Radhika Yadav: ತಂದೆಯಿಂದಲೇ ಗುಂಡೇಟಿಗೆ ಬಲಿಯಾದ ರಾಷ್ಟ್ರ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಪ್ರಕರಣ ಸದ್ಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಒಬ್ಬ ತಂದೆಯೇ ಸಾಧನೆಯ ಹಾದಿಯಲ್ಲಿದ್ದ ಮಗಳನ್ನು ಗುಂಡಿಟ್ಟು ಕೊಲ್ಲುತ್ತಾರೆ ಎಂಬ ಸಂಗತಿ ನಿಜಕ್ಕೂ ಅರಗಿಸಿಕೊಳ್ಳಲು ಕಷ್ಟಸಾಧ್ಯ. ಈ ಪ್ರಕರಣ ದೇಶದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಹೆತ್ತ ಮಗಳನ್ನೇ ಕೊಲ್ಲುವಷ್ಟು ಸೇಡು ಆ ತಂದೆಗೆ ಏನಿತ್ತು ಎಂಬ ಪ್ರಶ್ನೆಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ನಿಗೂಢ ಕೊಲೆ ಹಿಂದೆ ಯಾವುದೋ ಕಾಣದ ಕೈ ಇರಬಹುದು ಎಂಬ ಶಂಕೆಗಳೂ ವ್ಯಕ್ತವಾಗಿವೆ.
ಇದನ್ನೂ ಓದಿ: ಮುಂಬೈಗೆ 5 ಮಾಡೆಲ್ Y ವಾಹನಗಳ ಎಂಟ್ರಿ; ಜುಲೈ 15ಕ್ಕೆ ಭಾರತದಲ್ಲಿ ‘ಟೆಸ್ಲಾ’ ಹೊಸ ಮಳಿಗೆ ಓಪನ್ | tesla
ರಾಧಿಕಾ (25) ತುಂಬಾ ವರ್ಷಗಳಿಂದ ನಡೆಸುತ್ತಿರುವ ಟೆನಿಸ್ ಅಕಾಡೆಮಿಯ ಬಗ್ಗೆ ಅವರ ತಂದೆಗೆ ಮನಸ್ತಾಪವಿತ್ತು. ಟೆನಿಸ್ ಮತ್ತು ಟೆನಿಸ್ ಅಕಾಡೆಮಿಯನ್ನು ಶ್ವಾಶತವಾಗಿ ಮುಚ್ಚುವಂತೆ ಆರೋಪಿ ದೀಪಕ್ ಯಾದವ್ ತಮ್ಮ ಮಗಳಿಗೆ ಒತ್ತಾಯಿಸಿದ್ದರು. ಆದರೆ, ಇದಕ್ಕೆ ರಾಧಿಕಾ ನಿರಾಕರಿಸಿದ್ದರು. ಇದೇ ವಿಚಾರವಾಗಿ ದೀರ್ಘಕಾಲದಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಅದೇ ಈ ಕೊಲೆಗೆ ಕಾರಣ ಎಂದು ಗುರುಗ್ರಾಮ ಪೊಲೀಸರು ಹೇಳಿದ್ದಾರೆ. ಆದರೆ, ಇದೀಗ ಮ್ಯೂಸಿಕ್ ವಿಡಿಯೋ ಬಹಿರಂಗವಾಗಿದ್ದು, ರಾಧಿಕಾ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದು, ಮನೆಯಲ್ಲಿ ಅಸಮಾಧಾನಕ್ಕೆ ಕಾರಣವಾಗಿರಬಹುದು ಎಂಬ ಮತ್ತೊಂದು ಕಾರಣ ಚರ್ಚೆಯಾಗುತ್ತಿದೆ.
ಮಗಳನ್ನು ಗುಂಡಿಟ್ಟು ಕೊಂದ ದೀಪಕ್ ಯಾದವ್ ತಿಂಗಳಿಗೆ 15ರಿಂದ 17 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ. ಇದರೊಂದಿಗೆ ಐಷಾರಾಮಿ ತೋಟದ ಮನೆ ಸೇರಿದಂತೆ ದುಬಾರಿ ಮೌಲ್ಯದ ವಸ್ತುಗಳಿವೆ. ಇಷ್ಟೆಲ್ಲ ಆಸ್ತಿ, ಗಳಿಕೆ ಹೊಂದಿರುವ ದೀಪಕ್, ತನ್ನ ಮಗಳ ಆದಾಯದಿಂದ ಬದುಕುತ್ತಿರುವೆ ಎಂಬ ಊರಿನ ಜನರ ಟೀಕೆ, ವ್ಯಂಗಗಳಿಗೆ ಬೇಸತ್ತು ಹತ್ಯೆಗೈದಿದ್ದಾರೆ ಎಂಬುದು ಆಶ್ಚರ್ಯ ಎಂದು ಮೃತಳ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.
ಗುರುವಾರ (ಜುಲೈ 10) ಗುರುಗ್ರಾಮ್‌ನ ಸುಶಾಂತ್ ಲೋಕ್ ಪ್ರದೇಶದಲ್ಲಿರುವ ಕುಟುಂಬದ ಮನೆಯಲ್ಲಿ ರಾಧಿಕಾರನ್ನು ಅವರ ತಂದೆ ಗುಂಡು ಹಾರಿಸಿ ಕೊಂದರು. ಎರಡು ವರ್ಷಗಳ ಹಿಂದೆ ಆದ ಗಾಯದಿಂದಾಗಿ ಟೆನಿಸ್ ವೃತ್ತಿಜೀವನದಿಂದ ದೂರ ಉಳಿದಿದ್ದ ರಾಧಿಕಾ, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಲು ಬಯಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರು ಆಗಾಗ ಇನ್ಸ್ಟಾಗ್ರಾಮ್ನಲ್ಲಿ ರೀಲ್‌ಗಳನ್ನು ರಚಿಸಿ, ಅಪ್‌ಲೋಡ್ ಮಾಡುತ್ತಿದ್ದರು.
ಇದನ್ನೂ ಓದಿ: ಪ್ರೋತ್ಸಾಹ ಧನಕ್ಕಾಗಿ ದೇವದಾಸಿ ಮಹಿಳಾ ಮಕ್ಕಳ ಪರದಾಟ * 6,717 ಅರ್ಜಿಯಲ್ಲಿ 2,933 ಜನರಿಗೆ ಮಾತ್ರ ಅನುದಾನ ಬಿಡುಗಡೆ
ತಮ್ಮ ಮಗಳು ಜಾಲತಾಣದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರಿಂದ ತಂದೆ ದೀಪಕ್ ಅಸಮಾಧಾನಗೊಂಡಿದ್ದರು ಮತ್ತು ರೀಲ್‌ಗಳನ್ನು ಡಿಲೀಟ್ ಮಾಡುವಂತೆಯೂ ಸಹ ಕೇಳಿಕೊಂಡಿದ್ದರು. ಇದರ ನಡುವೆ ರಾಧಿಕಾ ಟೆನಿಸ್ ಅಕಾಡೆಮಿ ನಡೆಸುತ್ತಿರುವುದು ಕೂಡ ತಂದೆಗೆ ಇಷ್ಟವಿರಲಿಲ್ಲ. ಆಕೆಯ ಆರ್ಥಿಕ ಸ್ವಾತಂತ್ರ್ಯ ಮತ್ತು ಮಗಳ ದುಡಿಮೆಯಲ್ಲಿ ಬದುಕುತ್ತಿದ್ದೀಯಾ ಎಂಬ ಜನರ ಕೊಂಕು ಮಾತುಗಳು ದೀಪಕ್ ಮನಸ್ಸಿಗೆ ಆಳವಾಗಿ ನಾಟಿತ್ತು. ಮಗಳ ನಡತೆಯ ಬಗ್ಗೆಯೂ ಜನರು ಮಾತನಾಡಿಕೊಳ್ಳುತ್ತಿದ್ದರು. ಇದೆಲ್ಲವನ್ನು ಸಹಿಸದೇ ಮಗಳನ್ನು ಗುಂಡಿಟ್ಟು ಕೊಂದಿರುವುದಾಗಿ ದೀಪಕ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ದೀಪಕ್ ಅವರ ಹುಟ್ಟೂರು ವಜೀರಾಬಾದ್ ಗ್ರಾಮದ ಪರಿಚಯಸ್ಥರೊಬ್ಬರು ಮಾತನಾಡಿ, "ಗುರುಗ್ರಾಮ್‌ನಲ್ಲಿ ಅವರಿಗೆ ಬೇಕಾದಷ್ಟು ಆಸ್ತಿಗಳಿವೆ. ತಿಂಗಳಿಗೆ 15 ಲಕ್ಷದಿಂದ 17 ಲಕ್ಷ ರೂ. ಆದಾಯವೇ ಬರುತ್ತದೆ. ಅದರಲ್ಲಿ ಮನೆ, ಕಟ್ಟಡಗಳ ಬಾಡಿಗೆಗಳು ಸೇರಿವೆ. ಅವರಿಗೆ ಐಷಾರಾಮಿ ತೋಟದ ಮನೆಯಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಇಷ್ಟೊಂದು ಆಸ್ತಿ, ಹಣವಿರುವ ಸಂಗತಿ ಇಡೀ ಹಳ್ಳಿಗೆ ಗೊತ್ತಿದೆ. ಹೀಗಿರುವಾಗ ಅವರೇಕೆ ಮಗಳ ದುಡ್ಡಿನಲ್ಲಿ ಬದುಕು ನಡೆಸುತ್ತಿದ್ದೀಯಾ ಎಂದು ಅಣಕಿಸುತ್ತಾರೆ?" ಎಂದಿದ್ದಾರೆ.
"ದೀಪಕ್ ತುಂಬಾ ಮುಂದುವರಿದ ವ್ಯಕ್ತಿ. ಆತ ತನ್ನ ಮಗಳಿಗೆ ಟೆನಿಸ್ ಕಲಿಸಲು ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾನೆ. ಖುದ್ದಾಗಿ ತಾನೇ ಮಗಳಿಗೆ 2 ಲಕ್ಷ ರೂ. ಮೌಲ್ಯದ ಟೆನಿಸ್ ರ‍್ಯಾಕೆಟ್ ಖರೀದಿಸಿದ್ದಾನೆ. ಪುತ್ರಿಯ ಸಾಧನೆ ಕಂಡು ಖುಷಿ ಪಡುತ್ತಿದ್ದ ವ್ಯಕ್ತಿ, ಬಹಳ ಪ್ರೀತಿಯಿಂದಲೇ ಇದ್ದರು. ನನ್ನ ಪ್ರಕಾರ, ಕೊಲೆಯ ಹಿಂದೆ ಟೆನಿಸ್ ಅಥವಾ ಟೆನಿಸ್ ಅಕಾಡೆಮಿ ಕಾರಣವಲ್ಲ. ಬದಲಿಗೆ ಬೇರೇ ಯಾವುದೋ ವೈಯಕ್ತಿಕ ಕಾರಣವಿರಬಹುದು" ಎಂದು ಹೇಳಿದ್ದಾರೆ,(ಏಜೆನ್ಸೀಸ್).