ನ್ಯೂಸ್

ಪರಿಸ್ಥಿತಿ ಸುಧಾರಣೆ ಖಚಿತ, ಎಚ್ಚರ ತಪ್ಪಿದರೆ ಆಪತ್ತು! ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ

ಮೋಹನ್​ ಶೆಟ್ಟಿ

| ರಾಜಗುರು ಬಿ.ಎಸ್. ದ್ವಾರಕಾನಾಥ್

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ರಾಜಕೀಯ, ಸಾಮಾಜಿಕ, ಆರ್ಥಿಕ ಮುಂತಾದ ಕ್ಷೇತ್ರಗಳಲ್ಲಿ ಏನೇನು ಬದಲಾವಣೆಗಳಾಗಲಿವೆ, ಯಾವ್ಯಾವ ಪ್ರಮುಖರು ಏನಾಗಲಿದ್ದಾರೆ, ಮಳೆ-ಬೆಳೆ ಪರಿಸ್ಥಿತಿ ಹೇಗಿರುತ್ತದೆ, ವಾತಾವರಣದ ಸ್ಥಿತಿ-ಗತಿ ಏನು ಮುಂತಾದ ವಿಷಯಗಳ ಮುನ್ನೋಟ ಇದು.

ಸಂಚಿತಯೇದ್ಭಗವತಶ್ಚರಣಾರವಿಂದಂವಜ್ರಾಂಕುಶಧ್ವಜ ಸರೋರುಹ ಲಾಂಛನಾಢ್ಯಂ |ಉತ್ತುಂಗ ರಕ್ತವಿಲಸನ್ನಖ ಚಕ್ರವಾಲಜ್ಯೋತ್ಸಾ್ನಭಿರಾಹತ ಮಹದ್ ಹೃದಯಾಂಧಕಾರಂ ||

ವಿಶ್ವಾವಸು ನಾಮ ಸಂವತ್ಸರ 2025ರ ಮಾರ್ಚ್ 30ರಿಂದ 2026 ಮಾ.19ರವರೆಗೂ ಇರಲಿದೆ. ಈ ಸಂವತ್ಸರದ ನಾಯಕ ಸೂರ್ಯನೇ ಆಗಿದ್ದಾನೆ. ಜಗತ್ತಿಗೆ ಬೆಳಕು ಕೊಡುವ ಸೂರ್ಯನೇ ನಾಯಕನಾಗಿರುವುದರಿಂದ ಅವನೇ ಎಲ್ಲ ಭವಿಷ್ಯ ತೀರ್ಮಾನಿಸುತ್ತಾನೆ. ಸೂರ್ಯನಲ್ಲೇ ಎಲ್ಲಾ ದೇವತೆಗಳು ಒಳಗೂಡಿದ್ದಾರೆಂದು ಶಾಸ್ತ್ರಗಳೇ ಹೇಳಿವೆ. ಅವನ ಕಾಂತಿಯಿಂದಲೇ ಜಗತ್ತಿಗೆ ಬೆಳಕಾಗುತ್ತದೆ. ಅಗಸ್ಱರು ಹೇಳಿರುವಂತೆ, ದಿಕ್ಪಾಲಕರು, ಪ್ರಧಾನ ದೇವತಾ ಶಕ್ತಿ ಸೂರ್ಯನಲ್ಲಿ ಸಾಂದ್ರವಾಗಿದ್ದಾರೆ. ಸೂರ್ಯ ಇಲ್ಲದೇ ನೀರಿಲ್ಲ. ನೀರಿಲ್ಲದೇ ಬೆಳೆ ಇಲ್ಲ, ಬೆಳೆ ಇಲ್ಲದೇ ಅನ್ನ ಇಲ್ಲ. ಅನ್ನ ಇಲ್ಲದೇ ತ್ರಾಣವೂ ಇಲ್ಲ. ಸಮಸ್ತ ದೇವತಾ ಶಕ್ತಿ ಸೂರ್ಯನಲ್ಲಿ ಅಡಗಿದೆ.

ಮನುಷ್ಯರಿಗೆ ಆರೋಗ್ಯ ಬಹಳ ಮುಖ್ಯ. ಜನರ ಜೀವನದಲ್ಲಿ ಸೂರ್ಯ ಮುಖ್ಯವಾಗುವುದರಿಂದ ಸಮಸ್ತ ಜನರು ಸೂರ್ಯನನ್ನು ಆರಾಧಿಸಲಿ. ಜೀವನ ನಿರ್ವಿಘ್ನವಾಗಲಿ, ಲೋಕ ಕಂಟಕಗಳು ದೂರವಾಗಲಿ, ರಾಷ್ಟ್ರ-ರಾಜ್ಯ ಆಳುವವರು ವಿಘ್ನಗಳನ್ನು ಕೊಡಲಿಯಲ್ಲಿ ಕತ್ತರಿಸಲಿ.

ಹೊಸ ಸಂವತ್ಸರದ ಆಗುಹೋಗು: ದಕ್ಷಿಣ ಭಾರತದಲ್ಲಿ ಯುಗಾದಿಗೆ ಬಹಳ ಮಹತ್ವವಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯುಗಾದಿ ಆಚರಿಸುತ್ತಾರೆ. ಯುಗದ ಆರಂಭವೇ ಯುಗಾದಿ. ಆದಿ ಎಂದರೆ ಪ್ರಾರಂಭ. ಎಷ್ಟೋ ಯುಗ ಕಳೆದಿದ್ದೇವೆ. ಮೇಷ ರಾಶಿಯಲ್ಲಿ ಸಂಕ್ರಮಣ ಬಂದಾಗ ಸೌರ ಯುಗಾದಿಯಾಗುತ್ತದೆ. ಮಾ. 30ರಂದು ಚಾಂದ್ರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. 60 ಸಂವತ್ಸರಗಳಿದ್ದು, ಇದು 39ನೇ ಸಂವತ್ಸರ.

ಶತಾಯುಃ ವಜ್ರದೇಹಾಯ ಸರ್ವಸಂಪತ್ಕರಾಯಚಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ಎಂದು ಹೇಳುತ್ತಾ, ಜೀವನದಲ್ಲಿ ಕಹಿ ಬಂದರೂ ಸ್ವೀಕರಿಸೋಣ, ಸಿಹಿ ಬಂದರೂ ಸ್ವೀಕರಿಸೋಣ. ನೋವು ಬಂದರೂ ಸ್ವೀಕರಿಸೋಣ. ಸಂತೋಷ ಬಂದರೂ ಸ್ವೀಕರಿಸೋಣ. ಕಳೆದ ಬಾರಿ ಯುಗಾದಿ ಸಂದರ್ಭದಲ್ಲಿ ಹೇಳಿದ್ದ ಮುನ್ನೋಟದ ಅನೇಕ ಅಂಶಗಳನ್ನು ಕಣ್ಣಲ್ಲಿ ಕಂಡಿದ್ದೇವೆ. ಇದರಲ್ಲಿ ನನ್ನ ಶಕ್ತಿ ಏನಿಲ್ಲ. ವಾಗ್ದೇವಿ ಸರಸ್ವತಿ ನುಡಿಸಿದಂತೆ ಅಷ್ಟೇ. ಕಳೆದ ಸಂವತ್ಸರದಲ್ಲಿ ಪ್ರಜೆಗಳು ಅನುಭವಿಸಿದ ಕಷ್ಟ ಈ ಬಾರಿ ಇರದು. ಆಹಾರ-ಮಳೆ ಕೊರತೆ ಇರುವುದಿಲ್ಲ. ಬೆಳ್ಳಿ ಬಂಗಾರದ ಬೆಲೆ ಇನ್ನಷ್ಟು ಏರಲಿದೆ. ಇದಕ್ಕೆ ಲಂಗುಲಗಾಮು ಹಾಕಬೇಕಾದ ಸ್ಥಿತಿ ಎದುರಾಗಲಿದೆ.

ಈ ಸಂವತ್ಸರದಲ್ಲಿ ರಸಾಧಿಪ ಶನಿ. ಏನೇ ಕೊಟ್ಟರೂ ಶನಿ ತೂಕ ಮಾಡಿಯೇ ಕೊಡುವವನು. ಗುರು ಮನೆಗೆ ಈ ಶನಿ ಸಂಚಾರ ಮಾಡಿರುವುದರಿಂದ ಗುರುವಿಗೆ ಶರಣಾಗುವವರನ್ನು ಕಾಪಾಡುತ್ತಾನೆ. ಯಾರು ತಮ್ಮ ಸ್ವಾಸ್ಥ್ಯ ಕಳೆದುಕೊಂಡು ತಪ್ಪೆಸಗುತ್ತಾರೋ ಅವರಿಗೆ ಶಿಕ್ಷೆ ನಿಶ್ಚಿತ. ಬೇಳೆ ಕಾಳು, ಕಡಲೆ ಸೇರಿ ಧಾನ್ಯ ಉತ್ಪಾದನೆ ಚೆನ್ನಾಗಿರುತ್ತದೆ. ಬಿಸಿಲ ಬೇಗೆ ಜಾಸ್ತಿಯಾಗಲಿದೆ. ಪಶುಗಳಿಗೆ ನಾಯಕ ಯಮ. ಪಶು ಸಂರಕ್ಷಣೆ ಆಗಬೇಕಾಗುತ್ತದೆ. ಅರಣ್ಯಕ್ಕೆ ಆಪತ್ತು ಎದುರಾಗಲಿದೆ. ನೀರಿನ ಸಮಸ್ಯೆ, ಅಗ್ನಿ ಅವಘಡ ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿಯೊಂದು ದೇಶದಲ್ಲೂ ಅಧಿಕಾರಸ್ಥ ನಾಯಕರು ವೈರ ಮಾಡುತ್ತಾರೆ. ಸಮಾಧಾನದ ಸಮಾಚಾರ ಎಂದರೆ ಸೂರ್ಯನಿಗೆ ಚಂದ್ರನೇ ಮಂತ್ರಿಯಾಗಿರುವುದರಿಂದ ಒಳ್ಳೆಯ ಮಳೆ- ಬೆಳೆ ನಿರೀಕ್ಷಿಸಬಹುದು. ಭಾರತಕ್ಕೆ ಯುದ್ಧ ಭೀತಿ ಇದ್ದರೂ ಬಲಿಷ್ಠವಾಗಿರುವುದರಿಂದ ಅಪಾಯ ಇಲ್ಲ. ಪಾಕಿಸ್ತಾನ ಆಕ್ರಮಿತ ಭಾರತವನ್ನು ವಶಕ್ಕೆ ಪಡೆಯಲು ಇದು ಸೂಕ್ತ ಕಾಲ.

ಹಿಂದೆ ಮುಂದೆ: ಮಾ. 29ಕ್ಕೆ ಶನಿ ಬದಲಾವಣೆ ಇದೆ. ಸ್ವಕ್ಷೇತ್ರದಿಂದ ಗುರು ಮನೆಗೆ ಹೋಗುತ್ತಾನೆ. ಇದರ ಪರಿಣಾಮ ದೇಶದ ಯಾವ ರಾಜ್ಯಗಳೂ ಶಾಂತಿಯಿಂದ ಇರುವುದಿಲ್ಲ. ಪ್ರಜಾ ಸೌಖ್ಯ ಇಲ್ಲದೇ, ನುಡಿದಂತೆ ನಡೆಯದ ಆಳುವವರು ಕಾಣಿಸುತ್ತಾರೆ. ದರೋಡೆ, ಪೀಡಿಸುವುದು, ಅಪಹರಣ ಅವೆಲ್ಲ ಆಗಾಗ ಆತಂಕ ಉಳಿಯುವಂತೆ ಮಾಡುತ್ತವೆ. ಗ್ರಹಗಳ ಹಿಂದೆ ಮುಂದೆ ಓಡಾಟ ರಾಷ್ಟ್ರಕ್ಕೆ ಕೇಡು. ರಾಜನಾಗಿರುವವರ ಅಧಿಕಾರಕ್ಕೆ ಕುತ್ತು ಬರಲಿದೆ.

ಅಮೆರಿಕದಲ್ಲಿ ದೊಡ್ಡ ಅನಾಹುತ ಸಂಭವಿಸಲಿದೆ. ಆಳುವವರು ಪಾಠ ಕಲಿಯುವ ಸ್ಥಿತಿ ಉಂಟಾಗಲಿದೆ. ಏನು ಮಾಡಬೇಕೆಂದುಕೊಂಡಿದ್ದರೋ ಅದನ್ನು ಮಾಡಲಾಗದೇ ಸೋತು ಹೋಗುತ್ತಾರೆ. ಅಮೆರಿಕ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದೆ. ಕೆಲವು ತೀರ್ವನಗಳಿಂದ ಮತ್ತಷ್ಟು ಸಂಕಟ ಎದುರಾಗಲಿದೆ. ಆಳುವವರನ್ನು ಜನ ನಿಂದಿಸುತ್ತಾರೆ. ಬೆಂಕಿ ಘಟನೆಗಳು ಮರುಕಳಿಸಲಿವೆ. ಗೊಂದಲ ಏರ್ಪಡಲಿದೆ. ಚೀನಾ ಸ್ಥಿತಿ ಹೊರ ಜಗತ್ತು ಅಂದುಕೊಂಡಂತೆ ಇಲ್ಲವೆಂದು ಮತ್ತೊಂದಿಷ್ಟು ಉದಾಹರಣೆ ಸಹಿತ ಕಂಡುಬರಲಿದೆ. ಆಫ್ರಿಕಾ, ಆಸ್ಟ್ರೇಲಿಯಾ, ಯುಗೋಸ್ಲೋವಿಯಾ ಮುಂತಾದ ಕಡೆ ಸಮಸ್ಯೆ ಕಾಡಲಿದೆ. ಬಾಂಗ್ಲಾದೇಶದಲ್ಲಿ ಅರಾಜಕತೆ ಇದೆ. ಪಾಕಿಸ್ತಾನದಲ್ಲಿ ತಿನ್ನಲು ಅನ್ನ ಇಲ್ಲದೇ ಹೊಡೆದಾಟ, ಕಚ್ಚಾಟ ಆರಂಭವಾಗುತ್ತದೆ. ಯುನೈಟೆಡ್ ಕಿಂಗ್​ಡಮ್ ಇನ್ನಷ್ಟು ತೊಂದರೆಗೆ ಸಿಲುಕಲಿದೆ.

ವಿವಿಧ ಕಡೆ ಭೂಕಂಪ, ಮಳೆ ಹಾನಿ, ಪ್ರವಾಹ, ಬಿಸಿಲ ಗಾಳಿ, ಬೆಂಕಿಯಿಂದ ನಾಶ, ಬೆಟ್ಟ ಕುಸಿತದಂತಹ ಘಟನೆಗಳು ಸಂಭವಿಸುತ್ತವೆ. ಉತ್ತರ ಭಾರತದಲ್ಲಿ ಸಹ ಇಂತಹ ಘಟನೆಗಳು ಹೆಚ್ಚಾಗಲಿವೆ. ಜನಕ್ಕೆ ಬೆಂಕಿ ಮೇಲೆ ನಡೆದಂತೆ ಅನುಭವವಾಗಲಿದೆ. ರಾಷ್ಟ್ರದಲ್ಲಿ ಗಲಭೆ ಸೃಷ್ಟಿಸಲು ಪ್ರಯತ್ನ ಮುಂದುವರಿಯಲಿದೆ. ಕೊಂಕಣ ಭಾಗದಲ್ಲಿ ಜಲಪ್ರಳಯ, ಭೂಕುಸಿತ ಮರುಕಳಿಸಬಹುದು. ಜಲಸಾರಿಗೆಯಲ್ಲೂ ಆಪತ್ತು ಎದುರಾಗಬಹುದು. ವಿಮಾನ ಅಪಘಾತಗಳು ನಡೆಯುತ್ತವೆ.

ಬದಲಾವಣೆಯ ಗಾಳಿ: ಮಾ. 29ರಂದು ಶನಿ ಬದಲಾವಣೆ, ಮಾ. 30ರಂದು ಯುಗಾದಿ, ಮೇ 13ರಂದು ಗುರು, ರಾಹು ಕೇತು ಬದಲಾವಣೆ ಕೂಡ ಇದೆ. ಇದೆಲ್ಲವೂ ಕಂಪನ ಸೃಷ್ಟಿಗೆ ಕಾರಣವಾಗುತ್ತದೆ. ಮೇ 18ರಂದು ರಾಹು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದು, ಕೇತು ಸಿಂಹ ರಾಶಿಗೆ ಬರಲಿದೆ. ಎಲ್ಲವೂ ಒಟ್ಟಿಗೆ ಸೇರಿ ಆಪತ್ತು ವಿಪತ್ತು ಇದೆ. ರಾಹುಕೇತು ಬದಲಾವಣೆ ಸಮಯದಲ್ಲಿ ರಾಷ್ಟ್ರದಲ್ಲಿ ತುಂಬ ಗೊಂದಲ. ರಾಷ್ಟ್ರ ಆಳುವವರಿಗೆ ಭಯವೂ ಎದುರಾಗಲಿದೆ. ಸ್ವಪಕ್ಷೀಯರಲ್ಲೇ ಪಿತೂರಿಗಳು ನಡೆಯುತ್ತವೆ. ರಾಹು ಕೇತು ಬದಲಾವಣೆಯಿಂದ ಪ್ರಮುಖ ರಾಷ್ಟ್ರದ ಮುಖ್ಯಸ್ಥರಿಗೆ ಪ್ರಾಣಾಪಾಯ ಇದೆ. ಮೇ 18ರಿಂದ ಡಿಸೆಂಬರ್​ವರೆಗೆ ಅನಾಹುತ ನಡೆದು ಹೋಗುತ್ತದೆ.

ಮೇ ತಿಂಗಳಲ್ಲಿ ಗುರು ಬದಲಾವಣೆಯ ಪರಿಣಾಮ ರಾಷ್ಟ್ರದಲ್ಲಿ ಮಂತ್ರಿ ಮಂಡಲ ವಿಸ್ತರಣೆ ಮಾಡಬಹುದು ಅಥವಾ ಸಚಿವರನ್ನು ಬದಲಾಯಿಸಬಹುದು. ಈ ವರ್ಷದಲ್ಲಿ ನಡೆಯುವ ವಿವಿಧ ಚುನಾವಣೆಗಳಲ್ಲಿ ಸಮಬಲ ಹೋರಾಟ ನಿಶ್ಚಿತ. ರಾಷ್ಟ್ರ ಮಟ್ಟದಲ್ಲಿ ಒಗ್ಗಟ್ಟಿನಲ್ಲಿ ಬಿರುಕಾಗಬಹುದು. ಒಂದು ದೇಶ ಒಂದು ಚುನಾವಣೆ ಒಳ್ಳೆಯದಾದರೂ ಜಾರಿ ಕಷ್ಟ ಸಾಧ್ಯ. ರಾಹು ಕೇತು ಇರುವುದರಿಂದ ಮಿತ್ರಪಕ್ಷದವರ ನಡೆ ಮಹತ್ವದ ಪಡೆದುಕೊಳ್ಳಲಿದೆ. ಯಾವುದೇ ರಾಜ್ಯದಲ್ಲಿ ವಿಭಜನಾ ರಾಜಕೀಯಕ್ಕೆ ಬೆಲೆ ತೆರಬೇಕಾಗುತ್ತದೆ. ಅಶಾಂತಿ ಉಂಟಾಗಲಿದೆ. ರೈತರು, ಯೋಧರು, ಶ್ರಮಿಕ ವರ್ಗದವರ ಕಡೆ ಸರ್ಕಾರ ಗಮನ ಕೊಡದಿದ್ದರೆ ಜುಲೈ ವೇಳೆಗೆ ಹೋರಾಟಗಳು ಪ್ರಾರಂಭವಾಗಿ ಸರ್ಕಾರಗಳಿಗೆ ಬಿಸಿ ತಟ್ಟಲಿದೆ. ರಾಜ್ಯಗಳಲ್ಲಿ ಅಶಾಂತಿ ಉಂಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಭಾಯಿಸಬೇಕಿದೆ. ರಾಷ್ಟ್ರವನ್ನು ಕಾಪಾಡುವುದೇ ಮೊದಲ ಆದ್ಯತೆಯಾಗಬೇಕಾಗಿದೆ.

ಇವತ್ತಿನ ಸಂದರ್ಭದಲ್ಲಿ ರಾಹುಲ್ ಗಾಂಧಿ ಸ್ಥಿತಿ ಉತ್ತಮವಾಗಬೇಕಾದರೆ ಶ್ರಮಜೀವಿಗಳಿಗೆ, ಹೆಣ್ಣು ಮಕ್ಕಳಿಗೆ ಪ್ರಾಧಾನ್ಯ ನೀಡಿ ಪಕ್ಷಕ್ಕೆ ಹೊಸ ರೂಪ ಕೊಟ್ಟರೆ ಅವರು ಯಶ ಕಾಣಬಹುದು. ಇದೇ ವೇಳೆ ‘ಹೆಣ್ಣು ಮಗಳು ರಾಷ್ಟ್ರ ಆಳಲಿ’ ಎಂಬ ಕೂಗು ಏಳಬಹುದು. ಆಂಧ್ರದಲ್ಲಿ ಸರ್ಕಾರ ಜನಾನುರಾಗಿಯಾಗಿ ಅಧಿಕಾರ ಹಿಡಿದರೂ ವಂಶಾವಳಿಗೆ ಅವಕಾಶ ಕೊಡಲು ಹೋದರೆ ಹಿನ್ನಡೆಯಾಗಲಿದೆ. ತೆಲಂಗಾಣದಲ್ಲಿ ಸರ್ಕಾರಕ್ಕೆ ಇಕ್ಕಟ್ಟು ಸೃಷ್ಟಿಯಾಗುವುದು. ಕಾಶ್ಮೀರದಲ್ಲೂ ಅಧಿಕಾರದಲ್ಲಿರುವವರಿಗೆ ಆಪತ್ತು ಬರಲಿದೆ, ಆತಂಕದಲ್ಲಿ ಸಿಲುಕಿಕೊಳ್ಳುವರು. ಮಹಾರಾಷ್ಟ್ರದಲ್ಲಿ ಸಹ ಸಿಎಂ ಕುರ್ಚಿಗೆ ಆಪತ್ತು ಎದುರಾಗಲಿದೆ. ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಬಂದರೂ ಅಚ್ಚರಿಪಡಬೇಕಿಲ್ಲ.

ತಮಿಳುನಾಡಿನಲ್ಲಿ ರಾಷ್ಟ್ರದ ನೀತಿ ಸಂಹಿತೆ ಪ್ರಕಾರ ರಾಜ್ಯ ಆಳಬೇಕೆ ಹೊರತು, ಅಧಿಕಾರಕ್ಕಾಗಿ ಗೊಂದಲ ಸೃಷ್ಟಿಸಿದರೆ ಅದರ ಫಲವನ್ನು ಉಣ್ಣಬೇಕಾಗುತ್ತದೆ. ಅಲ್ಲಿನ ಆಳುವವರ ಆರೋಗ್ಯ ಕೂಡ ಕೈಕೊಡಲಿದೆ. ತಮಿಳುನಾಡಿನಲ್ಲಿ ಅಶಾಂತಿ ಹೆಚ್ಚಲಿದೆ. ಭಾಷಾ ಸಮಸ್ಯೆ ಹೆಚ್ಚಾಗಲಿದೆ.  ದೇಶದ ಒಗ್ಗಟ್ಟು ಮುರಿಯುವ ದನಿಗೆ ದಕ್ಷಿಣ ಭಾರತ ಕಾರಣವಾಯಿತು ಎಂಬ ಮಾತು ಬರಬಾರದು. ಭಾಷೆಯನ್ನು ಕಲಿತರೆ ಜ್ಞಾನ ವೃದ್ಧಿಸಿಕೊಳ್ಳಬಹುದು. ಭಾಷೆ ಹೇರಿಕೆ ಆಗದಿರಲಿ, ಕಡ್ಡಾಯ ಬೇಕಿಲ್ಲ. ದಕ್ಷಿಣ ಭಾರತದಲ್ಲಿ ಇಂತಹ ವಿಷಯದಲ್ಲಿ ಏರುಪೇರಾದರೆ ಭಾರತದಲ್ಲಿ ಶಾಂತಿ ಕದಡುತ್ತದೆ. ಒಂದು ಕೂಗು ಎಲ್ಲರನ್ನೂ ಎಬ್ಬಿಸಬಹುದು. ರಾಷ್ಟ್ರದ ಏಕತೆಯಲ್ಲಿ ಸುಖವಿದೆ ಎಂಬುದು ಆಳುವವರ ಮನಸ್ಸಿನಲ್ಲಿರಬೇಕಾಗುತ್ತದೆ.

ಮಳೆಬೆಳೆಗೆ ಕೊರತೆ ಇಲ್ಲ: ರಾಜ್ಯದಲ್ಲಿ ಕಾವೇರಿದ ವಾತಾವರಣ ಇರಲಿದೆ. ಆದರೆ, ಮಳೆ ಬೆಳೆಗೇನು ಕೊರತೆ ಕಾಣಿಸುತ್ತಿಲ್ಲ. ಆದರೆ, ಕರಾವಳಿಯಲ್ಲಿ ಬೆಳೆಗೆ ಹಾನಿಯಾಗುತ್ತದೆ. ಅಲ್ಲಿನ ಬೆಳೆಗಳ ಬೆಲೆ ಏರಲಿದೆ. ಕಾರವಾರ, ಕೊಡಗು, ಬೆಂಗಳೂರಿಗೂ ಮಳೆಯಿಂದ ಅಪಾಯ. ಸರ್ಕಾರ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವುದು ಸೂಕ್ತವಾದೀತು.

ರಾಜ್ಯ ಸರ್ಕಾರದ ಭವಿಷ್ಯವೇನು?: ರಾಜ್ಯದ ವಿಚಾರಕ್ಕೆ ಬಂದರೆ, ಗುರು ಮನೆಗೆ ಶನಿ ಸಂಚಾರದಿಂದ ದೀಪಾವಳಿ ಕಾರ್ತಿಕ ಮಾಸದವರೆಗೆ ಅಂದರೆ ಮೇನಿಂದ ಆರು ತಿಂಗಳು ಬದಲಾವಣೆ ನಿಶ್ಚಿತ. ಹಾಲಿ ನೇತೃತ್ವ ತೆಗೆದುಕೊಂಡವರು ಉಳಿದುಕೊಂಡರೆ ಇನ್ನಷ್ಟು ಗಟ್ಟಿಯಾಗುತ್ತಾರೆ. ಆದರೆ, ಮಾನಸಿಕ ಹಿಂಸೆಯಾಗಿ, ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಅಂತಹ ಸಂದರ್ಭದಲ್ಲಿ ಅವರ ಬದಲಾವಣೆಗೆ ಅವಕಾಶ ಕಾಣಿಸುತ್ತದೆ. ಅವರ ಕಷ್ಟದ ದಿನಗಳೂ ಆರಂಭವಾಗಲಿವೆ. ರಾಜ್ಯವನ್ನು ಕ್ಷತ್ರಿಯ ಆಳಬಹುದು. ಹಾಗೆಂದು ಯಾರನ್ನೂ ಗುರಿಯಾಗಿಸಿಕೊಂಡು ಹೇಳುತ್ತಿಲ್ಲ.

ರಾಜ್ಯ ಸರ್ಕಾರ ಅಸ್ಥಿರವಾಗೇ ಮುಂದುವರಿಯಲಿದೆ. ಒಂದಷ್ಟು ಸಚಿವರ ತಲೆದಂಡ ನಿಶ್ಚಿತ. ಅನಾರೋಗ್ಯ, ವಿವಿಧ ಪ್ರಕರಣಗಳು ಇದಕ್ಕೆ ಕಾರಣವಾಗಬಹುದು. ಒಟ್ಟಾರೆ ಸಕಲ ಜೀವರಾಶಿಗೂ ಸನ್ಮಂಗಲವಾಗಲಿ, ಈ ಸಂವತ್ಸರ ಶ್ರೇಯಸ್ಕರವಾಗಿರಲಿ ಎಂಬ ಆಶಯ. ಯಾರು ಸ್ವಧರ್ಮ ಆಚರಣೆಯಲ್ಲಿ ತೊಡಗಿಕೊಂಡಿದ್ದಾರೋ, ಧರ್ಮವನ್ನು ಪೂಜಿಸಿ ಗುರು ಮಾರ್ಗದಲ್ಲಿ ನಡೆಯುತ್ತಿದ್ದಾರೋ ಅವರಿಗೆ ಖಂಡಿತ ಒಳಿತಾಗಲಿದೆ.

ಜಪಾಕುಸುಮ ಸಂಕಾಂಶಂಕಾಶ್ಯಪೇಯಂ ಮಹಾದ್ಯುತಿಂತಮೋಘ್ನ ಸರ್ವಲೋಕಾನಾಂಪ್ರಣತೋಸ್ಮಿ ದಿವಾಕರಂ