ಮೈಸೂರು: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ, ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನೇ ಹತ್ಯೆಗೈದಿರುವ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೂಟಗಳ್ಳಿ ನಿವಾಸಿ ಮಂಜು ಕೊಲೆಯಾದ ದುರ್ದೈವಿ. ಸದ್ಯ ಆರೋಪಿ ಪತ್ನಿ ಲಿಖಿತ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜು 12 ವರ್ಷಗಳ ಹಿಂದೆ ಲಿಖಿತ ಎಂಬಾಕೆಯೊಂದಿಗೆ ಮದುವೆಯಾಗಿದ್ದ. ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹೀಗಿದ್ದೂ ಲಿಖಿತಾ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಳು. ಈ ಹಿಂದೆ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಈ ವೇಳೆ ರಾಜಿ ಪಂಚಾಯಿತಿಯ ಮೂಲಕ ಮಂಜು ಪತ್ನಿಯನ್ನು ಮನೆಗೆ ಸೇರಿಸಿಕೊಂಡಿದ್ದ.
ಪತಿ ಮಂಜು ಪತ್ನಿಯ ನಡವಳಿಕೆ ಬಗ್ಗೆ ಅಗಾಗ್ಗೆ ಪ್ರಶ್ನೆ ಮಾಡುತ್ತಿದ್ದ ಎನ್ನಲಾಗಿದೆ. ಇದೀಗ ಲಿಖಿತಾ ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನೇ ಕೊಲೆ ಮಾಡಿದ್ದಾಳೆ. ತಡರಾತ್ರಿ ಗಂಡನ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ಆರೋಪಿ ಲಿಖಿತಾಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.