ನ್ಯೂಸ್

ತನಿಖೆಗೆ ತಂತ್ರಜ್ಞಾನದ ಬಲ; ಅಪರಾಧ ನಿಯಂತ್ರಣಕ್ಕೆ ಪೂರಕ

ಅಪರಾಧ ಕೃತ್ಯ ಎಸಗಿ ದೇಶ ತೊರೆದವರನ್ನು ಮತ್ತು ವಿದೇಶಗಳಲ್ಲೇ ಕುಳಿತು ಭಾರತದ ವಿರುದ್ಧ ಕಾರ್ಯಾಚರಿಸುವವರನ್ನು ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿತ್ತು. ಆದರೆ, ತಂತ್ರಜ್ಞಾನದ ಅಳವಡಿಕೆ ಇನ್ಮುಂದೆ ಈ ಸವಾಲುಗಳನ್ನು ಮಣಿಸಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳವಾರ ಭಾರತ್​ಪೋಲ್ ಪೋರ್ಟಲ್​ಗೆ ಚಾಲನೆ ನೀಡಿದ್ದು, ಇದರಿಂದ ಕೇಂದ್ರ ಮತ್ತು ರಾಜ್ಯಗಳ ತನಿಖಾ ಸಂಸ್ಥೆಗಳು ಇಂಟರ್​ಪೋಲ್​ನೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ. ಪರಿಣಾಮ, ತನಿಖೆಗೆ ವೇಗ ಸಿಗಲಿದ್ದು, ಅಪರಾಧಿಗಳ ಹೆಡೆಮುರಿ ಕಟ್ಟಿ, ಭಾರತಕ್ಕೆ ಕರೆತರಲು ಸಾಧ್ಯವಾಗಲಿದೆ.

ಭಾರತ್​ಪೋಲ್ ಪೋರ್ಟಲ್ ಮೂಲಕ ದೇಶವು ಅಂತಾರಾಷ್ಟ್ರೀಯ ತನಿಖೆಯಲ್ಲಿ ಹೊಸ ಯುಗವನ್ನು ಪ್ರವೇಶಿಸಲಿದೆ. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ವಿಗೇಷನ್ (ಸಿಬಿಐ) ಮಾತ್ರ ಇಷ್ಟುದಿನಗಳವರೆಗೆ ಇಂಟರ್​ಪೋಲ್​ನೊಂದಿಗೆ ಕೆಲಸ ಮಾಡಲು ಸಾಧ್ಯವಾಗಿತ್ತು. ಆದರೆ, ಭಾರತ್​ಪೋಲ್ ಮೂಲಕ ಭಾರತೀಯ ತನಿಖಾ ಏಜೆನ್ಸಿಗಳು ಮತ್ತು ಎಲ್ಲ ರಾಜ್ಯಗಳ ಪೊಲೀಸರು ಇಂಟರ್​ಪೋಲ್​ನೊಂದಿಗೆ ಸಂಪರ್ಕ ಸಾಧಿಸಬಹುದು. ವಿವಿಧ ತನಿಖಾ ಏಜೆನ್ಸಿಗಳಿಗೆ ತನಿಖೆಯ ಹಂತದಲ್ಲಿ ಅಂತಾರಾಷ್ಟ್ರೀಯ ಪೊಲೀಸರಿಂದ ತಕ್ಷಣ ನೆರವು ಸಿಗಲಿದೆ. ವಿದೇಶಕ್ಕೆ ಪಲಾಯನಗೈದಿರುವ ಆರೋಪಿ ಮತ್ತು ಅಪರಾಧಿಗಳ ವಿವರಗಳನ್ನು ವಿವಿಧ ರಾಜ್ಯಗಳ ಪೊಲೀಸರು ಇಂಟರ್​ಪೋಲ್​ನೊಂದಿಗೆ ಹಂಚಿಕೊಳ್ಳಬಹುದಾಗಿದೆ. ಎಲ್ಲ ರಾಜ್ಯಗಳ ಅಧಿಕಾರಿಗಳಿಗೆ ಈ ಬಗ್ಗೆ ಸಿಬಿಐ ತರಬೇತಿ ನೀಡಲಿದೆ.

ಇತ್ತೀಚಿನ ದಿನಗಳಲ್ಲಿ ಅಪರಾಧಗಳ ಸ್ವರೂಪ ಬದಲಾಗಿದೆ. ಅದರಲ್ಲೂ, ಭಯೋತ್ಪಾದನೆಯು ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಆರ್ಥಿಕ ಪ್ರಗತಿ ಮತ್ತು ವಿಶ್ವಶಾಂತಿಗೆ ಮಾರಕವಾಗಿ ಪರಿಣಮಿಸಿದೆ. ಭಯೋತ್ಪಾದನೆಯ ಹಣಕಾಸು ಮೂಲಗಳು ಇನ್ನೂ ರಹಸ್ಯವಾಗಿದ್ದು, ತನಿಖೆಯಿಂದ ತಪ್ಪಿಸಿಕೊಳ್ಳುತ್ತಿವೆ. ಇದಕ್ಕೆ ಮುಖ್ಯ ಕಾರಣ ಈ ಜಾಲಗಳು ದೂರದ ಯಾವುದೋ ದೇಶದಲ್ಲಿ ಕುಳಿತು ಕಾರ್ಯಾಚರಿಸುವುದು. ಅಪರಾಧಿ ಯಾವ ದೇಶದಲ್ಲಿ ಇದ್ದಾನೆ ಎಂಬುದನ್ನು ಪತ್ತೆ ಹಚ್ಚಿದರೂ, ಅಲ್ಲಿ ಮಾಹಿತಿ ಮತ್ತು ಸಾಕ್ಷ್ಯಾಧಾರಗಳನ್ನು ಹೇಗೆ ಸಂಗ್ರಹಿಸುವುದು, ಅಪರಾಧಿಗಳು ಬಂಧಿಸಿ, ಇಲ್ಲಿ ಕರೆತರುವುದು ಹೇಗೆ ಎಂಬ ಹಲವು ಸಂದಿಗ್ಧಗಳು ತನಿಖಾ ಏಜೆನ್ಸಿ ಹಾಗೂ ಪೊಲೀಸ್ ಇಲಾಖೆಗೆ ಕಾಡುತ್ತಿದ್ದವು. ಆದರೆ, ದೀರ್ಘಾವಧಿಯ ಈ ಜಟಿಲ ಸಮಸ್ಯೆಗೆ ಇನ್ನುಂದೆ ಪರಿಹಾರ ಸಿಗಲಿದೆ. ಭಾರತ್​ಪೋಲ್ ಪೋರ್ಟಲ್ ಮೂಲಕ ಮಾಹಿತಿ ಹಂಚಿಕೊಂಡು, ಇಂಟರ್​ಪೋಲ್​ನ ಸಹಕಾರ ಪಡೆಯಬಹುದಾಗಿದೆ.

ಡಿಜಿಟಲ್ ವಂಚನೆ ಸೇರಿದಂತೆ ಸೈಬರ್ ಅಪರಾಧದ ಇತರ ಪ್ರಕರಣಗಳಲ್ಲೂ ಇದೇ ಸಮಸ್ಯೆ ಎದುರಾಗುತ್ತಿತ್ತು. ವಂಚಕರು ಹೊರದೇಶಗಳಲ್ಲಿ ಕುಳಿತು ಇಲ್ಲಿಯವರನ್ನು ಡಿಜಿಟಲ್ ಬಂಧನಕ್ಕೆ ಒಳಪಡಿಸುವುದು, ಹಣ ಲಪಟಾಯಿಸುವಂಥ ಪ್ರಕರಣಗಳು ಹೆಚ್ಚುತ್ತಲೇ ಸಾಗಿವೆ. ಮಾದಕದ್ರವ್ಯ ಕಳ್ಳಸಾಗಾಣಿಕೆ, ಮಕ್ಕಳ ಕಳ್ಳಸಾಗಾಣಿಕೆ ಹೀಗೆ ಭಯಂಕರ ಕೃತ್ಯಗಳ ಅಪರಾಧಿಗಳು ಹೊರದೇಶಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ತನಿಖಾ ಏಜೆನ್ಸಿಗಳ ಅಸಹಾಯಕತೆಯೇ ಇವರಿಗೆ ವರದಾನವಾಗಿ ಪರಿಣಮಿಸಿತ್ತು. ಆದರೆ, ಇನ್ನು ಮುಂದೆ ಹಾಗಾಗುವುದಿಲ್ಲ. ಆಯಾ ರಾಜ್ಯಗಳ ಪೊಲೀಸ್ ಇಲಾಖೆ ಮತ್ತು ತನಿಖಾ ಏಜೆನ್ಸಿಗಳು ಅಪರಾಧಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಸಹಿತ ಇತರ ಕಲರ್ ಕೋಡ್ ನೋಟಿಸ್ ಹೊರಡಿಸುವ ಪ್ರಕ್ರಿಯೆ ಸರಳವಾಗಲಿದೆ. ಇಂಟರ್​ಪೋಲ್ ಮತ್ತು ಇತರ ದೇಶಗಳ ಸಹಾಯದಿಂದ ಅಪರಾಧಿಗಳ ಕುರಿತ ಮಾಹಿತಿ ಶೀಘ್ರ ಲಭ್ಯವಾಗಲಿದೆ. ಭಯೋತ್ಪಾದನೆ, ಆರ್ಥಿಕ ವಂಚನೆ, ಆನ್​ಲೈನ್ ವಂಚನೆ ಸೇರಿದಂತೆ ಹೊಸ ಬಗೆಯ ಅಪರಾಧಗಳ ವಿರುದ್ಧ ಹೋರಾಡಲು ತಂತ್ರಜ್ಞಾನದ ಪ್ರಬಲ ಅಸ್ತ್ರ ಅವಶ್ಯವಾಗಿತ್ತು. ಈ ನಿಟ್ಟಿನಲ್ಲಿ ಭಾರತ್​ಪೋಲ್ ಮಹತ್ವದ ಮತ್ತು ನಿರ್ಣಾಯಕ ಹೆಜ್ಜೆಯಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಇದು ತಪ್ಪಿತಸ್ಥರ ಬಂಧನ ಮತ್ತು ಅವರನ್ನು ಕಾನೂನಿನ ಕ್ರಮಕ್ಕೆ ಒಳಪಡಿಸುವ ಪ್ರಕ್ರಿಯೆಗೆ ಪ್ರಬಲ ಮಾಧ್ಯಮವಾಗಿ ಬಳಕೆಯಾಗಲಿ.