ನ್ಯೂಸ್

ವಾಸ್ತು ಪ್ರಕಾರ ತುಳಸಿ ಬೆಳೆಸಿ; ನೆಮ್ಮದಿ,ಸಂಪತ್ತು ಗಳಿಸಿ

ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಬಡವ-ಶ್ರೀಮಂತರೆಂಬ ಭೇದವಿಲ್ಲದೆ ಪ್ರತಿಯೊಬ್ಬರ ಮನೆಯಲ್ಲೂ ತುಳಸಿಗಿಡವನ್ನು ಪೂಜಿಸುವ ಪದ್ಧತಿ ಇದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಮನೆಯ ಮುಂದಿನ ಅಂಗಳದ ನಡುವೆ ಪ್ರತ್ಯೇಕ ಕಟ್ಟೆಯನ್ನು ಕಟ್ಟಿ ತುಳಸಿಗಿಡವನ್ನು ನೆಟ್ಟು ಬೆಳೆಸುತ್ತಿದ್ದರು. ತುಳಸಿಗಿಡ ಧಾರ್ಮಿಕವಾಗಿ, ವೈದ್ಯಕೀಯವಾಗಿ ಹಾಗೂ ವಾಸ್ತು ಹಿನ್ನಲೆಯಲ್ಲಿ ಬಹಳ ಮಹತ್ವ ಪಡೆದ ಸಸ್ಯ.

ಕಾಲ ಬದಲಾದಂತೆ, ತುಳಸಿಕಟ್ಟೆಯ ಆಕೃತಿ, ಗಾತ್ರ, ಸ್ಥಳ ಬದಲಾವಣೆಯಾಗಿವೆ. ಪಟ್ಟಣ ಪ್ರದೇಶಗಳಲ್ಲಿ ನಾಗರೀಕತೆ ಬೆಳೆದಂತೆ ಮನೆಗಳ ಸ್ವರೂಪ ಬದಲಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಅಂಗಳದ ಪರಿಕಲ್ಪನೆಯೇ ಇಲ್ಲದಿರುವುದರಿಂದ ತುಳಸಿಕಟ್ಟೆ, ತುಳಸಿಕುಂಡವಾಗಿ ಮಾರ್ಪಟ್ಟಿದೆ. ಅದೇನೇ ಇದ್ದರೂ ವಾಸ್ತುಪ್ರಕಾರ ತುಳಸಿಗಿಡವನ್ನು ಬೆಳೆಸಬೇಕಿರುವುದು ಮುಖ್ಯ.

ತುಳಸಿಗಿಡವನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಬೆಳೆಸಬೇಕು ಎನ್ನುತ್ತೆ ವಾಸ್ತುಶಾಸ. ಉತ್ತರ ದಿಕ್ಕು ಕುಬೇರನ ಸ್ಥಾನವಾದ್ದರಿಂದ ಅಲ್ಲಿ ತುಳಸಿಗಿಡವಿದ್ದರೆ ಆ ಮನೆಗೆ ಲಕ್ಷ್ಮೀ ಕಟಾಕ್ಷವಾಗುತ್ತದೆ ಎಂಬ ಮಾತಿದೆ.

ಅಪಾರ್ಟ್‌ಮೆಂಟ್‌ಗಳಲ್ಲಿ ತುಳಸಿಗಿಡದ ಕುಂಡವನ್ನು ಬಾಲ್ಕನಿಯಲ್ಲೇ ಇಡಬೇಕಾದ ಅನಿವಾರ್ಯತೆ ಇರುತ್ತದೆ. ಆದ್ದರಿಂದ ವಾಸ್ತುಪ್ರಕಾರ ದಿಕ್ಕನ್ನು ತಿಳಿದುಕೊಂಡು ಇಟ್ಟರೆ ಮಾತ್ರ ಅದರ ಫಲ ಆ ಮನೆಗೆ ದೊರೆಯಲು ಸಾಧ್ಯ. ದೇವರ ದಿಕ್ಕು ಎನ್ನುವ ಈಶಾನ್ಯದಲ್ಲಿ ತುಳಸಿಗಿಡವನ್ನು ಇಡಬಹುದು. ಇದರಿಂದ ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಲಿದೆ. ಆದರೆ ಯಾವುದೇ ಕಾರಣಕ್ಕೂ ದಕ್ಷಿಣ ಮತ್ತು ಅಗ್ನಿಮೂಲೆಯಲ್ಲಿ ತುಳಸಿಗಿಡವನ್ನು ನೆಡಬಾರದು. ಈ ದಿಕ್ಕಿನಲ್ಲಿಟ್ಟರೆ ಬೆರಳೆಣಿಕೆಯ ದಿನಗಳಲ್ಲೇ ತುಳಸಿಗಿಡ ಒಣಗಿ ಹೋಗುತ್ತದೆ. ಮನೆಯಲ್ಲಿ ತುಳಸಿಗಿಡ ಒಣಗುವುದು ಶ್ರೇಯಸ್ಕರವಲ್ಲ. ಅನುಭವಿಗಳ ಪ್ರಕಾರ ಮನೆಯಲ್ಲಿ ವಾಸ್ತುಪ್ರಕಾರ ಸಮೃದ್ಧವಾಗಿ ಬೆಳೆದ ತುಳಸಿಗಿಡವಿದ್ದರೆ ಆ ಮನೆಗೆ ವಾಮಾಚಾರ ಮತ್ತಿತರ ಯಾವುದೇ ಋಣಾತ್ಮಕ ಶಕ್ತಿಯ ಪರಿಣಾಮ ಉಂಟಾಗುವುದಿಲ್ಲ.

ತುಳಸಿಗಿಡಕ್ಕೆ ನಿತ್ಯ ನೀರು ಹಾಕಿ ಪೂಜಿಸುವುದರಿಂದ ಮನೆಯ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಕೌಟಂಬಿಕ ಕಲಹಗಳಿದ್ದರೆ ನಿವಾರಣೆಯಾಗಿ ದಾಂಪತ್ಯದಲ್ಲಿ ಸಾಮರಸ್ಯ ಮೂಡುತ್ತದೆ. ತುಳಸಿಯನ್ನು ಮಹಾವಿಷ್ಣುವಿನ ಅರ್ಧಾಂಗಿ ಎಂದು ಶಾಸ್ತ್ರ-ಪುರಾಣಗಳು ಉಲ್ಲೇಖಿಸಿರುವುದರಿಂದ ತುಳಸಿ ಪೂಜೆ ನಡೆಯುವ ಸ್ಥಳದಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ. ಈ ಕಾರಣದಿಂದಲೇ ವರ್ಷಕ್ಕೊಮ್ಮೆ ಕಾರ್ತೀಕ ಮಾಸದಲ್ಲಿ ಕೃಷ್ಣನೊಂದಿಗೆ ತುಳಸಿ ಕಲ್ಯಾಣವನ್ನು ಮಾಡಲಾಗುತ್ತದೆ.

ಮಾರುಕಟ್ಟೆಯಲ್ಲಿ ವಿವಿಧ ಆಕೃತಿಯ ವೃಂದಾವನ ಲಭ್ಯ

ತುಳಸಿಕಟ್ಟೆಗೆ ಧಾರ್ಮಿಕ, ವಾಸ್ತು ಹಿನ್ನಲೆಯ ಜೊತೆಗೆ ಇತ್ತೀಚಿನ ದಿನಗಳಲ್ಲಿ ಮನೆಯ ಅಲಂಕಾರಿಕ ವಿಷಯವೂ ಆಗಿದೆ. ಪುರಾತನ ಕಾಲದಲ್ಲಿ ಮಣ್ಣು, ಕಲ್ಲಿನ ತುಳಸಿಕಟ್ಟೆಗಳನ್ನು ನಿರ್ಮಿಸಲಾಗುತ್ತಿತ್ತು. ನಂತರ ಇಟ್ಟಿಗೆ, ಸಿಮೆಂಟ್‌ನ ಕಟ್ಟೆಗಳು ಬಳಕೆಗೆ ಬಂದವು. ಇತ್ತೀಚಿನ ದಿನಗಳಲ್ಲಿ ಮನೆಯ ಅಲಂಕಾರಕ್ಕೆ ಅನುಗುಣವಾಗಿ ಪಿಂಗಾಣಿ, ಅಮೃತಶಿಲೆ, ಕೃಷ್ಣಶಿಲೆ ಹೀಗೆ ರೆಡಿಮೇಟ್ ತುಳಸಿ ವೃಂದಾವನಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಮನೆಯ ಮುಂದೆ ಶಾಶ್ವತ ತುಳಸಿ ಕಟ್ಟೆಯನ್ನು ನಿರ್ಮಿಸಲು ಅವಕಾಶ ಇಲ್ಲದಿದ್ದವರು, ಚಿಕ್ಕ ಸಂಚಾರಿ ತುಳಸಿಕಟ್ಟೆಗಳನ್ನು ಪೂಜಾ ಕೊಠಡಿಯಲ್ಲೇ ಇಟ್ಟುಕೊಳ್ಳಬಹುದು. ಕೆಲ ಪ್ರತಿಷ್ಠಿತ ವ್ಯಕ್ತಿಗಳ ಅವಶ್ಯಕತೆಗನುಗುಣವಾಗಿ ಬೆಳ್ಳೆ ಮತ್ತಿತರ ಲೋಹದ ವೃಂದಾವನಗಳು ಕೂಡಾ ಸಿಗುತ್ತಿವೆ.

ಔಷಧೀಯ ಗುಣಗಳುಳ್ಳ ಸಸ್ಯ

ತುಳಸಿ ಕೇವಲ ಧಾರ್ಮಿಕ ಮಹತ್ವವನ್ನು ಹೊಂದಿರದೇ, ಉತ್ತಮ ಔಷಧೀಯ ಗುಣವನ್ನು ಒಳಗೊಂಡಿದೆ. ತುಳಸಿಗಿಡ ಮನೆಯ ಮನೆಯ ಆವರಣದಲ್ಲಿರುವುದರಿಂದ ಸುತ್ತಮುತ್ತಲಿನ ವಿಷಾನಿಲವನ್ನು ನಿವಾರಿಸಿ ಶುದ್ಧ ಆಮ್ಲಜನಕವನ್ನು ಹೊರ ಸೂಸುತ್ತದೆ.

ಕಲುಷಿತ ವಾತಾವರಣದಿಂದ ಬರುವ ಶೀತ, ಕೆಮ್ಮು, ಜ್ವರ, ಅಸ್ತಮಾ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ತುಳಸಿ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ತುಳಸಿ ನೋಡುವುದಕ್ಕೆ ಚಿಕ್ಕ ಗಿಡವಾಗಿ ಕಂಡರೂ, ದೊಡ್ಡ ಮರಗಳಂತೆ ಆಮ್ಲಜನಕವನ್ನು ಹೊರ ಸೂಸುವ ಶಕ್ತಿ ಹೊಂದಿದೆ.