ನ್ಯೂಸ್

ರಾತ್ರಿ ಹುಟ್ಟುಹಬ್ಬ ಆಚರಿಸಿಕೊಂಡವ ಬೆಳಗ್ಗೆ ಶವವಾಗಿ ಪತ್ತೆ!

ತುಮಕೂರು: ಸಾವು ಯಾವಾಗ ಬಂದೊದಗುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಯಾವತ್ತಿಗೂ ಮರಣ ಎನ್ನುವುದು ಅನಿರೀಕ್ಷಿತ. ಇದೀಗ ಇಲ್ಲೊಬ್ಬ ವ್ಯಕ್ತಿ ಹುಟುಹಬ್ಬ ಆಚರಿಸಿಕೊಂಡ ಮರುದಿನ ಶವವಾಗಿ ಪತ್ತೆಯಾಗಿದ್ದಾನೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಚಿನ್ನಪ್ಪನಹಳ್ಳಿಯ ನಿವಾಸಿ ಮಂಜುನಾಥ್ ಎಂಬಾತ ರಾತ್ರಿ ಸ್ನೇಹಿತರ ಜತೆಗೂಡಿ ಸಂಭ್ರಮದಿಂದ ತನ್ನ ಹುಟ್ಟುಹಬ್ಬವನ್ನು ಆಚರಿಸಿದ್ದಾನೆ. ಬಳಿಕೆ ಮನೆಗೆ ಬಂದು, ಮತ್ತೆ ಮನೆಯಿಂದ ಹೊರ ಹೋಗಿದ್ದಾನೆ. ಬೆಳಗ್ಗೆಯಾದರೂ ಹೊರ ಹೋಗಿದ್ದ ಮಂಜುನಾಥ್ ಇನ್ನೂ ಬಂದಿಲ್ಲವೆಂದು ಮನೆ ಮಂದಿ ಹುಡುಕಾಟ ಆರಂಭಿಸಿದ್ದಾರೆ.

ಮನೆಮಂದಿ ಹುಡುಕಾಟ ಆರಂಭಿಸುತ್ತಿದ್ದಂತೆ ಕುಣಿಗಲ್ ತಾಲೂಕಿನ ಕಿತ್ತನಾ ಮಂಗಲ ಕೆರೆಯಲ್ಲಿ ಮಂಜುನಾಥ್​ ಶವ ಪತ್ತೆಯಾಗಿದೆ. ಇದೀಗ ಮಂಜುನಾಥ್ ಸಾವಿನ ಬಗ್ಗೆ ಪತ್ನಿ ಹರ್ಷಿತಾ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಂಜುನಾಥ್ ಕೊಲೆಯಾಗಿ ಹೋದನೋ ಅಥವಾ ಮನೆಗೆ ಮರಳುವಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದನೋ ಎಂಬಿತ್ಯಾದಿ ಅನುಮಾನಗಳಿಗೆ ಪೊಲೀಸರ ತನಿಖೆಯಿಂದ ಉತ್ತರ ಸಿಗಬೇಕಿದೆ.