Soul : ಮಾನವ ದೇಹದಲ್ಲಿ ನಿಜವಾಗಿಯೂ ಆತ್ಮವಿದೆಯೇ? ಇದು ಮಾನವಕುಲದ ಆರಂಭದಿಂದಲೂ ಉತ್ತರಕ್ಕಾಗಿ ಹುಡುಕುತ್ತಿರುವ ಪ್ರಮುಖ ಪ್ರಶ್ನೆಗಳಲ್ಲಿ ಒಂದಾಗಿದೆ. ಈ ಜಗತ್ತಿನಲ್ಲಿ ಜನಪ್ರಿಯವಾಗಿರುವ ಹೆಚ್ಚಿನ ಧರ್ಮಗಳು ಮತ್ತು ಧಾರ್ಮಿಕ ಗ್ರಂಥಗಳು ಇದರ ಬಗ್ಗೆ ಅನೇಕ ವಿಷಯಗಳನ್ನು ಹೇಳಿವೆ. ಆದರೆ, ಇಲ್ಲಿಯವರೆಗೆ, ಯಾವುದೇ ಅಧಿಕೃತ ಮೌಲ್ಯಮಾಪನವಾಗಲಿ ಅಥವಾ ವಿವರಣೆ ಎಲ್ಲಿಯೂ ಲಭ್ಯವಿಲ್ಲ. ಆತ್ಮ ಎಂದರೇನು ಎಂಬುದರ ನಿಖರವಾದ ವ್ಯಾಖ್ಯಾನವು ಕೂಡ ನಮ್ಮ ನಡುವೆ ಇಲ್ಲ. ಆದರೂ ಜನರಲ್ಲಿ ಮಾತ್ರ ಆತ್ಮದ ಮೇಲೆ ನಂಬಿಕೆ ಬಲವಾಗಿದೆ.
ಆದರೆ ಈಗ, ವೈಜ್ಞಾನಿಕ ಜಗತ್ತು ಮಾನವರಿಗೆ ಆತ್ಮವಿದೆ ಎಂಬುದನ್ನು ದೃಢಪಡಿಸಿದೆ. ನಾವು ಸತ್ತಾಗ ಮಾನವನ ಮೆದುಳಿನಿಂದ ವಿಶೇಷ ರೀತಿಯ ಶಕ್ತಿಯು ಹೊರಹೋಗುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದು ದೇಹವನ್ನು ಬಿಡುವ ಆತ್ಮವಾಗಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಅಮೆರಿಕದ ಅರಿಜೋನಾ ವಿಶ್ವವಿದ್ಯಾಲಯದ ಅರಿವಳಿಕೆ ತಜ್ಞ ಡಾ. ಸ್ಟುವರ್ಟ್ ಹ್ಯಾಮೆರಾಫ್ ಆತ್ಮದ ಕುರಿತಾದ ಸಂಶೋಧನೆಗಳನ್ನು ವಿವರಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವಿಗೀಡಾದ ರೋಗಿಗಳ ಮೆದುಳಿನ ಮೇಲೆ ನಡೆಸಿದ ಸಂಶೋಧನೆ ಮತ್ತು ಅವಲೋಕನಗಳ ಆಧಾರದ ಮೇಲೆ ಈ ಒಂದು ತೀರ್ಮಾನಕ್ಕೆ ಬರಲಾಗಿದೆ. ಸಾಯುವ ಕೊನೆಯ ಹಂತದಲ್ಲಿರುವ ರೋಗಿಗಳ ಲೈಫ್ ಸಪೋರ್ಟ್ ಡಿವೈಸ್ ತೆಗೆಯುವ ಮುನ್ನ ಅವರ ಮೆದುಳಿನಲ್ಲಿ ಸೆನ್ಸಾರ್ಗಳನ್ನು ಅಳವಡಿಸುವ ಮೂಲಕ ಸಂಶೋಧಕರು ಆತ್ಮದ ಅಧ್ಯಯನ ಮಾಡಿದ್ದಾರೆ.
ರೋಗಿಗಳ ರಕ್ತದೊತ್ತಡ ಮತ್ತು ಹೃದಯ ಬಡಿತ ನಿಂತ ನಂತರ ಅವರ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲಾಯಿತು. ಆ ಸಮಯದಲ್ಲಿ ಸತ್ತವರ ಮೆದುಳಿನಿಂದ ವಿಶೇಷ ರೀತಿಯ ಶಕ್ತಿಯು ಹೊರ ಹೋಗುತ್ತಿತ್ತು ಎಂಬುದನ್ನು ಅಧ್ಯಯನವು ತೋರಿಸುತ್ತದೆ. ಈ ಬಗ್ಗೆ ಡಾ. ಸ್ಟೀವರ್ಟ್ ಮತ್ತು ಅವರ ಸಂಶೋಧನಾ ತಂಡವು ಒಂದು ಅಭಿಪ್ರಾಯಕ್ಕೆ ಬಂದಿದ್ದು, ಇದು ಸಾವಿನ ಸಮೀಪವಿರುವ ಸ್ಥಿತಿಯಾಗಿರಬಹುದು ಅಥವಾ ಆತ್ಮವು ದೇಹವನ್ನು ತೊರೆಯುತ್ತಿರಬಹುದು ಎಂದು ಊಹಿಸಿದ್ದಾರೆ.
ಇನ್ನು ಪ್ರಜ್ಞೆಯು ಆಳವಾದ ಕ್ವಾಂಟಮ್ ಮಟ್ಟದಲ್ಲಿ ಸಂಭವಿಸುತ್ತದೆ ಎಂದು ವೈದ್ಯರು ನಂಬುತ್ತಾರೆ. ಅರಿವಳಿಕೆ, ಆಳವಾದ ನಿದ್ರೆ ಅಥವಾ ಸಾವಿನ ಸಮೀಪದ ಅನುಭವಗಳಂತಹ ಮಾನವ ದೇಹದ ಕಡಿಮೆ ಶಕ್ತಿಯ ಸ್ಥಿತಿಗಳಲ್ಲಿಯೂ ಜನರು ಪ್ರಜ್ಞೆ ಹೊಂದಿರುತ್ತಾರೆ ಎಂದು ಸಂಶೋಧಕರು ಗಮನಿಸಿದ್ದಾರೆ. ರೋಗಿಗಳು ಸತ್ತ ನಂತರ ಒಂದರಿಂದ 20 ನಿಮಿಷಗಳವರೆಗೆ ಅವರ ದೇಹದಲ್ಲಿನ ಶಕ್ತಿಯ ಸಂಕೇತಗಳನ್ನು ದಾಖಲಿಸಲು ಸಾಧ್ಯವಾಗಿದೆ ಎಂದು ತಜ್ಞರ ತಂಡ ಹೇಳುತ್ತದೆ. (ಏಜೆನ್ಸೀಸ್)