ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಸಂದರ್ಭದಲ್ಲಿ, ರಾಜ್ಯದ ಸಂಸದ ಡಿ.ಕೆ. ಸುರೇಶ್ ಅನುದಾನ ಹಂಚಿಕೆಯಲ್ಲಿ ಅನ್ಯಾಯದ ಕಾರಣ ಮುಂದೆ ಮಾಡಿ ಪ್ರತ್ಯೇಕ ರಾಷ್ಟ್ರದ ಪ್ರಸ್ತಾಪ ಮಾಡಿರುವುದು ದೇಶಾದ್ಯಂತ ‘ವಿಭಜನೆ ಚರ್ಚೆ’ ಹುಟ್ಟುಹಾಕಿದೆ. ಸಂಸತ್ತಿನ ಬಜೆಟ್ ಅಧಿವೇಶನದಲ್ಲೂ ಇದು ಕೋಲಾಹಲಕ್ಕೆ ಕಾರಣವಾಗಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಇರುಸುಮುರಿಸು ತಂದಿದೆ. ಇನ್ನೊಂದೆಡೆ ಬಿಜೆಪಿಗೆ ಹೊಸ ಅಸ್ತ್ರ ದೊರೆತಂತಾಗಿದೆ.
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಸರಿಯಾದ ರೀತಿಯಲ್ಲಿ ಅನುದಾನ ಹಂಚಿಕೆ ಆಗದಿದ್ದಲ್ಲಿ, ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡದೆ ನಮಗೆ ಅನ್ಯ ಆಯ್ಕೆಯೇ ಇಲ್ಲ’ ಎಂಬ ಸಂಸದ ಸುರೇಶ್ ಹೇಳಿಕೆಯನ್ನು ‘ದೇಶ ವಿಭಜನೆಗೆ ಕಾಂಗ್ರೆಸ್ ಮುಂದಾಗಿದೆ’ ಎಂದು ಬಿಜೆಪಿ ನಾಯಕರು ವ್ಯಾಖ್ಯಾನಿಸಿದ್ದರೆ, ಕಾಂಗ್ರೆಸ್ ಪಕ್ಷ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಬದಲಿಗೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಬೇಸತ್ತು ಸುರೇಶ್ ಆ ರೀತಿ ಮಾತನಾಡಿದ್ದಾರೆ ಎಂಬ ಸಮರ್ಥನೆಗಿಳಿದಿದೆ.
‘ದೇಶ ವಿಭಜನೆ ಬಗ್ಗೆ ಹೇಳಿಕೆ ನೀಡುವವರು ಯಾವುದೇ ಪಕ್ಷದವರಾಗಿದ್ದರೂ ನಾವು ಅಂಥ ಹೇಳಿಕೆ ಸಹಿಸುವುದಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತವೊಂದೇ. ನಾವು ಅದೇ ರೀತಿ ಇರುತ್ತೇವೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಮಾತನಾಡುತ್ತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಸಂಸತ್ನಲ್ಲೂ ಡಿ.ಕೆ. ಸುರೇಶ್ ಗದ್ದಲ: ಗ್ರೆಸ್ ಸಂಸದ ಡಿ.ಕೆ. ಸುರೇಶ್ ಗುರುವಾರ ನೀಡಿದ ಹೇಳಿಕೆ ಶುಕ್ರವಾರ ಸಂಸತ್ತಿನ ಉಭಯ ಸದನ ಗಳಲ್ಲೂ ಗದ್ದಲಕ್ಕೆ ಕಾರಣವಾಯಿತು. ಹಲವು ಕಾಂಗ್ರೆಸ್ ನಾಯಕರೇ ಸುರೇಶ್ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿವಾದಿತ ಹೇಳಿಕೆ ಹಿನ್ನೆಲೆಯಲ್ಲಿ ಸಂಸದ ಸುರೇಶ್ ಬೇಷರತ್ ಕ್ಷಮೆ ಕೋರಬೇಕು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ದೇಶ ವಿಭಜನೆಯ ಮಾತನಾಡಿರುವ ಸುರೇಶ್ಗೆ ಒಂದು ನಿಮಿಷವೂ ಸಂಸದರಾಗಿ ಮುಂದುವರಿಯುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಕಾನೂನು ಸಚಿವ ರವಿಶಂಕರ್ ದ್ ಹೇಳಿದರು.
ಸಂಸದ ಡಿಕೆಸು ವಿರುದ್ಧ ಕೋರ್ಟ್ಗೆ ದೂರು: ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಬಗ್ಗೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್ ವಿರುದ್ಧ ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಇಲ್ಲಿನ 2ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ ದೂರು ನೀಡಿದ್ದಾರೆ. ನಾವು ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಇಡಬೇಕಾಗುತ್ತದೆ ಎಂಬ ರೀತಿಯಲ್ಲಿ ಪ್ರತ್ಯೇಕವಾದಿ ಮಾನಸಿಕತೆ ಬಿತ್ತುವ ಪ್ರಚೋದನಕಾರಿ, ದೇಶವಿರೋಧಿ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆಯಿಂದ ಅಸಂಖ್ಯಾತ ದೇಶಭಕ್ತರಿಗೆ ಘಾಸಿ ಉಂಟಾಗಿದೆ. ಹಾಗಾಗಿ ಮಂಗಳೂರು ಉತ್ತರ ಪೊಲೀಸ್ ಠಾಣಾಧಿಕಾರಿಗೆ ತನಿಖೆ ಮತ್ತು ವರದಿಗಾಗಿ ಆದೇಶಿಸುವಂತೆ ವಿಕಾಸ್ ಪುತ್ತೂರು ದೂರಿನಲ್ಲಿ ವಿನಂತಿಸಿದ್ದಾರೆ.
ನಮ್ಮ ಪಕ್ಷದ ಸಂಸದರ ಹೇಳಿಕೆಯನ್ನು ಖಂಡಿತ ಒಪು್ಪವುದಿಲ್ಲ. ದೇಶ ಒಡೆಯುವ ಬಗ್ಗೆ ಯಾರೇ ಮಾತನಾಡಿದರೂ ಅದನ್ನು ಸಹಿಸುವುದಿಲ್ಲ. ಯಾವ ಪಕ್ಷದವರೇ ಆದರೂ ಈ ರೀತಿ ಮಾತನಾಡುವುದು ಸರಿಯಲ್ಲ.
| ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ
ಬಜೆಟ್ ಸಂಬಂಧ ಡಿ.ಕೆ. ಸುರೇಶ್ ಕೋಪದಲ್ಲಿ ದೇಶ ವಿಭಜನೆ ಬಗ್ಗೆ ಮಾತನಾಡಿದ್ದಾರಷ್ಟೇ. ಅವರ ಹೇಳಿಕೆಯನ್ನು ತಪ್ಪಾಗಿ ಗ್ರಹಿಸೋದು ಬೇಡ. ದೇಶ ಅಖಂಡವಾಗಿ ರಬೇಕು. ವಿಭಜನೆ ಮಾಡಿ ಅಂತಾ ಕೇಳೋಕೆ ಆಗಲ್ಲ. ಬಿಜೆಪಿಯವರಿಗೆ ಇಂಥ ವಿಷಯ ಬಿಂಬಿಸೋದು ಬಿಟ್ಟರೆ ಬೇರೇನೂ ಕೆಲಸ ಇಲ್ಲ.
| ಸಿದ್ದರಾಮಯ್ಯ ಸಿಎಂ
ಸುರೇಶ್ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ದೇಶ ವಿಭಜಿಸುವ ಕಾಂಗ್ರೆಸ್ ಪ್ರಯತ್ನ ಇನ್ನೂ ಮುಂದುವರಿದಿದೆ. ಈ ವಿಚಾರವಾಗಿ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಹಾಗೂ ಕ್ಷಮೆ ಕೋರಬೇಕು. ನೈತಿಕ ಸಮಿತಿಯಿಂದ ವಿಚಾರಣೆ ನಡೆಸಬೇಕು.
| ಪ್ರಲ್ಹಾದ ಜೋಶಿ ಸಚಿವ