| ಗಂಗಾಧರ್ ಬೈರಾಪಟ್ಟಣ ರಾಮನಗರ
ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಒತ್ತಡಕ್ಕೆ ಸಿಲುಕಿರುವ ಸರ್ಕಾರ ಕೋರ್ಟ್ ಸೂಚನೆ ಧಿಕ್ಕರಿಸಿ ತರಾತುರಿಯಲ್ಲಿ 17 ಜಿಲ್ಲೆಗಳ ಪಿಡಿಒಗಳಿಗೆ ಪದೋನ್ನತಿ ನೀಡಲು ಸಿದ್ಧತೆ ನಡೆಸಿ, ಉಳಿದ ಜಿಲ್ಲೆಗಳ ಪಿಡಿಒಗಳಿಗೆ ಅನ್ಯಾಯ ಮಾಡಲು ಮುಂದಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಒಂದೇ ದಿನಾಂಕದಂದು ಪರೀಕ್ಷೆ ನಡೆಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದ್ದ ಸರ್ಕಾರ, ನಂತರ ತಾನೇ ಮಾಡಿದ ಎಡವಟ್ಟಿನಿಂದ ತಡವಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡ 13 ಜಿಲ್ಲೆಗಳ ಸುಮಾರು 1,300 ಪಿಡಿಒಗಳ ಭವಿಷ್ಯದ ಜತೆ ಆಟವಾಡಲು ಮುಂದಾಗಿದೆ. ಸರ್ಕಾರದ ಪ್ರಸ್ತುತ ನಿಲುವು, ಅರ್ಹತೆ ಇದ್ದರೂ ಪದೋನ್ನತಿ ಪಡೆಯಲು ಅವಕಾಶ ಇಲ್ಲದೆ, ನೇಮಕಗೊಂಡ ಹುದ್ದೆಯಲ್ಲಿಯೇ ನಿವೃತ್ತಿ ಕಾಣುವ ಆತಂಕ ಎದುರಾಗಿದೆ.
ಯಾವ ಜಿಲ್ಲೆಗಳಿಗೆ ಅನ್ಯಾಯ?: ಮುಖ್ಯಮಂತ್ರಿ ತವರು ಜಿಲ್ಲೆ ಹಾವೇರಿ ಸೇರಿ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ದಾವಣಗೆರೆ ಮತ್ತು ಹಾಸನ ಜಿಲ್ಲೆಗಳ ಪಿಡಿಒಗಳಿಗೆ ಸರ್ಕಾರದ ನಡೆಯಿಂದ ಅನ್ಯಾಯವಾಗಿದೆ.
ಇದನ್ನೂ ಓದಿ: ಎರಡನೇ ಮಹಡಿಯಿಂದ ಬಿದ್ದಿದ್ದ 3 ವರ್ಷದ ಮಗು ಸಾವು; ಫಲಿಸಲಿಲ್ಲ ಮೂರು ದಿನಗಳ ಜೀವನ್ಮರಣ ಹೋರಾಟ ಅನ್ಯಾಯ ಹೇಗೆ?: ಸರ್ಕಾರ 2009ರಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆ ಸೃಜಿಸಿದೆ. ಇದರಲ್ಲಿ ಶೇ.67 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಂಡಿದೆ. ಇದಾದ ನಂತರ ವಿವಿಧ ಕಾರಣಗಳಿಗಾಗಿ ನೇಮಕ ಪತ್ರ ನೀಡುವುದು ಮತ್ತು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ದಿನಾಂಕಗಳು ಬದಲಾಗಿದ್ದು, 18 ಜಿಲ್ಲೆಗಳಿಗೆ 2010ರ ಮಾ.19ರಂದು ನೇಮಕ ಪತ್ರ ನೀಡಿ, ಏಪ್ರಿಲ್ 5ರಂದು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿತ್ತು. ಇದರಲ್ಲಿ ಮೈಸೂರು ಜಿಲ್ಲೆಯಲ್ಲಿ 2010ರ ಮಾ.19ರಂದು ನೇಮಕ ಪತ್ರ ನೀಡಲಾಗಿದೆ. ಉಳಿದ 12 ಜಿಲ್ಲೆಗಳಿಗೆ ಸರ್ಕಾರ ನೀಡಿದ ನಿರ್ದೇಶನದಂತೆ ಬೇರೆ ಬೇರೆ ದಿನಾಂಕಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇದರಲ್ಲಿ ಸರ್ಕಾರದ ನಿರ್ದೇಶನ ಇತ್ತೇ ಹೊರತು, ಶಿಸ್ತು ಪ್ರಾಧಿಕಾರವಾಗಿದ್ದ ಜಿಪಂ ಆಗಲಿ, ಅಭ್ಯರ್ಥಿಗಳ ತಪ್ಪಾಗಲಿ ಇರಲಿಲ್ಲ.
ಕೋರ್ಟ್ನಲ್ಲಿ ವಿಚಾರಣೆ ಬಾಕಿ ಇದ್ದರೂ, ಪ್ರಕರಣ ಇತ್ಯರ್ಥವಾಗುವವರೆಗೂ ತಾತ್ಕಾಲಿಕ ವರ್ಕ್ ಅರೇಂಜ್ಮೆಂಟ್ಸ್ ಮಾಡಿಕೊಳ್ಳುವುದಾಗಿ ಇಲಾಖೆ ಅಧಿಕಾರಿಗಳು ಕೋರಿದ್ದರ ಮೇರೆಗೆ, ಪಟ್ಟಿ ಸಲ್ಲಿಸುವಂತೆ ನ್ಯಾಯಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ 2022ರ ನ.10ರಂದು ಸೂಚನೆ ನೀಡಿದೆ. ಆದರೆ, ಅಧಿಕಾರಿಗಳು 2014ರಲ್ಲಿ ಸಿದ್ಧಪಡಿಸಿದ ಜೇಷ್ಠತಾ ಪಟ್ಟಿ ಕಡೆಗಣಿಸಿ, 2010ರಲ್ಲಿ ಸರ್ಕಾರದ ಸೂಚನೆಯಂತೆ ಮೊದಲು ವರದಿ ಮಾಡಿಕೊಂಡ 17 ಜಿಲ್ಲೆಗಳ ಪಿಡಿಒಗಳ ಮಾಹಿತಿ ಮೇಲಿರಿಸಿ, ಆ ನಂತರದ ದಿನಾಂಕಗಳಲ್ಲಿ ವರದಿ ಮಾಡಿಕೊಂಡಿದ್ದ 13 ಜಿಲ್ಲೆಗಳ ಪಿಡಿಒಗಳನ್ನು ಕೆಳಗಿರಿಸಿ ಬಡ್ತಿಗೆ ಅವಕಾಶವೇ ಇಲ್ಲದಂತೆೆ ಪಟ್ಟಿ ಸಲ್ಲಿಸಿದ್ದಾರೆ. ಅಲ್ಲದೆ, ಇದಕ್ಕಾಗಿ ಈಗಾಗಲೆ ಇಲಾಖಾ ಬಡ್ತಿ ಸಮಿತಿ (ಡಿಪಿಸಿ)ಸಭೆಯನ್ನೂ ತರಾತುರಿಯಲ್ಲಿ ನಡೆಸಿದೆ. ಈ ಮೂಲಕ ನ್ಯಾಯಾಲಯದ ಆದೇಶ ಸ್ಪಷ್ಟ ಉಲ್ಲಂಘನೆ ಮಾಡಿದೆ ಎನ್ನುವುದು ನೋಂದ ಪಿಡಿಒಗಳ ಆರೋಪವಾಗಿದೆ.
ಒಂದೇ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದ್ದ ಸರ್ಕಾರದ ಸೂಚನೆಯಂತೆ ಕರ್ತವ್ಯಕ್ಕೆ ಹಾಜರಾಗಿದ್ದೇವೆ. ಮೆರಿಟ್ ಆಧಾರದ ಮೇಲೆ ಬಡ್ತಿ ನೀಡಬೇಕು ಎನ್ನುವುದು ನಮ್ಮ ಬೇಡಿಕೆ. ಈ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿದ್ದು, ಸರ್ಕಾರ ಯಾವುದೇ ಬಡ್ತಿಗೆ ಮುಂದಾಗಬಾರದು. ನ್ಯಾಯಾಲಯದ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ. | ಬೆಟ್ಟಸ್ವಾಮಿ ಗೌಡ ಜಿಲ್ಲಾಧ್ಯಕ್ಷ, ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕ್ಷೇಮಾಭಿವೃದ್ಧಿ ಸಂಘ
2014ರಲ್ಲಿ ಪಿಡಿಒ ಹುದ್ದೆಯಿಂದ ಸಹಾಯಕ ನಿರ್ದೇಶಕ ಹುದ್ದೆಗೆ ಪದೋನ್ನತಿ ನೀಡಲು ಸಿದ್ಧಪಡಿಸಿದ್ದ ಜೇಷ್ಠತಾ ಪಟ್ಟಿಯನ್ನು ಮೆರಿಟ್ ಆಧಾರದ ಮೇಲೆಯೆ ಸರ್ಕಾರ ಸಿದ್ಧಪಡಿಸಿತ್ತು. ಇದರ ಅನ್ವಯ 269 ಪಿಡಿಒಗಳು ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಮತ್ತು 100ಕ್ಕೂ ಹೆಚ್ಚು ಮಂದಿಗೆ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಆದರೆ, ಈ ಆದೇಶವನ್ನು ಕೆಲವರು ಕೆಎಟಿಯಲ್ಲಿ ಪ್ರಶ್ನಿಸಿದ್ದರು. ಈ ವೇಳೆ ಸರ್ಕಾರ ತನ್ನ ನಿಲುವು ಸಮರ್ಥಿಸಿಕೊಳ್ಳುವಲ್ಲಿ ವಿಫಲವಾದ ಕಾರಣ, ಕೆಎಟಿ ಸರ್ಕಾರದ ಜೇಷ್ಠತಾ ಪಟ್ಟಿ ರದ್ದುಪಡಿಸಿ, ಹೊಸ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿತ್ತು. ಇದರ ವಿರುದ್ಧ ಸರ್ಕಾರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ. ಈ ಸಂಬಂಧ ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಇದರಿಂದಾಗಿ 2019ರಿಂದ ಪಿಡಿಒಗಳಿಗೆ ಬಡ್ತಿ ದೊರೆತೇ ಇಲ್ಲ.