ನ್ಯೂಸ್

ರಾಜ್ಯದಲ್ಲಿ ನೂತನ ಜೈವಿಕ ಇಂಧನ ನೀತಿ ಶೀಘ್ರವೇ ಅಂತಿಮ

ಬೆಂಗಳೂರು: ಪಳಿಯುಳಿಕೆ ಇಂಧನಕ್ಕೆ ಹೋಲಿಸಿದರೆ ಕಡಿಮೆ ಬೆಲೆ, ಶುದ್ಧ, ಸುರಕ್ಷಿತ ಮೂಲವಾಗಿ ಜೈವಿಕ ಇಂಧನ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಪರಿಸರ ಸ್ನೇಹಿ ಉಪಕ್ರಮವಾಗಿ ಜೈವಿಕ ಇಂಧನಕ್ಕೆ ಒತ್ತು ನೀಡುತ್ತಿದ್ದು, ನೂತನ ಜೈವಿಕ ಇಂಧನ ನೀತಿ ಅಂತಿಮವಾಗಲಿದೆ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಲ್. ಶಿವಶಂಕರ್ ಮಾಹಿತಿ ನೀಡಿದರು.

ಜಾಗತಿಕ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ’ದಲ್ಲಿ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಜೈವಿಕ ಇಂಧನ ನೀತಿ 2009 ರಾಜ್ಯದಲ್ಲಿ ಜಾರಿಯಾಗಿದೆ. ನಂತರ ಕೇಂದ್ರ ಸರ್ಕಾರ, ಹಲವು ರಾಜ್ಯಗಳು ಜಾರಿಗೊಳಿಸಿದವು. 15 ವರ್ಷಗಳ ಹಿಂದಿನ ನೀತಿ ಪರಿಷ್ಕರಿಸಿ ಕರಡು ಪ್ರಸ್ತಾವನೆ ಸಿದ್ಧತೆ ಹಂತದಲ್ಲಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು. ಸುರಕ್ಷಿತ, ಪರಿಸರ ಸ್ನೇಹಿ ಇಂಧನ, ಜೈವಿಕ ಉತ್ಪನ್ನಗಳ ಕುರಿತು ರೈತರಲ್ಲಿ ಜಾಗೃತಿ, ಆಸಕ್ತ ಉದ್ಯಮ, ಹೂಡಿಕೆದಾರರಿಗೆ ಬೆಂಬಲ, ಯುವಜನರಿಗೆ ಅಗತ್ಯ ತರಬೇತಿ ನೀಡಿ ಸೃಷ್ಟಿಯಾದ ಉದ್ಯೋಗಗಳ ಬಳಕೆಗೆ ಅವಕಾಶ ಕಲ್ಪಿಸುವುದು ನೂತನ ನೀತಿಯ ತಿರುಳು ಎಂದು ತಿಳಿಸಿದರು.

ಪ್ಯಾರಿಸ್ ಒಡಂಬಡಿಕೆ ಪ್ರಕಾರ 2070ರ ವೇಳೆಗೆ ಹೊರಸೂಸುವ ಇಂಗಾಲದ ಪ್ರಮಾಣವನ್ನು ಶೂನ್ಯಮಟ್ಟಕ್ಕೆ ಇಳಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀತಿ-ನಿರ್ಧಾರ, ಪ್ರೋತ್ಸಾಹಕ ಕ್ರಮ ಸೇರಿ ಹಲವು ಸೂಚನೆಗಳನ್ನು ನೀಡಿದೆ. ರಾಜ್ಯದಲ್ಲೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಮಂಡಳಿ ಅಧ್ಯಕ್ಷ ಎಸ್.ಈ. ಸುಧೀಂದ್ರ ಮಾರ್ಗದರ್ಶನ, ಅಪೇಕ್ಷೆಯಂತೆ ಹತ್ತು-ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಅನುಷ್ಠಾನಕ್ಕೆ ತರಲಾಗಿದೆ.

ಪೆಟ್ರೋಲಿಯಂ ಇಂಧನ ಬಳಕೆ ಕ್ರಮೇಣ ತಗ್ಗಿಸುವ ದಿಸೆಯಲ್ಲಿ ಜೈವಿಕ ಇಂಧನ ಅಭಿವೃದ್ಧಿಪಡಿಸಲು ಮಂಡಳಿ ಹೆಚ್ಚು ಗಮನ ಕೊಟ್ಟಿದೆ. ಭತ್ತದ ಹುಲ್ಲು, ಮೆಕ್ಕೆಜೋಳದ ರೌದಿ, ದಿಂಡು ಮತ್ತಿತರ ಕೃಷಿ ತ್ಯಾಜ್ಯ ಬಳಸಿ ಜೈವಿಕ ಬಿಲ್ಲೆ, ಇಟ್ಟಿಗೆಗಳನ್ನು ತಯಾರಿಸಲಾಗುತ್ತದೆ. ಕೈಗಾರಿಕೆಗಳು ಬಾಯ್ಲರ್​ಗೆ ಉಪಯೋಗಿಸುತ್ತಿದ್ದ ಕಲ್ಲಿದ್ದಲು ಬದಲು ಜೈವಿಕ ಬಿಲ್ಲೆ ಬ್ರಿಕೆಟ್ಸ್ ಬಳಕೆಗೆ ಉತ್ತೇಜಿಸಲಾಗುತ್ತಿದೆ. ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಸ್ಥಾವರದಲ್ಲಿ ಕಲ್ಲಿದ್ದಲು ಜತೆಗೆ ಶೇ.10ರಷ್ಟು ಜೈವಿಕ ಬಿಲ್ಲೆ, ಬ್ರಿಕೆಟ್ಸ್ ಗಳನ್ನು ಬಳಕೆಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ವಾಹನಗಳಿಗೆ ಇಂಧನ

ಸಸ್ಯಗಳು ಮತ್ತು ಕೃಷಿ ತ್ಯಾಜ್ಯದಿಂದ ಉತ್ಪಾದಿತ ಜೈವಿಕ ಅನಿಲ (ಸಾವಯವ ಮಿಥೇನ್)ವನ್ನು ಸಿಎನ್​ಜಿ ವಾಹನಗಳಿಗೆ ನೇರವಾಗಿ ಪ್ರತಿಶತ ನೂರರಷ್ಟು ಬಳಸಬಹುದಾಗಿದೆ. ಸಿಎನ್​ಜಿ ಬಂಕ್​ಗೆ ಬಯೋಗ್ಯಾಸ್ ಪೂರೈಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ, ಗೇಲ್ ಮತ್ತು ಫ್ಯಾಕ್ಟರಿಗಳ ಮಧ್ಯೆ ತ್ರಿಪಕ್ಷೀಯ ಒಪ್ಪಂದವಾಗಿದೆ. ಒಂದು ಕೆಜಿಗೆ 71 ರಿಂದ 72 ರೂ.ನಂತೆ ಫ್ಯಾಕ್ಟರಿಯವರಿಗೆ ಈ ಅನಿಲ ಸಿಗುತ್ತದೆ. ಮಾರುಕಟ್ಟೆ ಬೆಲೆ ಒಂದು ಕೆಜಿಗೆ 80 ರಿಂದ 82 ರೂ.ಗಳಿದೆ. ರಾಜ್ಯದಲ್ಲಿ ಒಂದೆರಡು ಖಾಸಗಿ ಬಂಕ್​ಗಳಿದ್ದು, ಅವರೇ ಜೈವಿಕ ಅನಿಲ ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ. ಜೈವಿಕ ಅನಿಲದ ಮತ್ತೊಂದು ವಿಶೇಷತೆಯೆಂದರೆ ಅಡುಗೆ ಅನಿಲ (ಎಲ್​ಪಿಜಿ)ಬದಲು ಸಾಂದ್ರೀಕೃತ ಜೈವಿಕ ಅನಿಲ ಬಳಸಬಹುದಾಗಿದೆ. ಕಾರ್ಯಕ್ಷಮತೆ, ಸುರಕ್ಷತೆ, ದರ ಮೂರು ದೃಷ್ಟಿಯಿಂದಲೂ ಉತ್ತಮವೆಂದು ಎಲ್.ಶಿವಶಂಕರ ವಿವರಿಸಿದರು.

ಕಚ್ಚಾ ವಸ್ತು ಸವಾಲು

ಜೈವಿಕ ಇಂಧನಕ್ಕೆ ಬೇಡಿಕೆ ಕ್ರಮೇಣ ಏರುಗತಿಯಲ್ಲಿದೆ. ಆದರೆ ಜೈವಿಕ ಇಂಧನ, ತಯಾರಿಸಲು ಬೇಕಾದ ಕಚ್ಚಾ ವಸ್ತುಗಳದೇ ದೊಡ್ಡ ಸವಾಲು. ಜೈವಿಕ ಅನಿಲ ತಯಾರಿಕೆಗೆ ದೊಡ್ಡಮಟ್ಟದಲ್ಲಿ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರ 90 ಲಕ್ಷ ರೂ.ವರೆಗೆ ಸಹಾಯಧನ ನೀಡುತ್ತದೆ. ಹೂಡಿಕೆ ಮಾಡಲು ಮುಂದೆ ಬರುವವರಿಗೆ ಮಂಡಳಿ ಸಹಾಯ, ಬೆಂಬಲ ನೀಡಲಿದೆ.

ಜೈವಿಕ ಇಂಧನ ಉತ್ಪಾದನೆ ಸಾಧ್ಯವಿರುವ ಎಲ್ಲ ಮೂಲಗಳನ್ನು ಬಳಸಲು ಮಂಡಳಿ ಪ್ರಯತ್ನ ಮಾಡುತ್ತಿದೆ. ಆಸಕ್ತ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಂಶೋಧನೆ, ಮತ್ತು ಅಭಿವೃದ್ಧಿ, ಪರಿಸರ ಸ್ನೇಹಿ ಜೈವಿಕ ಇಂಧನ ಮತ್ತಿತರ ಉತ್ಪನ್ನಗಳ ತಯಾರಿಕೆ, ಬಳಕೆಗೆ ಪ್ರೋತ್ಸಾಹಿಸಲಾಗುತ್ತಿದೆ. | ಎಲ್.ಶಿವಶಂಕರ್ ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ

ಗ್ರೀನ್ ಹೈಡ್ರೋಜನ್ ತಂತ್ರಜ್ಞಾನ

ಜೈವಿಕ ಅನಿಲವನ್ನು ಗ್ರೀನ್ ಹೈಡ್ರೋಜನ್​ಗೆ ಪರಿವರ್ತಿಸಲು ಐಐಎಸ್​ಸಿ ಜತೆಗೆ ಕೆಲಸ ಮಾಡುತ್ತಿದ್ದು, ಮೈಸೂರಿನ ಎನ್​ಐಇ ಕಾಲೇಜಿನಲ್ಲಿ ಈ ತಿಂಗಳ 19ಕ್ಕೆ ಜರ್ಮನಿಯ ಎರಡು ವಿಶ್ವ ವಿದ್ಯಾಲಯಗಳ ಸಮಾವೇಶವಿದೆ. ಸಕಾರಾತ್ಮಕವಾಗಿ ಸ್ಪಂದಿಸಿದರೆ ಗ್ರೀನ್ ಹೈಡ್ರೋಜನ್ ತಂತ್ರಜ್ಞಾನ ಪಡೆಯಲು ಪರಸ್ಪರ ಒಡಂಬಡಿಕೆಯಾಗಲಿದೆ. ಗ್ರೀನ್ ಹೈಡ್ರೋಜನ್​ನ್ನು ನೀರಿನಿಂದ ಎಲೆಕ್ಟೋ›ಲಿಸಿಸ್ ಮಾಡಿ ನೀರನ್ನು ವಿಭಜಿಸಿ ಅಮ್ಲಜನಕ ಮತ್ತು ಜಲಜನಕ ಪ್ರತ್ಯೇಕಿಸಬಹುದು. ಆದರೆ ಒಂದು ಕಿಲೋ ಹೈಡ್ರೋಜನ್ ತಯಾರಿಸಲು ಲಕ್ಷಾಂತರ ಲೀಟರ್ ನೀರು ಬೇಕಾಗುತ್ತದೆ.

ರೈತರ ಜತೆಗೂ ಮಾತುಕತೆ

ಕಾಫಿ ಬೆಳೆಯುವ ಪ್ರದೇಶದಲ್ಲಿ ಕಾಫಿ ಸಿಪ್ಪೆ, ಗಿಡದ ಟೊಂಗೆ, ಭತ್ತ ಬೆಳೆಯುವ ಪ್ರದೇಶದಲ್ಲಿ ಹುಲ್ಲು, ಕಬ್ಬು ಬೆಳೆಯುವ ಪ್ರದೇಶದಲ್ಲಿ ತ್ಯಾಜ್ಯ, ಬಳಕೆಗೆ ಯೋಗ್ಯವಲ್ಲದ ಧಾನ್ಯ ಬಳಸಿಕೊಂಡು ಜೈವಿಕ ಅನಿಲ ತಯಾರಿಕೆಗೆ ಪ್ರೋತ್ಸಾಹಿಸಲು ಮಂಡಳಿ ಉತ್ಸುಕವಾಗಿದೆ. ಕಾಫಿ, ಭತ್ತ, ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಜಿಲ್ಲೆಗಳ ರೈತರ ಮಾತುಕತೆ, ಜೈವಿಕ ಇಂಧನ ಸಸ್ಯಗಳನ್ನು ಬೆಳೆಯಲು ಜಾಗೃತಿ ಪ್ರಯತ್ನ ಚಾಲ್ತಿಯಲ್ಲಿವೆ ಎಂದು ಎಲ್.ಶಿವಶಂಕರ ತಿಳಿಸಿದರು.