ಮುಂಬೈ: ಜಾಗತಿಕ ಷೇರು ಮಾರುಕಟ್ಟೆಗಳಲ್ಲಿನ ಏರಿಕೆ ಪ್ರವೃತ್ತಿಯ ಮಧ್ಯೆ ವ್ಯಾಪಕ ಖರೀದಿಯಿಂದಾಗಿ ಭಾರತೀಯ ಷೇರು ಪೇಟೆಯ ಎರಡೂ ಸೂಚ್ಯಂಕಗಳು ಮಂಗಳವಾರ ತೀವ್ರ ಹೆಚ್ಚಳ ದಾಖಲಿಸಿವೆ. ದಿನದ ವಹಿವಾಟಿನ ಮಧ್ಯೆ 1,215 ಅಂಕ ಏರಿ 75,385ಕ್ಕೆ ತಲುಪಿದ್ದ ಸೆನ್ಸೆಕ್ಸ್ ಕೊನೆಯಲ್ಲಿ 1,131 ಅಂಕ ಹೆಚ್ಚಳ ದಾಖಲಿಸಿ 75,301ಕ್ಕೆ ಸ್ಥಿರಗೊಂಡಿತು. ನಿಫ್ಟಿ 327 ಅಂಕ ಏರಿಕೆಯಾಗಿ 22,834ಕ್ಕೆ ಸ್ಥಿರವಾಯಿತು.
ಜೊಮ್ಯಾಟೊ ಷೇರುಗಳ ಬೆಲೆ ಶೇ. 7ರಷ್ಟು ಏರಿಕೆಯಾಗಿ ಅಚ್ಚರಿ ಮೂಡಿಸಿತು. ಉಳಿದಂತೆ, ಐಸಿಐಸಿಐ ಬ್ಯಾಂಕ್, ಮಹಿಂದ್ರಾ ಆಂಡ್ ಮಹಿಂದ್ರಾ, ಟಾಟಾ ಮೋಟರ್ಸ್, ಎಲ್ ಆಂಡ್ ಟಿ, ಏಷ್ಯನ್ ಪೇಂಟ್ಸ್, ಟೈಟನ್, ಕೋಟಕ್ ಮಹಿಂದ್ರಾ ಬ್ಯಾಂಕ್, ಎಸ್ಬಿಐ ಷೇರುಗಳು ಲಾಭ ಗಳಿಸಿದವು. ಬಜಾಜ್ ಫಿನ್ಸರ್ವ್, ಭಾರ್ತಿ ಏರ್ಟೆಲ್, ಟೆಕ್ ಮಹಿಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಹಿಂದೆ ಬಿದ್ದವು. ಏಷ್ಯಾದ ಷೇರು ಮಾರುಕಟ್ಟೆಗಳ ಪೈಕಿ ಸೋಲ್, ಟೋಕಿಯೋ, ಹಾಂಗ್ಕಾಂಗ್ ಏರಿಕೆ ಗತಿಯಲ್ಲಿದ್ದವು. ಯೂರೋಪಿಯನ್ ಮತ್ತು ಅಮೆರಿಕನ್ ಷೇರು ಮಾರುಕಟ್ಟೆಗಳೂ ಲಾಭದ ಹಾದಿಯಲ್ಲಿದ್ದವು.
ಸ್ಥಳೀಯ ಷೇರು ಮಾರುಕಟ್ಟೆಯ ಏರಿಕೆ ಪ್ರವೃತ್ತಿ ಮತ್ತು ಅಮೆರಿಕನ್ ಕರೆನ್ಸಿಯ ದುರ್ಬಲತೆ ಹಿನ್ನೆಲೆಯಲ್ಲಿ ಭಾರತದ ರೂಪಾಯಿಯ ಬೆಲೆ ಮಂಗಳವಾರ 26 ಪೈಸೆ ಹೆಚ್ಚಳವಾಗಿ 86.55ಕ್ಕೆ ತಲುಪಿದೆ. ಅಮೆರಿಕದ ನಿರಾಶಾದಾಯಕ ಆರ್ಥಿಕ ದತ್ತಾಂಶದ ಹಿನ್ನೆಲೆಯಲ್ಲಿ ಡಾಲರ್ ಮೌಲ್ಯ ಕಡಿಮೆಯಾಯಿತು. ಇದೇ ವೇಳೆ ಏಷ್ಯನ್ ಕರೆನ್ಸಿಗಳ ಬಲವೂ ರೂಪಾಯಿಯ ಬೆಲೆ ಏರಿಕೆಗೆ ಬೆಂಬಲವಾಗಿ ನಿಂತಿತು. ಆದರೆ, ಕಚ್ಚಾ ತೈಲ ದರ ಏರಿಕೆಯಾದದ್ದು ರೂಪಾಯಿ ಬೆಲೆ ಇನ್ನಷ್ಟು ಹೆಚ್ಚಾಗುವುದನ್ನು ತಡೆಯಿತು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.