ನ್ಯೂಸ್

ನಡುರಸ್ತೆಯಲ್ಲಿ ಪ್ರೇಯಸಿಗೆ ಮಚ್ಚಿನಿಂದ ಹೊಡೆದವನು ಹುಚ್ಚನಲ್ಲ; ತನಿಖೆಯಲ್ಲಿ ಬಯಲಾಯ್ತು ಸತ್ಯ...

ಬೆಂಗಳೂರು: ನಿನ್ನೆ ಅನ್ನಪೂರ್ಣೇಶ್ವರಿನಗರದ ವಿಶಾಲ್​ ಮಾರ್ಟ್​ ಬಳಿ ನಡುರಸ್ತೆಯಲ್ಲಿ ಗಿರೀಶ್​ ಎಂಬ ಯುವಕ ನಿತ್ಯಶ್ರೀ ಎಂಬುವಳಿಗೆ ಮಚ್ಚಿನಿಂದ ಏಟು ಕೊಟ್ಟು ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಇವರಿಬ್ಬರೂ ಹಿಂದೆ ಪ್ರೇಮಿಗಳಾಗಿದ್ದರು. ಭಿನ್ನಾಭಿಪ್ರಾಯದಿಂದ ದೂರವಾಗಿದ್ದರು. ಆದರೆ ಇತ್ತೀಚೆಗೆ ಗಿರೀಶ್​ ಪದೇಪದೆ ನಿತ್ಯಶ್ರೀಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಮನೆ ಎದುರು ಬಂದು ಕಾಡುತ್ತಿದ್ದ. ಈ ಮಧ್ಯೆ ನಿತ್ಯಶ್ರೀಗೆ ಬೇರೆಯವನೊಂದಿಗೆ ಮದುವೆ ನಿಶ್ಚಯವಾಗಿತ್ತು. ನಿತ್ಯಶ್ರೀ ನಿನ್ನೆ ಶಾಪಿಂಗ್​ಗೆಂದು ಹೊರಬಂದ ಹೊತ್ತಲ್ಲಿ ಗಿರೀಶ್​ ಮಚ್ಚಿನಿಂದ ಆಕೆ ಮೇಲೆ ಹಲ್ಲೆ ಮಾಡಿದ್ದ. ಬಳಿಕ ಹೋಗಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ.

ಈ ಪ್ರಕರಣಕ್ಕೆ ಈಗೊಂದು ಟ್ವಿಸ್ಟ್​ ಸಿಕ್ಕಿದೆ. ಗಿರೀಶ್​ ಓರ್ವ ರಾಜ್ಯಮಟ್ಟದ ಕಬಡ್ಡಿ ಆಟಗಾರ. ಅವನೊಂದಿಗೆ ನಿತ್ಯಶ್ರೀ ತುಂಬ ಆತ್ಮೀಯ ಕ್ಷಣಗಳನ್ನು ಕಳೆದಿದ್ದಾಳೆ. ಮೂರು ವರ್ಷ ಇಬ್ಬರೂ ಜತೆಯಾಗಿಯೇ ಸುತ್ತಾಡಿದ್ದಾರೆ. ಪ್ರೀತಿ ಮಾಡಿದ್ದಾರೆ. ಅವರಿಬ್ಬರೂ ತಬ್ಬಿಕೊಂಡಿರುವ, ಮುತ್ತಿಡುತ್ತಿರುವ ಫೋಟೋಗಳೂ ಲಭ್ಯವಾಗಿವೆ. ಇಷ್ಟೆಲ್ಲ ಆದ ಮೇಲೆ ನಿತ್ಯಶ್ರೀಯೇ ಅವನ ಸ್ನೇಹವನ್ನು ಕಡಿದುಕೊಂಡಿದ್ದಳು. ಇವೆಲ್ಲ ಪೊಲೀಸ್​ ವಿಚಾರಣೆಯ ವೇಳೆ ಬೆಳಕಿಗೆ ಬಂದ ವಿಷಯಗಳು.

ಅಷ್ಟೇ ಅಲ್ಲ, ಈಗ ಆರು ತಿಂಗಳ ಹಿಂದೆ ಗಿರೀಶ್​ ಮತ್ತು ನಿತ್ಯಶ್ರೀ ಇಬ್ಬರೂ ಮನೆಯವರ ಭಯಕ್ಕೆ ಓಡಿ ಹೋಗಿದ್ದರು. ಆಗ ನಿತ್ಯಶ್ರೀಯ ಸಂಬಂಧಿಯೋರ್ವರು, ನಿಮಗಿಬ್ಬರಿಗೂ ಮದುವೆ ಮಾಡುತ್ತೇವೆ ಬನ್ನಿ ಎಂದು ಹೇಳಿ ನಂಬಿಸಿ ವಾಪಸ್​ ಕರೆಸಿದ್ದರು.

ಹೀಗೆ ವಾಪಸ್​ ಬಂದ ಬಳಿಕ ನಿತ್ಯಶ್ರೀಯನ್ನು ಮಂಡ್ಯದಿಂದ ಬೆಂಗಳೂರಿಗೆ ಕರೆತಂದು ಸಂಬಂಧಿಕರ ಮನೆಯಲ್ಲಿ ಇರಿಸಿದ್ದರು. ಕ್ರಮೇಣ ಅವಳ ಮೈಂಡ್ ವಾಶ್​ ಮಾಡಿ ಗಿರೀಶ್​ನಿಂದ ದೂರವಾಗುವಂತೆ ಮಾಡಿದ್ದರು.

ಇತ್ತ ನಿತ್ಯಶ್ರೀಯ ಜತೆ ಮಾತನಾಡಲಾಗದ ಗಿರೀಶ್​ ಹುಚ್ಚನಂತೆ ಆಗಿದ್ದ. ಮಾನಸಿಕವಾಗಿ ಕುಗ್ಗಿಹೋಗಿದ್ದ. ಒಂದು ತಿಂಗಳ ಹಿಂದೆಯೇ ಒಂದು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ.

ಈ ಮಧ್ಯೆ ನಿತ್ಯಶ್ರೀಯ ಮದುವೆ ಬೇರೆಯವನೊಂದಿಗೆ ಫಿಕ್ಸ್​ ಆಗಿದ್ದಕ್ಕೆ ರೋಸಿ ಹೋಗಿ, ಆಕೆಯ ಜೀವವನ್ನೇ ತೆಗೆಯಲು ಪ್ರಯತ್ನಿಸಿದ. ಮಚ್ಚಿನಿಂದ ಹಲ್ಲೆ ಮಾಡಿ, ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. (ದಿಗ್ವಿಜಯ ನ್ಯೂಸ್​)