ಪ್ರಾರಂಭಿಕ ಚಿಹ್ನೆಗಳು: ಆಹಾರವು ಸರಿಯಾಗಿ ಜೀರ್ಣವಾಗದಿರುವುದು, ಶರೀರ ದೌರ್ಬಲ್ಯ, ಕರುಳುಗಳಲ್ಲಿ ಶಬ್ದ ಉಂಟಾಗುವುದು, ಹೆಚ್ಚು ತೇಗು ಬರುವುದು, ಶರೀರವು ಕ್ಷೀಣಿಸುವುದು, ತೊಡೆಯಲ್ಲಿ ಸುಸ್ತು, ಅಲ್ಪಪ್ರಮಾಣದ ಮಲ ವಿಸರ್ಜನೆ, ಏನೋ ತೊಂದರೆ ಆಗುತ್ತಿದೆ ಎಂಬ ಸಂಶಯವು ಮೂಲವ್ಯಾಧಿಯ ಮುನ್ಸೂಚನೆಯಾಗಿ ಹುಟ್ಟಿಕೊಳ್ಳುತ್ತದೆ. ಗುದದ್ವಾರದ ಸಮೀಪ, ಅದರ ಒಳಗೆ ಅಥವಾ ಹೊರಭಾಗದಲ್ಲಿ ಮಾಂಸಾಂಕುರದ ಉತ್ಪತ್ತಿಯಾಗುವುದೇ ಮೂಲವ್ಯಾಧಿಯ ಪ್ರಮುಖ ಲಕ್ಷಣವಾಗಿದ್ದು ಇದರ ಕಾರಣ ಹಾಗೂ ಲಕ್ಷಣಗಳನ್ನು ಐದು ವಿಭಾಗಗಳಲ್ಲಿ ವಿಮಶಿಸಲಾಗಿದೆ.
ವಾತಜ ಮೂಲವ್ಯಾಧಿ: ಒಗರು, ಖಾರ, ಕಹಿ, ಒಣ, ಶೀತಲ, ಜೀರ್ಣಕ್ಕೆ ಲಘುವಾದ ಹಾಗೂ ಕಡಿಮೆ ಪ್ರಮಾಣದ ಆಹಾರ ಸೇವನೆಯಿಂದ, ಉಪವಾಸ ಮಾಡುವುದರಿಂದ, ಶೀತಕಾಲ ಹಾಗೂ ಶೀತಲ ಪ್ರದೇಶಗಳಿಂದ, ತೀಕ್ಷ್ಣವಾದ ಮದ್ಯಪಾನ, ಅತಿ ವ್ಯಾಯಾಮ ಹಾಗೂ ಲೈಂಗಿಕಕ್ರಿಯೆಗಳಿಂದ ಸಾಸಿವೆ, ಮಸೂರ, ಉದ್ದು, ಹೆಸರು, ಬಾರ್ಲಿ ಅಥವಾ ಬಟಾಣಿಯ ಗಾತ್ರದ ಅಂಕುರವು ಉತ್ಪತ್ತಿಯಾಗುತ್ತದೆ. ಮೊಳಕೆಯು ಒಣಗಿದಂತಿದ್ದು ಚಿಮುಗುಟ್ಟುತ್ತದೆ. ಕೆಂಪು ಅಥವಾ ಶ್ಯಾಮಲ ಬಣ್ಣ, ಗಟ್ಟಿ, ವಕ್ರ, ದೊರಗಾಗಿದ್ದು, ತುದಿ ಚೂಪಾಗಿ ಬಿರುಕುಗಳಿದ್ದು ತೊಂಡೆಕಾಯಿ, ಖರ್ಜೂರ, ಹತ್ತಿಯ ಫಲವನ್ನು ಹೋಲುತ್ತದೆ. ತಲೆ, ಪಕ್ಕೆ, ಸೊಂಟ ಮತ್ತು ತೊಡೆಗಳ ನೋವು ಕಾಣಿಸಿಕೊಳ್ಳುತ್ತದೆ. ತೀವ್ರವಾಗಿದ್ದರೆ ಕೆಮು, ದಮ್ಮು, ಕಿವಿ ನಿರಂತರ ಗುಯ್ಗುಡುವುದು, ತಲೆಸುತ್ತು, ಜೀರ್ಣಶಕ್ತಿ ಕಡಿಮೆಯಾಗುವುದೂ ಕಾಣಿಸಿಕೊಳ್ಳಬಹುದು. ಮಲವು ಗಂಟುಗಂಟಾಗಿ ಅಲ್ಪಪ್ರಮಾಣದಲ್ಲಿದ್ದು ಸಶಬ್ದವಾಗಿ ಸ್ವಲ್ಪ ವೇದನೆ ಮತ್ತು ಲೋಳೆಯೊಂದಿಗೆ, ಸರಿಯಾಗಿ ವಿಸರ್ಜನೆ ಆಗದಿರುವಂತಾಗುತ್ತದೆ.
ಪಿತ್ತಜ ಮೂಲವ್ಯಾಧಿ: ಖಾರ, ಹುಳಿ, ಉಪ್ಪು, ಕ್ಷಾರ ಪದಾರ್ಥಗಳ ಅತಿಸೇವನೆ, ಬೆಂಕಿ, ಬಿಸಿಲುಗಳ ಪ್ರಭಾವ, ಕೋಪ, ಮದ್ಯಪಾನ, ಹೊಟ್ಟೆ ಉರಿಯುವ ಉಷ್ಣಕರವಾದ ಆಹಾರ, ಪಾನೀಯ ಹಾಗೂ ಔಷಧಗಳ ಸೇವನೆ, ಉಷ್ಣಪ್ರದೇಶ ಹಾಗೂ ಉಷ್ಣಕಾಲಗಳು ಪಿತ್ತಜ ಮೂಲವ್ಯಾಧಿಯನ್ನು ಉಂಟುಮಾಡುತ್ತದೆ. ಕಾಡು ಶುಂಠಿ, ಜಗಳಗಂಟಿ ಫಲ, ಕರಂಡೆ/ಹುಳಿಎಲಚಿ, ಗುಲಗಂಜಿ, ತೊಂಡೆಕಾಯಿ, ಎಲಚಿಹಣ್ಣು, ಅತ್ತಿ, ಖರ್ಜೂರ, ನೇರಳೆಹಣ್ಣು, ಮೊದಲಾದ ಆಕಾರದಲ್ಲಿರುತ್ತದೆ. ನೀಲ ಬಣ್ಣದ ಮುಖ, ಕೆಂಪು, ಹಳದಿ, ಕಪ್ಪು ಬಣ್ಣ, ಮೃದು, ಚಿಕ್ಕದು, ತೆಳುವಾಗಿದ್ದು, ರಕ್ತಸ್ರಾವ, ಕೆಟ್ಟವಾಸನೆಗಳಿಂದ ಕೂಡಿದ್ದು ಗಿಳಿಯ ನಾಲಿಗೆ, ಯಕೃತ್ತಿನ ಭಾಗ, ಜಿಗಣೆಯ ಮುಖವನ್ನು ಹೋಲುತ್ತದೆ. ಶರೀರದಲ್ಲಿ ಉರಿ, ಜ್ವರ, ಬೆವರು, ಬಾಯಾರಿಕೆ, ಬಾಯಿರುಚಿ ಇಲ್ಲದಿರುವುದು, ಮೊಳಕೆಯು ಪಾಕವಾಗಿರುವುದು, ಎಚ್ಚರ ತಪ್ಪುವುದು, ಮನಸ್ಸು ವಿಚಲಿತವಾಗುವುದು, ಮಲವು ಬಿಸಿಯಾಗಿದ್ದು ತೆಳ್ಳಗೆ, ನೀಲ, ಹಳದಿ ಮಿಶ್ರಿತ ಬಣ್ಣ, ರಕ್ತ ಹಾಗೂ ಅಜೀರ್ಣವಾದ ಆಹಾರದಿಂದ ಒಡಗೂಡಿ ಪ್ರವೃತ್ತಿಯಾಗುವುದು.
ಕಫಜ ಮೂಲವ್ಯಾಧಿ: ಜಿಡ್ಡುಯುಕ್ತ, ಶೀತಲ, ಸಿಹಿ, ಉಪ್ಪು, ಆಮ್ಲ, ಜೀರ್ಣಕ್ಕೆ ಗುರುತರ ಆಹಾರ ಸೇವಿಸುವುದರಿಂದ, ವ್ಯಾಯಾಮ ಮಾಡದೆ ಹಗಲು ನಿದ್ರೆ, ಸುಖಾಸೀನರಾಗಿರುವುದು, ಬೆಳಗಿನ ಗಾಳಿ ಸೇವನೆ, ಶೀತಲ ದೇಶ ಹಾಗೂ ಕಾಲಗಳು ಕಫಜ ಮೂಲವ್ಯಾಧಿಗೆ ಕಾರಣವಾಗುತ್ತವೆ. ಗೋವಿನ ಸ್ತನದ ಆಕಾರ, ಅಂಗುಷ್ಠ, ಜಿಂಕೆಯ ಕೊಂಬು, ಹುಂಜ, ನವಿಲು, ಗಿಳಿಯ ನಾಲಿಗೆಯಂತೆ, ಅರಳದಿರುವ ತಾವರೆ ಹೂವನ್ನು ಹೋಲುತ್ತದೆ. ಬುಡದಲ್ಲಿ ಅಗಲವಾಗಿದ್ದು, ದೃಢವಾಗಿ, ಅಲ್ಪ ನೋವು, ಉದ್ದನೆಯ ದೊಡ್ಡ ಗಾತ್ರ ಹೊಂದಿದ್ದು ವೃತ್ತಾಕಾರ, ಬಿಳಿಬಣ್ಣ, ಜಿಡ್ಡುಯುಕ್ತವಾಗಿದ್ದು, ಅಲುಗಾಡದೆ ಭಾರ ಹಾಗೂ ಸ್ಥಿರವಾಗಿರುತ್ತದೆ. ನಿಧಾನವಾಗಿ ಬೆಳೆಯುತ್ತಾ ನವೆಯಿಂದ ಕೂಡಿರುತ್ತದೆ. ಕರಿಉಪ್ಪಿಗಿಡದ ಕಾಯಿ, ಹಲಸಿನ ಬೇಳೆ, ಬಿದಿರಿನ ಎಳೆಮೊಗ್ಗುಗಳಿಗೆ ಹೋಲುತ್ತದೆ. ಮೂತ್ರಾಶಯ, ಹೊಕ್ಕುಳು, ಜನನಾಂಗಗಳಲ್ಲಿ ವೇದನೆ ಉಂಟುಮಾಡುತ್ತದೆ. ಉಸಿರಾಟದ ತೊಂದರೆ, ಕೆಮ್ಮು, ವಾಕರಿಕೆ, ಅತಿಯಾದ ಜೊಲ್ಲುಸ್ರಾವ, ಆಗಾಗ ಕಷ್ಟಕರ ಮೂತ್ರಸ್ರಾವ, ತಲೆಭಾರ, ಜ್ವರ, ನಪುಂಸಕತೆ, ಹಸಿವಿಲ್ಲದಿರುವುದು, ವಾಂತಿ, ಭೇದಿ ಮೊದಲಾದ ಲಕ್ಷಣಗಳೂ ಕಾಣಿಸಿಕೊಳ್ಳುವುದಿದೆ. ಮಲವು ರ್ಚಬಿ, ರಕ್ತಯುಕ್ತವಾಗಿದ್ದು ವಿಸರ್ಜನೆಯು ಕಷ್ಟದಾಯಕವಾಗಿರುತ್ತದೆ. ಮೇಲಿನ ಮೂರೂ ಮೂಲವ್ಯಾಧಿಗಳ ಸಮ್ಮಿಶ್ರ ಲಕ್ಷಣಗಳಿಂದ ಕೂಡಿರುವುದೇ ತ್ರಿದೋಷಜ ಮೂಲವ್ಯಾಧಿ. ರಕ್ತಜ ಮೂಲವ್ಯಾಧಿಯ ಬಗ್ಗೆಯೂ ತಿಳಿದುಕೊಳ್ಳಬೇಕಿದೆ.