ಯೋಗವನ್ನು ಪ್ರಾಮಾಣಿಕವಾಗಿ ಅಭ್ಯಾಸ ಮಾಡುವ ವ್ಯಕ್ತಿಗೆ ಏನಾಗಬೇಕು? ಈ ಘಟನೆಯು ಅದನ್ನು ಸ್ಪಷ್ಟಪಡಿಸುತ್ತದೆ. ಒಬ್ಬ ಹಿರಿಯ ಸ್ವಾಮೀಜಿ ಒಮ್ಮೆ ಋಷಿಕೇಶದಲ್ಲಿರುವ ಶಿವಾನಂದ ಆಶ್ರಮದಲ್ಲಿ (ಡಿವೈನ್ ಲೈಫ್ ಸೊಸೈಟಿ) ಬಹಳ ಸಮಯದವರೆಗೆ ಇದ್ದರು ಮತ್ತು ಆಶ್ರಮಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದರು. ನಂತರ ಅವರು ತೀವ್ರ ತಪಸ್ಸು ಮಾಡಲು ಆಶ್ರಮವನ್ನು ತೊರೆದರು.
ಬಹಳ ವರ್ಷಗಳ ನಂತರ, ಅವರು ಮತ್ತೆ ಆಶ್ರಮದ ಆವರಣದಲ್ಲಿ ಸ್ವಲ್ಪ ಸಮಯ ಕಾಣಿಸಿಕೊಂಡರು. ಆದರೆ ಯಾರಿಗೂ ತಿಳಿಸದೆ ಹೋದರು. ಆಶ್ರಮದ ಬಗ್ಗೆ ಅವರ ವರ್ತನೆಯ ಬಗ್ಗೆ ಬಹಳ ಚರ್ಚೆ ನಡೆಯಿತು. ಯಾರೋ ಈ ವಿಷಯವನ್ನು ಸ್ವಾಮಿ ಶಿವಾನಂದರಿಗೆ ವರದಿ ಮಾಡಿ, ಬಹುಶಃ ಅವರು ನಿರೀಕ್ಷಿಸಿರಬಹುದಾದ ಸ್ವಾಗತವನ್ನು ಸ್ವಾಮಿಜಿ ನೀಡದ ಕಾರಣ ಅವರು ಆಶ್ರಮದಲ್ಲಿ ಇರಲಿಲ್ಲ ವೇನೋ ಎಂದು ಹೇಳಿದರು. ಅದಕ್ಕೆ ಸ್ವಾಮಿಜಿ ಯಾವ ಸ್ವಾಗತ? ಒಬ್ಬ ಸನ್ಯಾಸಿಗೆ ಅಂತಹ ನಿರೀಕ್ಷೆಗಳು ಮತ್ತು ಆಸೆಗಳು ಇರಬಾರದು. ಅವರು ತೀವ್ರ ತಪಸ್ಸು ಮತ್ತು ಸಾಧನೆ ಮಾಡಲು ಆಶ್ರಮವನ್ನು ತೊರೆದರು.
ಅವರು ನಿಜವಾಗಿಯೂ ಸಾಕಷ್ಟು ಕಠಿಣ ಪರಿಶ್ರಮ ಮಾಡಿದ್ದರೆ, ಅವರು ಪ್ರೀತಿಯಿಂದ ಹೃದಯವನ್ನು, ಸಂಪೂರ್ಣವಾಗಿ ಬದಲಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತಿದ್ದರು ಮತ್ತು ಅದು ಅವರು ಇಲ್ಲಿ ಭೇಟಿ ಯಾದ ಯಾರನ್ನಾದರೂ ಚೈತನ್ಯಗೊಳಿಸುತ್ತಿತ್ತು. ಅವರು ಎಲ್ಲರಿಗೂ ಪ್ರಿಯರಾಗುತ್ತಿದ್ದರು. ಸ್ವಾಭಾವಿಕವಾಗಿ, ವಿಭಿನ್ನ ವಾತಾವರಣ ಸೃಷ್ಟಿ ಯಾಗುತ್ತಿತ್ತು. ಇದೇ ದಾರಿ. ಅವರು ಯಾವಾಗಲೂ ಪ್ರೀತಿ ಮತ್ತು ಸೇವೆ ಮೂಲಕ ಜನರ ಹೃದಯ ಗೆಲ್ಲಬೇಕು. ಬೇರೆ ದಾರಿಯಿಲ್ಲ. ಅವರು ಹಾಗೆ ಮಾಡಲು ಸಾಧ್ಯವಾಗದಿದ್ದರೆ, ಸಾಧನೆ ಎಂದರೆ ಜಡತ್ವದಲ್ಲಿ ನಿರಂತರ ತೊಡಗಿಕೊಳ್ಳುವಿಕೆ ಮತ್ತು ಅಹಂಕಾರವನ್ನು ಹೆಚ್ಚಿಸುವುದೇ ಆಗುತ್ತದೆ ಎಂದರು.
‘ಮನಸ್ಸನ್ನು ನೇರಗೊಳಿಸುವುದು’ ಎಂದರೆ ಎಲ್ಲಾ ದುರ್ಗಣಗಳನ್ನು ನಿಮೂಲನೆ ಮಾಡುವುದು ಮತ್ತು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾದ ಎಲ್ಲಾ ಉದಾತ್ತ ಸದ್ಗುಣ ಬೆಳೆಸಿಕೊಳ್ಳುವುದು. ದೇಹವನ್ನು ತಿರುಚುವುದು ಸುಲಭ; ಮನಸ್ಸನ್ನು ನೇರಗೊಳಿಸಲು ಅನೇಕ ಜನ್ಮಗಳೇ ಬೇಕಾಗಬಹುದು!