೃಣಾಲ್ ಠಾಕೂರ್ ಅವರ ಹೆಸರು ಕೇಳಿಬಂದಿದೆ. ಈ ಇಬ್ಬರಲ್ಲಿ ಯಾರು ದೀಪಿಕಾ ಪಾತ್ರಕ್ಕೆ ಆಯ್ಕೆ ಆಗಲಿದ್ದಾರೆ ಎಂಬ ಪ್ರಶ್ನೆ ಸದ್ಯ ಸಿನಿಪ್ರಿಯರಲ್ಲಿ ಕಾಡತೊಡಗಿದೆ.
ಇದನ್ನೂ ಓದಿ: ಅಪ್ರಾಪ್ತರ ಸಹಾಯದಿಂದ ಪತಿಯನ್ನೇ ಚಟ್ಟಕ್ಕೇರಿಸಿದ ಪ್ರಾಂಶುಪಾಲೆ! ಪೆಟ್ರೋಲ್ ಸುರಿದು ಗಂಡನ ದೇಹಕ್ಕೆ ಬೆಂಕಿ | Murder Case
ಈ ಹಿಂದೆ 'ಸಾಹೋ' ಚಿತ್ರದಲ್ಲಿ ಪ್ರಭಾಸ್ ಜೊತೆಗೆ ತೆರೆಹಂಚಿಕೊಂಡಿರುವ ಅನುಭವ ಶ್ರದ್ಧಾಗಿದೆ. ಇವರಿಬ್ಬರ ಜೋಡಿ ಬಾಲಿವುಡ್ ಮಂದಿಗೂ ಪರಿಚಿತ. ಹೀಗಿರುವಾಗ ಪ್ರಭಾಸ್ಗೆ ಶ್ರದ್ಧಾ ಕಪೂರ್ ಅವರೇ ಫಿಕ್ಸ್ ಎಂಬ ಮಾತುಗಳು ಸಿನಿ ವಲಯಗಳಲ್ಲಿ ಕೇಳಿಬಂದಿವೆ. ಈ ಮಧ್ಯೆ ಸೌತ್ ಬ್ಯೂಟಿ ಮೃಣಾಲ್ಗೂ ಹೆಚ್ಚಿನ ಮತಗಳು ಸಿಕ್ಕಿದ್ದು, ಪ್ರಭಾಸ್ ಜೊತೆಗೆ 'ಸೀತಾ ರಾಮಂ' ನಟಿಯನ್ನು ನೋಡುವ ತವಕ ಅಭಿಮಾನಿಗಳದ್ದಾಗಿದೆ. ಒಟ್ಟಾರೆ, ಇವರಿಬ್ಬರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).