ನ್ಯೂಸ್

ಒಮಾನ್​ನಿಂದ ವಾಪಸಾದ ವ್ಯಕ್ತಿಯೇ ಮುಳುವಾದ!

ನವದೆಹಲಿ: ಪ್ರವಾಸಿಗರ ಸ್ವರ್ಗ ರಾಜಸ್ಥಾನದಲ್ಲಿ ಮೊದಲ ಕರೊನಾ ಕೇಸು ಪತ್ತೆಯಾಗಿದ್ದು ಮಾರ್ಚ್ 2ರಂದು. ಇಟಲಿ ಮೂಲದ 69 ವರ್ಷದ ಪ್ರವಾಸಿಗರೊಬ್ಬರಿಗೆ ಕೋವಿಡ್-19 ಇರುವುದು ದೃಢವಾಗಿತ್ತು. 23 ಮಂದಿ ಪ್ರವಾಸಿಗರ ತಂಡದ ಸದಸ್ಯರಾಗಿದ್ದ ಅವರಿಗೆ ಆರಂಭದಲ್ಲಿ ಪರೀಕ್ಷೆ ನಡೆಸಿದ್ದಾಗ ಕರೊನಾ ನೆಗೆಟಿವ್ ವರದಿ ಬಂದಿತ್ತು. ಎರಡನೇ ಬಾರಿಗೆ ಟೆಸ್ಟ್ ನಡೆಸಿದ್ದ ವೇಳೆ ಕರೊನಾ ಪಾಸಿಟಿವ್ ದೃಢವಾಗಿತ್ತು. ಸಹಜವಾಗಿಯೇ ಇದು ಇಡೀ ತಂಡದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಎರಡು ದಿನಗಳ ಬಳಿಕ ಅವರ ಪತ್ನಿಗೂ ಪರೀಕ್ಷೆ ನಡೆಸಲಾಯ್ತು ಮತ್ತು ಅವರಲ್ಲೂ ವೈರಸ್ ಸೋಂಕಿರುವುದು ಖಚಿತವಾಗಿತ್ತು. ಅದಾಗಲೇ ಈ ಪ್ರವಾಸಿ ರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿತ್ತು ಮತ್ತು ಹತ್ತಾರು ಜನರನ್ನು ಸಂರ್ಪಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಮತ್ತು ರಾಜ್ಯ ಆರೋಗ್ಯ ಇಲಾಖೆ ಉನ್ನತಾಧಿಕಾರಿಗಳು ಸಭೆ ನಡೆಸಿ, ಇಟಲಿ ಪ್ರವಾಸಿಗರು ಭೇಟಿ ನೀಡಿದ್ದ ಹೊಟೇಲ್​ಗಳನ್ನು ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸುವಂತೆ ಕ್ರಮ ಕೈಗೊಳ್ಳಲಾಯಿತು. ಏತನ್ಮಧ್ಯೆ, ಮಾರ್ಚ್ 11ರಂದು ದುಬೈನಿಂದ ವಾಪಸಾಗಿದ್ದ 85 ವರ್ಷದ ವೃದ್ಧನೊಬ್ಬನಲ್ಲೂ ಕರೊನಾ ಸೋಂಕುಗಳು ಪತ್ತೆಯಾದವು. ಕರೊನಾ ಸೋಂಕು ಹಬ್ಬಿರುವ ರಾಜ್ಯಗಳಲ್ಲಿ ನಾಲ್ಕನೇ ಸ್ಥಾನದಲ್ಲಿರುವ ರಾಜ ಸ್ಥಾನದಲ್ಲಿ ಆರಂಭಿಕ ಹಂತದಲ್ಲಿ ಸೋಂಕು ಹರಡಿದ್ದು ಹೀಗೆ.

ಈವರೆಗೆ ರಾಜಸ್ಥಾನದಲ್ಲಿ 1659 ಸೋಂಕಿತರು ಬೆಳಕಿಗೆ ಬಂದಿದ್ದು, 230 ಮಂದಿ ಗುಣಮುಖರಾಗಿದ್ದಾರೆ. 25 ಮಂದಿ ಕರೊನಾಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 90ಕ್ಕಿಂತಲೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, ದಿನೆದಿನೇ ಕರೊನಾ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದೆ. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ತ್ವರಿತಗತಿಯ ಟೆಸ್ಟಿಂಗ್ ಸೇರಿ ಸೋಂಕಿನ ಲಕ್ಷಣವಿದ್ದವರನ್ನು ಹುಡುಕಿ ಪರೀಕ್ಷೆ ನಡೆಸಿದೆ. ಮೇಲಾಗಿ, ರಾಜ್ಯದ ಬಿಲ್ವಾರಾ ಜಿಲ್ಲೆಯಲ್ಲಿ ಕರೊನಾ ನಿಯಂತ್ರಿಸಿದ ಮಾದರಿ ದೇಶಕ್ಕೆ ಮಾದರಿ ಎಂದು ಕೇಂದ್ರ ಸರ್ಕಾರವೇ ಗುಣಗಾನ ಮಾಡಿದೆ.

ಒಬ್ಬನಿಂದ 232 ಮಂದಿಗೆ!: ಮಾರ್ಚ್ 12ರಂದು ರಾಜ್ಯದ ರಾಮ್ ಗಂಜ್ ಮೂಲದ ವ್ಯಕ್ತಿಯೊಬ್ಬ ಓಮಾನ್ ದೇಶದಿಂದ ವಾಪಸಾಗಿದ್ದ. ಮಾರ್ಚ್ 26ರಂದು ಆತನಿಗೆ ಕರೊನಾ ಸೋಂಕಿರುವುದು ತಿಳಿದುಬಂದಿತ್ತು. ಆದರೆ, ಮಾರ್ಚ್ 12ರಂದು ಬಂದಿದ್ದ ವ್ಯಕ್ತಿ, ಕ್ವಾರಂಟೈನ್​ನಲ್ಲಿರುವ ಬದಲು ಹತ್ತಾರು ಮಂದಿಯನ್ನು ಭೇಟಿ ಮಾಡಿದ್ದ. ಇದರಿಂದಾಗಿ ಆತನಲ್ಲಿದ್ದ ಸೋಂಕು ಇತರರಿಗೂ ಹರಡಿತ್ತು. ಸ್ವಯಂ ದಿಗ್ಬಂಧನದಲ್ಲಿರಬೇಕು ಎಂದು ಅಧಿಕಾರಿಗಳು ಆತನಿಗೆ ನಿರ್ದೇಶನ ನೀಡಿದ್ದರೂ, ಅದನ್ನು ಆತ ಕಿವಿಗೆ ಹಾಕಿಕೊಂಡಿರಲಿಲ್ಲ. ಆತನ ಬೇಜವಾಬ್ದಾರಿತನ ಇತರರಿಗೆ ಮಾರಣಾಂತಿಕವಾಗಿ ಪರಿಣಮಿಸಿತ್ತಲ್ಲದೆ, ಕರೊನಾ ಹರಡುವಿಕೆಯೂ ವ್ಯಾಪಕಗೊಂಡಿತ್ತು. ಇದರಿಂದಾಗಿ ರಾಮ್ಂಜ್ ನಲ್ಲಿ ಕರ್ಫ್ಯೂ ಹೇರಲಾಯ್ತು ಹಾಗೂ ಮನೆ ಮನೆಗೆ ತೆರಳಿ ಟೆಸ್ಟ್​ಗಳನ್ನು ನಡೆಸಲು ಸರ್ಕಾರ ತೀರ್ವನಿಸಿತು. ಏಪ್ರಿಲ್ 16ಕ್ಕೆ ಸಿಕ್ಕ ಮಾಹಿತಿ ಪ್ರಕಾರ ಆತನೊಬ್ಬನ ಕಾರಣದಿಂದಾಗಿ 232 ಮಂದಿಗೆ ಕರೊನಾ ಸೋಕು ಹಬ್ಬಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಉತ್ತರಾಖಂಡದಲ್ಲಿ 46 ಸೋಂಕಿತರು: ಬೆಟ್ಟಗುಡ್ಡಗಳ ರಾಜ್ಯ ಉತ್ತರಾಖಂಡದಲ್ಲಿ ಈವರೆಗೆ 46 ಕರೊನಾ ಸೋಂಕಿತರು ಪತ್ತೆಯಾಗಿದ್ದು, 18 ಮಂದಿ ಗುಣಮುಖರಾಗಿದ್ದಾರೆ. ಖುಷಿಯ ಸುದ್ದಿ ಎಂದರೆ ಸೋಂಕಿಗೆ ಈವರೆಗೆ ಯಾರೂ ಮೃತಪಟ್ಟಿಲ್ಲ. ರಾಜಧಾನಿ ಡೆಹರಾಡೂನ್ ನಲ್ಲಿ 18 ಸೋಂಕಿತರಿದ್ದು, ಹೆಚ್ಚು ಕೇಸುಗಳು ಇಲ್ಲಿಂದಲೇ ವರದಿಯಾಗಿವೆ. ಡೆಹರಾಡೂನ್, ನೈನಿತಾಲ್ ಮತ್ತು ಹರಿದ್ವಾರ ಜಿಲ್ಲೆಗಳನ್ನು ಹಾಟ್​ಸ್ಪಾಟ್ ಜಿಲ್ಲೆಗಳಾಗಿ ಗುರುತಿಸಲಾಗಿದೆ. ಈ ನಡುವೆ ಹೃಷಿಕೇಶದಲ್ಲಿ ಗಂಗಾನದಿಯ ಸನಿಹದಲ್ಲಿದ್ದ ಗುಹೆಯೊಂದರಲ್ಲಿ ಅಡಗಿದ್ದ 6 ಮಂದಿ ವಿದೇಶಿಗರನ್ನು ಪೊಲೀಸರು ಪತ್ತೆ ಹಚ್ಚಿದ್ದು, ಅವರನ್ನು ಧರ್ಮಶಾಲೆಯಲ್ಲಿರುವ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಟರ್ಕಿ, ನೇಪಾಳ, ಉಕ್ರೇನ್, ಫ್ರಾನ್ಸ್, ಅಮೆರಿಕ ಮೂಲದ ಈ ವಿದೇಶಿ ಪ್ರವಾಸಿಗರು, ಡಿಸೆಂಬರ್ 7ರಂದು ಭಾರತಕ್ಕೆ ಬಂದಿದ್ದರು. ಮಾರ್ಚ್ 24ರ ತನಕ ಮುನಿ ಕಿ ರೇಟಿ ಎಂಬ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ, ಕೈಲಿದ್ದ ದುಡ್ಡೆಲ್ಲಾ ಖರ್ಚಾಗಿದ್ದರಿಂದ ಪಕ್ಕದಲ್ಲಿದ್ದ ಗುಹೆಯೊಂದಕ್ಕೆ ತೆರಳಿ, ಅಲ್ಲೇ ಉಳಿದುಕೊಂಡಿದ್ದರು. ಸ್ಥಳೀಯರ ಮಾಹಿತಿ ಆಧರಿಸಿ ಅವರನ್ನು ಪತ್ತೆ ಹಚ್ಚಿದ ಪೊಲೀಸರು ಎಲ್ಲರನ್ನೂ ಧರ್ಮಶಾಲೆಗೆ ಕಳುಹಿಸಿದ್ದಾರೆ.

ದಿಕ್ಕೆಟ್ಟ ರಾಜಧಾನಿ ಜೈಪುರ

ರಾಜಸ್ತಾನದ ರಾಜಧಾನಿ ಜೈಪುರವೊಂದರಲ್ಲೇ 619 ಕರೊನಾ ಸೋಂಕಿತರಿದ್ದು, 13 ಮಂದಿ ಮೃತಪಟ್ಟಿದ್ದಾರೆ. ಕೇಂದ್ರ ನೇಮಕ ಮಾಡಿರುವ ಅಂತರ್ ಸಚಿವಾಲಯ ಸಮಿತಿ ಸದಸ್ಯರು ಈಗಾಗಲೇ ಜೈಪುರಕ್ಕೆ ಬಂದಿಳಿದಿದ್ದು, ಹಾಲಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಕರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರದ ನೀತಿಗಳನ್ನು ಪ್ರಶ್ನಿಸಿರುವ ಬಿಜೆಪಿ ಸಂಸದ ರಾಮಚರಣ್ ಬೋರಾ ಅವರು ಈಚಿಗೆ ಕೇಂದ್ರಕ್ಕೆ ಪತ್ರ ಬರೆದು, ತಮ್ಮ ಅಸಮಾಧಾನ ಹೊರಹಾಕಿದ್ದರು. ಜೈಪುರದ ರಾಮ್ ಗಂಜ್ ಎಂಬ ಸ್ಥಳದಿಂದಲೇ ಹೆಚ್ಚು ಕೇಸುಗಳು ಬೆಳಕಿಗೆ ಬರುತ್ತಿವೆ. ಆದರೆ, ರಾಜ್ಯ ಸರ್ಕಾರ ಯಾರ ಮೇಲೂ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದರು. ರಾಮ್ ಗಂಜ್ ನಿವಾಸಿಗರು ರಾಜ್ಯದ ಬಾರ್ಮರ್, ಸಿಕಾರ್ ಜಿಲ್ಲೆಗಳಿಗೂ ಭೇಟಿ ನೀಡಿ, ಅಲ್ಲಿನ ಜನರಿಗೂ ಕರೊನಾ ಸೋಂಕು ತಗುಲುವಂತೆ ಮಾಡಿದ್ದಾರೆ. ಆರಂಭದಲ್ಲೇ ಜಿಲ್ಲೆಯ ಗಡಿಗಳನ್ನು ಮುಚ್ಚುತ್ತಿದ್ದರೆ ಹೀಗಾಗುತ್ತಿರಲಿಲ್ಲ. ಅದಲ್ಲದೆ, ಅಧಿಕ ಜನಸಂಖ್ಯೆ ಇರುವ ಪ್ರದೇಶಗಳಲ್ಲೇ ಕ್ವಾರಂಟೈನ್ ಘಟಕಗಳನ್ನು ನಿರ್ಮಾಣ ಮಾಡಿದ್ದೇಕೆ ಎಂದು ಸಂಸದರು ಪ್ರಶ್ನಿಸಿದ್ದಾರೆ. ಮಾರ್ಚ್ 26ರಿಂದ ಇಲ್ಲಿ ಕರ್ಫ್ಯೂ ಜಾರಿಯಲ್ಲಿದ್ದರೂ, ರಾಮ್ ಗಂಜ್ ನಿವಾಸಿಗರು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಕರ್ಫ್ಯೂ ಉಲ್ಲಂಘನೆ ಬಗ್ಗೆ ರಾಜ್ಯ ಸರ್ಕಾರವೂ ಗಂಭೀರ ಕ್ರಮ ಕೈಗೊಳ್ಳಲಿಲ್ಲ. ಕರೊನಾ ಸಂಖ್ಯೆ ಏರಿದ ಬಳಿಕ ಎಚ್ಚೆತ್ತುಕೊಂಡಿದ್ದ ಸರ್ಕಾರ, ಏಪ್ರಿಲ್ 6ರಿಂದ ರಾಮ್ ಗಂಜ್ ಸುತ್ತಮುತ್ತ ಕಠಿಣ ಲಾಕ್ ಡೌನ್ ನಿಯಮಗಳನ್ನು ಜಾರಿ ಮಾಡಿತ್ತು.