ನ್ಯೂಸ್

ವಕ್ಫ್ ಕಾಯ್ದೆ ತಿದ್ದುಪಡಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ; ಅಸಾದುದ್ದೀನ್ ಓವೈಸಿ

ಹೈದರಾಬಾದ್​​​​: ವಕ್ಫ್ ಮಂಡಳಿಯ ಅಧಿಕಾರವನ್ನು ಕಡಿತಗೊಳಿಸಲು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಕೇಂದ್ರವು ಶೀಘ್ರದಲ್ಲೆ ಸಂಸತ್ತಿನಲ್ಲಿ ಮಂಡಿಸಬಹುದು ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿಯವರ ಸರ್ಕಾರ ವಕ್ಫ್ ಮಂಡಳಿಯ ಅಧಿಕಾರವನ್ನು ಕಿತ್ತುಕೊಳ್ಳಲು ಬಯಸುತ್ತಿದೆ. ಇದು ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.

ಬಿಜೆಪಿ ಯಾವಾಗಲೂ ವಕ್ಫ್ ಬೋರ್ಡ್ ವಿರುದ್ಧವಾಗಿದೆ. ಬಿಜೆಪಿ ವಕ್ಫ್ ಬೋರ್ಡ್​​​ ಅನ್ನು ರದ್ದುಪಡಿಸಲು ಬಯಸುತ್ತದೆ. ಕೇಂದ್ರ ಸರ್ಕಾರವೇ ಈ ಮಸೂದೆಯ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದೆ. ಆದರೆ ಸರ್ಕಾರವು ಈ ಮಾಹಿತಿಯನ್ನು ಮೊದಲು ಸಂಸತ್ತಿಗೆ ನೀಡಬೇಕು. ವಕ್ಫ್ ಬೋರ್ಡ್​​ ಅನ್ನು ಬಿಜೆಪಿಗೆ ನೀಡಿದರೆ ಅದರ ಫಲಿತಾಂಶ ಏನಾಗುತ್ತದೆ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ ಎಂದು ಟೀಕಿಸಿದರು.

ಬಿಜೆಪಿಯು ಮೊದಲಿನಿಂದಲೂ ಈ ಮಂಡಳಿಗಳು ಮತ್ತು ವಕ್ಫ್ ಆಸ್ತಿಗಳ ವಿರುದ್ಧವಾಗಿದೆ. ಅವರು ಹಿಂದುತ್ವದ ಅಜೆಂಡಾವನ್ನು ಹೊಂದಿದ್ದಾರೆ. ಈಗ ನೀವು ವಕ್ಫ್ ಮಂಡಳಿಯ ಸ್ಥಾಪನೆ ಮತ್ತು ಸಂಯೋಜನೆಗೆ ತಿದ್ದುಪಡಿ ಮಾಡಿದರೆ, ನಂತರ ಆಡಳಿತಾತ್ಮಕ ಅವ್ಯವಸ್ಥೆ, ಸ್ವಾಯತ್ತತೆ ನಷ್ಟವಾಗುತ್ತದೆ. ವಕ್ಫ್ ಬೋರ್ಡ್ ಮೇಲೆ ಸರ್ಕಾರದ ನಿಯಂತ್ರಣ ಹೆಚ್ಚಾದರೆ ವಕ್ಫ್ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಕೃತ್ಯಕ್ಕೆ ನಿಜವಾದ ಕಾರಣ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವುದು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಮೊದಲಿನಿಂದಲೂ ವಕ್ಫ್ ಆಸ್ತಿ ಕಿತ್ತುಕೊಳ್ಳುವ ಉದ್ದೇಶ ಹೊಂದಿದ್ದವು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

2023 ಡಿಸೆಂಬರ್ 8ರಂದು, ವಕ್ಫ್ ಬೋರ್ಡ್ (ಆಕ್ಟ್) ಆಕ್ಟ್ 1995 ಅನ್ನು ರದ್ದುಗೊಳಿಸುವ ಖಾಸಗಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಯುಪಿಯ ಬಿಜೆಪಿ ಸಂಸದ ಹರನಾಥ್ ಸಿಂಗ್ ಯಾದವ್ ಅವರು ಈ ಮಸೂದೆಯನ್ನು ಮಂಡಿಸಿದ್ದಾರೆ. ರಾಜ್ಯಸಭೆಯಲ್ಲಿ ಈ ವಿಧೇಯಕವನ್ನು ಮಂಡಿಸುವಾಗ ವಾಗ್ವಾದ ನಡೆದು ಸದನದಲ್ಲಿ ಮಸೂದೆಯನ್ನು ಮಂಡಿಸಲು ಮತದಾನ ನಡೆಯಿತು. ನಂತರ 53 ಸದಸ್ಯರು ಮಸೂದೆಯನ್ನು ಮಂಡಿಸುವುದನ್ನು ಬೆಂಬಲಿಸಿದರೆ, 32 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು.(ಏಜೆನ್ಸೀಸ್​)