ನ್ಯೂಸ್

ಕಣ್ಣಿಗೆ ಕಾಣುವ ದೈವ ಸೂರ್ಯ

ಸಕಲ ಜೀವ ರಾಶಿಗಳಿಗೆ ಬದುಕಲು ಬೇಕಾಗಿ ನಿತ್ಯ ಬೆಳಗುವ ಇವನ ಶಾಖದ ಸ್ಪರ್ಶ ಮಾತ್ರದಿಂದ ಪಕ್ಷಿಗಳ ಕಲರವ, ಮೊಗ್ಗರಳುವ, ಕೊಟ್ಟಿಗೆಯ ಕರುವು ನಲಿದಾಡಿ ಅಂಬಾ ಎನ್ನುವ, ಹಸುಗೂಸು ಮೊಲೆಯುಂಡು ಮುಗುಳು ನಗುತ ಜೊಲ್ಜೇನ ಸುರಿಸುವ... ಇತ್ಯಾದಿ ಪ್ರಪಂಚದ ಚಟುವಟಿಕೆಗಳು ಚುರುಕಾಗುತ್ತವೆ. ಕಣ್ಣಿಗೆ ಕಾಣುವ ಈ ಸೂರ್ಯನು ಬೆಳಕಿನ ದೈವ. ದಿನಕರ , ಭಾಸ್ಕರ, ರವಿ, ಆದಿತ್ಯ ಮುಂತಾದ ಹತ್ತು ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಈತ ಬೇಸಿಗೆಗೆ ಮುನ್ನುಡಿ ಬರೆಯುವ ದಿನವೇ ಈ ರಥ ಸಪ್ತಮಿ. ಮಾಘ ಮಾಸದ ಶುಕ್ಲ ಪಕ್ಷದ ಏಳನೇ (ಸಪ್ತಮಿ) ದಿನ. ನವಗ್ರಹಗಳಲ್ಲೊಬ್ಬನಾದ ಇವನು ತನ್ನ ದಿಶೆಯನ್ನು ಸಿಂಹ ರಾಶಿಯಿಂದ ಮಕರ ರಾಶಿಯ ಕಡೆಗೆ ತಿರುಗಿಸುವ ಈ ಸುದಿನ ಭಾರತೀಯ ಹಿಂದು ಸಂಸ್ಕೃತಿ- ಸಂಪ್ರದಾಯದಲ್ಲಿ ಪವಿತ್ರ ಮುಹೂರ್ತದ ಹಬ್ಬ. ತ್ರೇತಾಯುಗದಲ್ಲಿ ರಾವಣನನ್ನು ಗೆಲ್ಲಲು ಅಗಸ್ಱರ ಆಜ್ಞೆಯಂತೆ ಶ್ರೀರಾಮಚಂದ್ರನು ಆದಿತ್ಯಹೃದಯದ ಮೂಲಕ ಸೂರ್ಯಾರಾಧನೆ ಮಾಡಿದನೆಂದು, ದ್ವಾಪರದಲ್ಲಿ ಪಾಂಡವರು ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಅಕ್ಷಯಪಾತ್ರೆ ಪಡೆದರೆಂಬ ಪೌರಾಣಿಕ ಹಿನ್ನೆಲೆ ಇದೆ.

ಈ ದಿನ ಪ್ರಾತಃಕಾಲದಲ್ಲಿ ಸೂರ್ಯನ ಶಾಖವನ್ನು ಅತ್ಯಧಿಕವಾಗಿ ಹೀರಿಕೊಳ್ಳುವ ಔಷಧೀಯ ಗುಣವಿರುವ ಎಕ್ಕೆ ಎಲೆಯನ್ನು ತಲೆ, ಕುತ್ತಿಗೆ, ಭುಜ, ತೊಡೆ ಮುಂತಾದವುಗಳ ಮೇಲಿಟ್ಟು ಸ್ನಾನ ಮಾಡುವ ಪದ್ಧತಿ ಸಾಮಾನ್ಯವಾಗಿ ಎಲ್ಲೆಡೆ ಇದೆ. ನದಿ, ಸರೋವರ, ಸಮುದ್ರಗಳಲ್ಲಿ ಸ್ನಾನ ಮಾಡಿ ಪೂರ್ವ ದಿಕ್ಕಿನಲಿ ರ್ಸರ್ಯನಿಗೆ ‘ಓಂ ಹ್ರಾಂ ಮಿತ್ರಾಯ ನಮಃ , ಓಂ ಹ್ರೀಂ ರವಯೇ ನಮಃ...,

ಮೊದಲಾದ ಹನ್ನೆರಡು ನಾಮಗಳ ಪಠಣದೊಂದಿಗೆ ಅಘರ್Â ಅರ್ಪಿಸಿದರೆ ಸಕಲ ಜನ್ಮದ ಪಾಪಗಳಿಗೆ ಪರಿಹಾರವೆನ್ನುವ ಪ್ರಬಲ ನಂಬಿಕೆ. ಮನೆ ಮುಂದೆ ಸೂರ್ಯೋನ್ಮುಖವಾಗಿ ಇದ್ದಿಲು ಹೊತ್ತಿಸಿ ಕೆಂಡದಲ್ಲಿ ಮಣ್ಣಿನ ಕುಡಿಕೆಯಲ್ಲಿ ಹಾಲು ಕಾಯಿಸಿ ಉಕ್ಕಿಸಿ ಸೂರ್ಯನಿಗೆ ಅರ್ಪಿಸಿ ಅದೇ ಹಾಲಿನಲ್ಲಿ ಸಿಹಿ ಖಾದ್ಯ ತಯಾರಿಸಿ ಪ್ರಸಾದ ರೂಪದಲ್ಲಿ ಸ್ವೀಕರಿಸುವ ಪದ್ಧತಿ ಹಲವು ಕಡೆ ಇದೆ. ಮಗು ಹುಟ್ಟಿದ ಮೊದಲ ವರ್ಷ ಕಪ್ಪು ಬಣ್ಣದ ಹೊಸಬಟ್ಟೆ ತೊಡಿಸಿ ಮಗುವಿಗೆ ಸಾಯಂಕಾಲ ಕರಿ (ಹಣ್ಣು, ಕಬ್ಬು, ನಾಣ್ಯ, ಬೆಂಡು ಭತ್ತಾಸ, ಕಡ್ಲಿಗಿಡ, ಮುತ್ತು ಬಂಗಾರ) ತಲೆಗೆ ಎರೆಯುವ ಪದ್ಧತಿ ಪುರಾತನ ಸಂಪ್ರದಾಯವಾಗಿದ್ದು, ಮಕ್ಕಳಿಗೆ ಕೆಟ್ಟ ಕಣ್ಣು ತಾಗದಿರಲೆಂಬ ಹಿನ್ನೆಲೆಯೂ ಇದಕ್ಕಿದೆ. ಹೆಣ್ಮಕ್ಕಳು ಸಂಜೆ ಹೊಸ ಸೀರೆಯುಟ್ಟು ದೇವರೆದುರು ದೀಪ ಬೆಳಗಿಸಿದರೆ ಪೂರ್ತಿ ವರ್ಷ ಹೊಸ ಸೀರೆಗಳಿಗೆ ಕೊರತೆಯಿಲ್ಲ ಎನ್ನುವುದು ಹಿರಿಯರ ನುಡಿ.

ಮನುಷ್ಯನ ದೇಹದ ಆರೋಗ್ಯಕ್ಕೆ ವಿಶೇಷವಾಗಿ ಚರ್ಮದ ಆರೋಗ್ಯಕ್ಕೆ ಪ್ರಮುಖ ಪಾತ್ರ ವಹಿಸುವ ವಿಟಾಮಿನ್ ಡಿ ಸೂರ್ಯನ ಶಾಖದಲ್ಲಿ ಹೇರಳವಾಗಿದೆ. ಪ್ರತಿದಿನ ಸ್ವಲ್ಪ ಹೊತ್ತಾದರೂ ಸೂರ್ಯನ ಬೆಳಕು ಮೈತಾಗಿದರೆ ರೋಗನಿರೋಧಕ ಶಕ್ತಿಯ ಉತ್ಪಾದನೆ ಸಹಜವೆಂಬುದು ಪ್ರತಿಯೊಬ್ಬರ ಅನುಭವ. ನವಜಾತ ಮಗುವಿಗೆ ಸಾಮಾನ್ಯವಾಗಿ ಕಾಡುವ ಕಾಮಾಲೆಗೆ ಬೆಳಗಿನ ಎಳೆಬಿಸಿಲಿನ ಸ್ಪರ್ಶದ ಹೊರತೂ ಮತ್ತೇನೂ ಔಷಧವಿಲ್ಲವೆಂಬುದು ವೈದ್ಯಕೀಯ ಕ್ಷೇತ್ರದಲ್ಲಿಯೂ ಸಾಬೀತಾಗಿದೆ. ಸೂರ್ಯನಮಸ್ಕಾರವೆಂಬ ಪ್ರಕಾರದ ಯೋಗಾಸನ ಪಾರಂಪರಿಕ ಯೋಗದ ಪ್ರಮುಖಾಂಗವಾಗಿದೆ. ಶಾರೀರಿಕ, ಮಾನಸಿಕ, ಅಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಪ್ರಬಲ ಶಕ್ತಿ ತುಂಬುವ ಈ ಸೂರ್ಯನಮಸ್ಕಾರವು ಭಾರತೀಯ ವ್ಯಾಯಾಮಗಳಲ್ಲಿ ಪ್ರಮುಖವಾಗಿದೆ.

ರಥಸಪ್ತಮಿಯಂದು ನೂರಾಎಂಟು ಬಾರಿ ಸೂರ್ಯನಿಗಾಗಿ ಮಾಡುವ ಈ ನಮಸ್ಕಾರವೊಂದೇ ಯೋಗಾಸನದ ಎಲ್ಲ ಪ್ರಮುಖ ಆಸನಗಳಿಗೆ ಸಮನಾಗಿದೆ ಎಂಬುದು ಬಲ್ಲವರ ಅಭಿಪ್ರಾಯವೂ, ಅನುಭವವವೂ ಆಗಿದೆ.

ಆದಿತ್ಯಸ್ಯ ನಮಸ್ಕಾರಾನ್ ಯೇ ಕುರ್ವಂತಿ ದಿನೇ ದಿನೇ

ಆಯುಃ ಪ್ರಜ್ಞಾಂ ಬಲಂ ವೀರ್ಯಂ ತೇಜಸ್ತೇಷಾಂ ಚ ಜಾಯತೇ

ದಿನನಿತ್ಯ ತಪ್ಪದೇ ಸೂರ್ಯನಮಸ್ಕಾರ ಮಾಡುವವನಿಗೆ ಆಯುಷ್ಯ, ಬುದ್ಧಿ (ಪ್ರಜ್ಞೆ), ಬಲ , ಧೈರ್ಯ, ತೇಜಸ್ಸು , ವೃದ್ಧಿಸುವುದರಲ್ಲಿ ಸಂದೇಹವಿಲ್ಲ ಎನ್ನುವುದು ಮಂತ್ರದ ಸಾರವಾಗಿದೆ. ನಿಸರ್ಗದಲ್ಲಿ ಸೂರ್ಯನು ಏಳು ಕುದುರೆಗಳ ರಥವೇರಿ ಪಥವ ಬದಲಿಸುವ ಅತ್ಯುತ್ತಮ ದಿನದಂದು ನಾವಿಲ್ಲಿಂದ ಮಾಡುವ ಸೂರ್ಯನಮಸ್ಕಾರದಿಂದ ನಮ್ಮಲ್ಲಿರುವ ಜಾಗೃತವಾದ ದೈಹಿಕ ಶಕ್ತಿಯ ಪ್ರಬಲತೆಯಿಂದ,ಮೂಲಾಧಾರ, ಸ್ವಾಧಿಷ್ಠಾನ, ಮಣಿಪುರ, ಅನಾಹತ, ವಿಶುಧಿ್ಧ ಆಜ್ಞಾ, ಸಹಸ್ರಾರಗಳೆಂಬ ಸಪ್ತಚಕ್ರಗಳೊಂದೊಂದರ ಮೂಲಕ ಹಾಯ್ದು ಉತ್ತರೋತ್ತರ ಮುಖವಾಗಿ ಆಧ್ಯಾತ್ಮಿಕ ಶಕ್ತಿಯು ಬಲಗೊಳ್ಳುವುದೆಂಬ ವೈಜ್ಞಾನಿಕ ಹಿನ್ನಲೆಯು ನುರಿತ ತಜ್ಞರ ಅನುಭವವಾಗಿದೆ.