ನ್ಯೂಸ್

ಕನ್ನಡ ಪರಂಪರೆಯ ವಿಶ್ವಚೇತನ; ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ

ಕನ್ನಡದ ಸಾರಸ್ವತ ಲೋಕಕ್ಕೆ ಚಿರಪರಿಚಿತರಾದ ಧೀಮಂತ ಚೇತನ, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ. ಸಾಹಿತ್ಯಿಕ ಸಾಧನೆ ಜೊತೆಗೆ ಕನ್ನಡದ ಕೆಲಸಗಳನ್ನು ಸಮರ್ಥವಾಗಿ ಮಾಡಿದ ಸಾಂಸ್ಕೃತಿಕ ನಾಯಕ. ಕೋಮು ಸೌಹಾರ್ದ, ಸೃಜನಶೀಲ ಸ್ವಾತಂತ್ರಕ್ಕೆ ಧಕ್ಕೆ ಬಂದಾಗ, ದಿಟ್ಟವಾಗಿ ಪ್ರತಿಭಟಿಸಿದವರು. ಅದಕ್ಕಾಗಿ ಮಾನಸಿಕ ಹಿಂಸೆ, ಬೆದರಿಕೆ, ಬಹಿಷ್ಕಾರ ಎದುರಿಸಿದವರು. ಕನ್ನಡದ ಸ್ಥಾನಮಾನಕ್ಕೆ ಚ್ಯುತಿ ಬಂದಾಗ ಉಗ್ರ ನರಸಿಂಹನಾದರೂ, ಆಳದಲ್ಲಿ ಸಾತ್ವಿಕ, ಮೃದು ಮನಸ್ಸು. ಜಿಎಸ್ಸೆಸ್ ಅವರ ಜನ್ಮಶತಮಾನೋತ್ಸವದ ವರ್ಷವಿದು (ಜನನ: 1926ರ ಫೆಬ್ರವರಿ 7). ತನ್ನಿಮಿತ್ತ ಈ ಮೆಲುಕು.

ಖುಷಿಯಿಲ್ಲದವನು ಕವಿಯಾಗಲಾರ

| ಬಿ.ಆರ್. ಲಕ್ಷಣ್​ ರಾವ್, (ಲೇಖಕರು ಖ್ಯಾತ ಕವಿ)

ಜಿಎಸ್ಸೆಸ್ ಅವರನ್ನು ನಾನು ಮೊದಲ ಬಾರಿ ಕಂಡದ್ದು 1965ರಲ್ಲಿ. ಅವರು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯ ಬಿಟ್ಟು ಬೆಂಗಳೂರು ವಿವಿಯ ಕನ್ನಡ ವಿಭಾಗಕ್ಕೆ ಮುಖ್ಯಸ್ಥರಾಗಿ ಬಂದಿದ್ದರು. ನಾನಾಗ ಬೆಂಗಳೂರಲ್ಲಿ ಬಿ.ಎ. ಓದುತ್ತಿದ್ದೆ. ಒಂದು ದಿನ ಲಂಕೇಶ್ ಜಿಎಸ್ಸೆಸ್ ಅವರನ್ನು ಕಾಣಲು ಹೋಗುವಾಗ ತಮ್ಮ ಪಟ್ಟಶಿಷ್ಯನಾದ ನನ್ನನ್ನೂ ಕರೆದೊಯ್ದಿದ್ದರು. ಬಿಳಿ ಜುಬ್ಬ, ಕಚ್ಚೆಪಂಚೆ ಧರಿಸಿದ್ದ ಜಿಎಸ್ಸೆಸ್ ಅವರ ಸಾಹಿತ್ಯದ ಬಗ್ಗೆ ಆಗ ನನಗೆ ಹೆಚ್ಚಿಗೇನೂ ತಿಳಿದಿರಲಿಲ್ಲ. ನಂತರದ ವರ್ಷಗಳಲ್ಲಿ, ಜಿಎಸ್ಸೆಸ್ ಪ್ರತಿ ವರ್ಷ ಕನ್ನಡ ವಿಭಾಗದ ಮೂಲಕ ಏರ್ಪಡಿಸುತ್ತಿದ್ದ ವಿಚಾರ ಸಂಕಿರಣ, ಕವಿಗೋಷ್ಠಿಗಳಲ್ಲಿ ನಾನು ಭಾಗವಹಿಸಿದ್ದೆ. ಕ್ರಮೇಣ ಜಿಎಸ್ಸೆಸ್ ಅವರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಮಹತ್ವದ ಅರಿವು ನನಗಾಗಿ, ಗೌರವಾದರ ಹೆಚ್ಚಾದವು.

ಜಿಎಸ್ಸೆಸ್ ನನಗೆ ಆತ್ಮೀಯರಾದದ್ದು ನನ್ನ ಮಿತ್ರ, ಕವಿ ಎಚ್.ಎಸ್. ವೆಂಕಟೇಶಮೂರ್ತಿ ಮೂಲಕ. ಅವನ ‘ಸಿಂದಾಬಾದನ ಆತ್ಮಕಥೆ’ ಕವನ ಸಂಕಲನಕ್ಕೆ ಜಿಎಸ್ಸೆಸ್ ಬರೆದಿರುವ ಮುನ್ನುಡಿ ನಿಜಕ್ಕೂ ನನ್ನ ಕಣ್ತೆರೆಸಿತು. ಅಲ್ಲಿಂದಾಚೆಗೆ ಅವರ ಕಾವ್ಯ, ವಿಮರ್ಶೆ, ಮೀಮಾಂಸೆಗಳನ್ನು ನಾನು ಅಧ್ಯಯನ ಮಾಡಿದೆ. ಅಲ್ಲಿಂದ ಮುಂದೆ ಸುಗಮ ಸಂಗೀತ ಜಿಎಸ್ಸೆಸ್ ಅವರನ್ನು ನನಗೆ ಇನ್ನಷ್ಟು ಹತ್ತಿರವಾಗಿಸಿತು. ಸಿ. ಅಶ್ವತ್ಥ್ 1986ರಲ್ಲಿ ಜಿಎಸ್ಸೆಸ್ ಅವರ ಎಂಟು ಭಾವಗೀತೆಗಳ ‘ಚೈತ್ರ’ ಧ್ವನಿಸುರುಳಿ ಹೊರತರಲು ಮುಂದಾದರು. ಅದಕ್ಕೆ ಸ್ವರಸಂಯೋಜನೆ ನಡೆದದ್ದು ಅಶ್ವತ್ಥ್ ಅವರ ಖಾಯಂ ಹೋಟೆಲಾದ ಮಿನರ್ವ್ ಕಾಮತ್​ನಲ್ಲಿ. ಅವರ ಜೊತೆಗಾರರಾಗಿ ಎಚ್ಚೆಸ್ವಿ, ಎಂ.ಎನ್. ವ್ಯಾಸರಾವ್ ಮತ್ತು ನಾನು ಅಲ್ಲಿದ್ದೆವು. ಸ್ವರಸಂಯೋಜನೆ ಮುಗಿದ ನಂತರ ಆ ಹಾಡುಗಳನ್ನು ಕೇಳಿಸಲೆಂದು ಅಶ್ವತ್ಥ್ ಜಿಎಸ್ಸೆಸ್ ಅವರನ್ನು ಅಂದು ಸಂಜೆ ಹೋಟೆಲಿಗೆ ಆಹ್ವಾನಿಸಿದ್ದರು. ಹಾಡುಗಳನ್ನು ಕೇಳಿ ಜಿಎಸ್ಸೆಸ್ ಎಷ್ಟು ಖುಷಿಪಟ್ಟರೆಂದರೆ ಅವರ ಕಣ್ಣುಗಳು ಆನಂದಬಾಷ್ಪಗಳಿಂದ ಒದ್ದೆಯಾಗಿದ್ದವು. ‘ಚೈತ್ರ’ ಧ್ವನಿಸುರುಳಿ ಅಪಾರ ಜನಪ್ರಿಯತೆಯನ್ನು ಗಳಿಸಿತು. ನಂತರದ ಸುಮಾರು ಇಪ್ಪತ್ತು ವರ್ಷಗಳ ಸುಗಮ ಸಂಗೀತದ ಜೈತ್ರಯಾತ್ರೆಗೆ ಜಿಎಸ್ಸೆಸ್ ಅವರದೇ ಮುಖಂಡತ್ವ. ಆಗ ನನ್ನ ಪರಿಚಯ ಆತ್ಮೀಯತೆಯ ಹಂತಕ್ಕೇರಿತು.

ಈ ಸಂದರ್ಭದಲ್ಲಿ 12 ವರ್ಷಗಳ ಹಿಂದಿನ ಘಟನೆ ನೆನಪಾಗುತ್ತದೆ. ಪಂಪ ಪ್ರಶಸ್ತಿಗೆ ಪಾತ್ರರಾದ ಜಿಎಸ್ಸೆಸ್ ಮತ್ತು ಕಣವಿ ಅವರನ್ನು ನನ್ನೂರಾದ ಚಿಂತಾಮಣಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಅಚಾತುರ್ಯದಿಂದ ಅವರಿಬ್ಬರಿಗೂ ಕಾರ್ಯಕ್ರಮದ ದಿನಾಂಕವನ್ನು ತಪ್ಪಾಗಿ ತಿಳಿಸಿಬಿಟ್ಟಿದ್ದೆ. ಆ ದಿನಾಂಕದಂದು ಇಬ್ಬರಿಗೂ ಮೊದಲೇ ಗೊತ್ತಾದ ಕಾರ್ಯಕ್ರಮಗಳಿದ್ದವು. ನನ್ನ ತಪ್ಪಿನ ಅರಿವಾಗಿ ನಾನು ಇಬ್ಬರಿಗೂ ಫೋನ್ ಮಾಡಿ, ಕ್ಷಮೆ ಯಾಚಿಸಿ, ಚಿಂತಾಮಣಿಯ ಕಾರ್ಯಕ್ರಮಕ್ಕೆ ಬರಬೇಕೆಂದು ಕೋರಿದೆ. ಇಬ್ಬರೂ ತಮ್ಮ ಅಂದಿನ ಕಾರ್ಯಕ್ರಮಗಳನ್ನು ರದ್ದು ಮಾಡಿ, ನಮ್ಮಲ್ಲಿಗೆ ಬಂದು ಕಾರ್ಯಕ್ರಮವನ್ನು ಅವಿಸ್ಮರಣೀಯವಾಗಿ ನಡೆಸಿಕೊಟ್ಟರು. ಇದನ್ನು ನೆನೆದಾಗಲೆಲ್ಲ ನನಗೆ ಈ ಇಬ್ಬರೂ ಹಿರಿಯರ ಬಗ್ಗೆ ಪ್ರೀತ್ಯಾದರಗಳಿಂದ ಹೃದಯ ತುಂಬಿಬರುತ್ತದೆ.

ಇನ್ನೊಂದು ಮರೆಯಲಾಗದ ಸಂಗತಿ ಎಂದರೆ ಜಿಎಸ್ಸೆಸ್ ಅವರ ಮನೆಯಲ್ಲಿ ಪ್ರತಿವರ್ಷ ಎಂಬಂತೆ ಮಾವಿನಹಣ್ಣಿನ ಕಾಲದ ಒಂದು ದಿನ ಏರ್ಪಾಟಾಗುತ್ತಿದ್ದ ಹೋಳಿಗೆ ಮತ್ತು ಸೀಕರಣೆಯ ಔತಣ. ಅದಕ್ಕೆ ಜಿಎಸ್ಸೆಸ್ ತಮ್ಮ ಆತ್ಮೀಯ ಬಂಧುಮಿತ್ರರನ್ನು ಖುದ್ದಾಗಿ ಆಹ್ವಾನಿಸುತ್ತಿದ್ದರು. ಅದಕ್ಕೆಂದೇ ನಾನು ಚಿಂತಾಮಣಿಯಿಂದ ಹೆಂಡತಿ ಗಿರಿಜಳೊಂದಿಗೆ ಬೆಂಗಳೂರಿಗೆ ಬಂದುಹೋದದ್ದುಂಟು. ಅಂದಿನ ಔತಣದಲ್ಲಿ ಸಾಂಪ್ರದಾಯಿಕವಾದ ಪಲ್ಯ, ಕೋಸಂಬರಿ, ಸಾರು, ಚಿತ್ರಾನ್ನ ಇರುತ್ತಿತ್ತಾದರೂ ವಿಶೇಷ ಖಾದ್ಯವೆಂದರೆ ಹೋಳಿಗೆ ಮತ್ತು ಮಾವಿನಹಣ್ಣಿನ ಸೀಕರಣೆಯೇ. ಅದೇ ಕ್ಲೈಮಾಕ್ಸ್! ಆ ಸೀಕರಣೆಗೆಂದು ಜಿಎಸ್ಸೆಸ್ ವಿವಿಧ ಬಗೆಯ ಅತ್ಯುತ್ತಮ ಮಾವಿನಹಣ್ಣುಗಳನ್ನು ತರಿಸುತ್ತಿದ್ದರು. ತಾವೇ ಖುದ್ದಾಗಿ ಸಕುಟುಂಬ ನಿಂತು ಅತಿಥಿಗಳನ್ನು ಉಪಚರಿಸುತ್ತಿದ್ದರು. ಬಲ್ಲವರೇ ಬಲ್ಲರು ಆ ಔತಣದ ಸವಿಯ!

ಇನ್ನೊಂದು, ಸುಮಾರು 35 ವರ್ಷಗಳಿಗೂ ಹಿಂದಿನ ಘಟನೆ. ಬೆಂಗಳೂರು ದೂರದರ್ಶನ ಒಂದು ಕವಿಗೋಷ್ಠಿ ಏರ್ಪಡಿಸಿತ್ತು. ಅದರ ಅಧ್ಯಕ್ಷತೆ ವಹಿಸಲು ಜಿಎಸ್ಸೆಸ್ ಅವರನ್ನು ಆಹ್ವಾನಿಸಲಾಯಿತು. ಅದರಲ್ಲಿ ನರಸಿಂಹಸ್ವಾಮಿಯವರೂ ಭಾಗವಹಿಸಲಿರುವ ವಿಷಯ ಜಿಎಸ್ಸೆಸ್ ಅವರಿಗೆ ತಿಳಿಯಿತು. ಕೂಡಲೇ ಅವರು ದೂರದರ್ಶನದ ಅಧಿಕಾರಿಗಳನ್ನು ಸಂರ್ಪಸಿ, ಕವಿಗೋಷ್ಠಿಯ ಅಧ್ಯಕ್ಷತೆಯ ಗೌರವವನ್ನು ತಮಗಿಂತ ಹಿರಿಯರಾದ ನರಸಿಂಹಸ್ವಾಮಿ ಅವರಿಗೆ ನೀಡಲು ಸೂಚಿಸಿ, ಒಪ್ಪಿಸಿದ್ದಲ್ಲದೆ, ತಾವೂ ಸಹ ಆ ಗೋಷ್ಠಿಯಲ್ಲಿ ಒಬ್ಬ ಕವಿಯಾಗಿ ಭಾಗವಹಿಸಿದರು.

ನನ್ನ ಜೀವನದ ಸಾರ್ಥಕ ಗಳಿಗೆಗಳಲ್ಲಿ ಒಂದನ್ನು ನಾನಿಲ್ಲಿ ನೆನೆಯಲೇಬೇಕು. 2006ರಲ್ಲಿ ನನಗೆ ಅರವತ್ತು ತುಂಬಿದಾಗ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಜಿಎಸ್ಸೆಸ್ ನೇತೃತ್ವದಲ್ಲಿ, ಅಭಿನಂದನ ಸಮಾರಂಭ ಏರ್ಪಾಟಾಗಿತ್ತು. ನನ್ನ ಕಾವ್ಯ ಹಾಗೂ ನನ್ನ ಬಗ್ಗೆ ಜಿಎಸ್ಸೆಸ್ ಪ್ರಾಸ್ತಾವಿಕವಾಗಿ ಕೆಲವು ಮೌಲಿಕ ಮಾತುಗಳನ್ನಾಡಿದರು. ಅದನ್ನು ಆಲಿಸಿದ ಬಳಿಕ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನಂತಮೂರ್ತಿ ಹೀಗೆಂದರು, ‘ಜಿಎಸ್ಸೆಸ್ ಅವರ ಮೆಚ್ಚುಗೆ ಗಳಿಸುವುದು ಸುಲಭದ ಮಾತಲ್ಲ. ಅದನ್ನು ಗಳಿಸಿದ ಲಕ್ಷ್ಮಣ ನಿಜಕ್ಕೂ ಧನ್ಯ’! ಹೌದು, ನಾನಂದು ನಿಜಕ್ಕೂ ಧನ್ಯನಾಗಿದ್ದೆ. ಆದರೆ ಅದಕ್ಕಿಂತ ಹೆಚ್ಚಿನ ಧನ್ಯತೆ ನನಗೆ ನಂತರದಲ್ಲಿ ದೊರೆಯಿತು. ಅಂದು ಜಿಎಸ್ಸೆಸ್ ಅವರು ಆಡಿದ ಮಾತುಗಳ ಟಿಪ್ಪಣಿ ಅವರಲ್ಲಿ ಭದ್ರವಾಗಿತ್ತಂತೆ. ಸಾರ್ವಜನಿಕ ಎಂಬ ಅವರ ಲೇಖನಗಳ ಸಂಕಲನದಲ್ಲಿ ಅದು ಪ್ರಕಟವಾಗಿದೆ. ಅದರಲ್ಲಿ ಈ ಮಾತಿದೆ- ‘ಋಷಿಯಲ್ಲದವನು ಕವಿಯಾಗಲಾರ- ಎನ್ನುವುದು ಕವಿಯ ಮಹತಿಯನ್ನು ಕುರಿತ ಒಂದು ಪ್ರಾಚೀನ ಸೂತ್ರ. ಬಿ.ಆರ್. ಲಕ್ಷ್ಮಣ್​ ರಾವ್ ಅವರ ಕವಿತೆಯನ್ನೋದಿದ ಮೇಲೆ ಈ ಸೂತ್ರವನ್ನು ಖುಷಿಯಿಲ್ಲದವನು ಕವಿಯಾಗಲಾರ ಎಂದು ತಿದ್ದುಪಡಿ ಮಾಡಬೇಕು ಎನ್ನಿಸುತ್ತದೆ. ಈ ಬಗೆಯ ಖುಷಿಯನ್ನು ಸ್ಥಾಯಿಯಾಗಿ ಉಳ್ಳವರು ಲಕ್ಷ್ಮಣ್ ರಾವ್’. ಇದು ನನ್ನ ಕಾವ್ಯಕ್ಕೆ ಸಂದ ಅತ್ಯುನ್ನತ ಪ್ರಶಸ್ತಿಯೆಂದು ನಾನು ಭಾವಿಸಿದ್ದೇನೆ.