ನ್ಯೂಸ್

ಸರ್ಕಾರಕ್ಕೆ ಸೆಡ್ಡು ಹೊಡೆಯಲು ಕೇಸರಿ ಪಡೆ ಉತ್ಸುಕ: ಕೋರ್ ಕಮಿಟಿ ಸಭೆ ಇಂದು; ಬಿಎಸ್​ವೈ ನೇತೃತ್ವದಲ್ಲಿ ಒಗ್ಗಟ್ಟಿನ ಜಪ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಆಡಳಿತವೈಖರಿ, ನೀತಿ-ನಿರ್ಧಾರಗಳ ವಿರುದ್ಧ ಸೆಡ್ಡು ಹೊಡೆದು, ನಿರ್ಣಾಯಕ ಹೋರಾಟಕ್ಕೆ ಇಳಿಯಲು ರಾಜ್ಯದ ಕೇಸರಿ ಪಡೆ ಉತ್ಸುಕವಾಗಿದೆ.

ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಮೊದಲ ಬಾರಿಗೆ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯ ಪ್ರಮುಖರ ಸಮಿತಿ (ಕೋರ್ ಕಮಿಟಿ) ಸಭೆ ಸೋಮವಾರ ಬೆಳಗ್ಗೆ 11ಕ್ಕೆ ನಿಗದಿಯಾಗಿದೆ.

ಸಂಘಟನಾತ್ಮಕವಾಗಿ ಮುಂದಿನ ಕಾರ್ಯಕತಂತ್ರ, ಜನಪರ ಹೋರಾಟದ ತಂತ್ರಗಾರಿಕೆ ಹೆಣೆಯುವುದು ಈ ಸಭೆಯ ಪ್ರಧಾನ ಕಾರ್ಯಸೂಚಿ ಪಟ್ಟಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

ಬಿಎಸ್​ವೈ ನೇತೃತ್ವದಲ್ಲಿ ಒಗ್ಗಟ್ಟಿನ ಜಪ: ವಿಧಾನಸಭೆ, ರಾಜ್ಯ ಸಮಿತಿ ನಾಯಕತ್ವದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. ಸಂಘಟನೆ ಮತ್ತು ಪ್ರತಿಪಕ್ಷವಾಗಿ ಮಾಡಬೇಕಾದ ಕೆಲಸಗಳತ್ತ ಹೆಚ್ಚಿನ ಗಮನಹರಿಸಿರಿ. ಹಿರಿಯ ನಾಯಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಹೆಜ್ಜೆ ಹಾಕಿರಿ ಎಂಬ ವರಿಷ್ಠರ ಖಡಕ್ ಸೂಚನೆಯು ರಾಜ್ಯ ನಾಯಕರಿಗೆ ಚುರುಕು ಮುಟ್ಟಿಸಿದೆ. ಪ್ರಮುಖ ವಿಷಯಗಳಲ್ಲಿ ಸೂಕ್ತ ನಿರ್ಣಯಗಳನ್ನು ದೆಹಲಿ ನಾಯಕರ ವಿವೇಚನೆಗೆ ಬಿಟ್ಟು, ಸಮರ್ಥ ಪ್ರತಿಪಕ್ಷವಾಗಿ ಜವಾಬ್ದಾರಿನಿರ್ವಹಿಸುವ ಕಡೆಗೆ ಗಮನಹರಿಸಿದೆ.

ವಿದೇಶದಿಂದ ವಾಪಸ್ಸಾದ ಬಳಿಕ ಬಿಎಸ್​ವೈ ಕಾರ್ಯೋನ್ಮುಖರಾಗಿದ್ದು, ಅಸಮಾಧಾನಿತರ ಜತೆಗೆ ರಾಜಿ ಸಂಧಾನ, ಮನವೊಲಿಕೆ ಸಭೆ ನಡೆಸಿದ್ದಾರೆ. ಅಲ್ಲದೆ, ಕೆಲವು ಹಿರಿಯ ಮುಖಂಡರಿಗೂ ನಿರ್ದಿಷ್ಟ ಜವಾಬ್ದಾರಿ ಒಪ್ಪಿಸಿದ್ದಾರೆ.

ಬಣಗಾರಿಕೆ, ಗೊಂದಲಗಳು ಜೀವಂತವಾಗಿಟ್ಟರೆ ಪಕ್ಷಕ್ಕೆ ಹೆಚ್ಚಿನ ಹಾನಿ. ಕಾಂಗ್ರೆಸ್ ಇದರ ಲಾಭ ಪಡೆದರೆ, ಕಾರ್ಯಕರ್ತರಲ್ಲಿ ಸ್ಥೈರ್ಯ ಮತ್ತಷ್ಟು ಕುಸಿಯಲಿದ್ದು, ಜನರಿಗೆ ತಪು್ಪ ಸಂದೇಶ ಕೊಟ್ಟಂತಾಗಲಿದೆ ಎಂದು ಎಚ್ಚೆತ್ತಿರುವ ಮುಖಂಡರು, ವರಿಷ್ಠರ ಸೂಚನೆಯಂತೆ ಬಿಎಸ್​ವೈ ಸಾರಥ್ಯದಲ್ಲಿ ಒಗ್ಗಟ್ಟಿನ ಜಪ ಮಾಡುತ್ತಿದ್ದಾರೆ.

ಚರ್ಚೆ ಸಾಧ್ಯತೆ: ವಿಧಾನ ಮಂಡಲದ ಪ್ರತಿಪಕ್ಷ ನಾಯಕರು, ಪಕ್ಷದ ರಾಜ್ಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸಂಭಾವ್ಯ ಹೆಸರುಗಳ ಬಗ್ಗೆ ಕೋರ್​ಕಮಿಟಿ ಪ್ರಮುಖವಾಗಿ ರ್ಚಚಿಸುವ ಸಂಭವವಿದ್ದು, ಕಾರ್ಯಕರ್ತರಲ್ಲಿ ಚೈತನ್ಯ ತುಂಬಲು ಕೈಗೆತ್ತಿಕೊಳ್ಳಬೇಕಾದ ಸಂಘಟನಾ ಕಾರ್ಯಯೋಜನೆ ಬಗ್ಗೆ ಚರ್ಚೆಯಾಗಲಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲಿಯೇ ವರ್ಗಾವಣೆ ದಂಧೆ, ಗುತ್ತಿಗೆದಾರರ ಮೇಲೆ ಕಮಿಷನ್ ಒತ್ತಡದಂತಹ ಭ್ರಷ್ಟಾಚಾರದಲ್ಲಿ ತೊಡಗಿದ್ದು, ತನಿಖೆ ಹೆಸರಿನಲ್ಲಿ ದ್ವೇಷದ ರಾಜಕಾರಣ, ಸ್ವಜನಪಕ್ಷಪಾತ, ಯೋಜನೆಗಳ ನೆರವಿನಲ್ಲಿ ಮಿತಿಯಿಲ್ಲದ ಓಲೈಕೆ, ಗ್ಯಾರಂಟಿಗಳ ಯೋಜನೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಾಸನಾತ್ಮಕ ಅನುದಾನದಲ್ಲಿ 11,500 ಕೋಟಿ ರೂ. ಬಳಕೆ ಜತೆಗೆ ವಿವಿಧ ವೈಫಲ್ಯಗಳ ಬಗ್ಗೆ ರ್ಚಚಿಸಲಿದೆ.

ತೆಲಂಗಾಣ ವಿಧಾನಸಭೆ ಚುನಾವಣಾ ಪೂರ್ವಭಾವಿಯಾಗಿ ಪಕ್ಷದ ‘ಶಾಸಕರ ಪ್ರವಾಸ ಯೋಜನೆ’ ನಿಮಿತ್ತ ಮೆಹಬೂಬ್​ನಗರ ಜಿಲ್ಲೆಯ ಜಡ್ಚೆರ್ಲಾ ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರು ಮತ್ತು ಪ್ರಮುಖ ಸಭೆ ನಡೆಯಿತು. ತಳಮಟ್ಟದಿಂದ ಸಂಘಟಿಸಿ ಗೆಲುವಿಗೆ ಶ್ರಮಿಸುವ ಕುರಿತು ರ್ಚಚಿಸಲಾಯಿತು. | ಬಿ.ವೈ.ವಿಜಯೇಂದ್ರ ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ

ಕಾರ್ಯಕಾರಿಣಿ ಮುಂದೂಡಿಕೆ: ರಾಜ್ಯದ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರನ್ನು ತೆಲಂಗಾಣ ಚುನಾವಣೆ ಪೂರ್ವ ತಯಾರಿಗೆ ಉಸ್ತುವಾರಿಗಳನ್ನಾಗಿ ವರಿಷ್ಠರು ನೇಮಿಸಿದ್ದು, ಈ ಹಿನ್ನೆಲೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆ.26ಕ್ಕೆ ಆಯೋಜಿಸಿದ್ದ ಪಕ್ಷದ ರಾಜ್ಯ ಕಾರ್ಯಕಾರಿಣಿ ಮುಂದೂಡಿಕೆಯಾಗಿದೆ. ತೆಲಂಗಾಣ ವಿಧಾನಸಭೆ ಚುನಾವಣೆಗೆ ಉಸ್ತುವಾರಿಗಳಾಗಿರುವ ಶಾಸಕರು ನಿಯೋಜಿತ ವಿಧಾನಸಭೆ ಕ್ಷೇತ್ರದಲ್ಲಿ 10 ದಿನಗಳ ಕಾಲ (ಆ.28ರವರೆಗೆ) ಬಿಡಾರ ಹೂಡಿ, ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅನಾರೋಗ್ಯ ಹಾಗೂ ಭಾಷೆ ಸಮಸ್ಯೆಯ ಕಾರಣಕ್ಕೆ ಕೆಲವು ಶಾಸಕರನ್ನು ಕೈಬಿಡಲಾಗಿದೆ.