ಹಾಸನ: ಹಾಸನದಲ್ಲಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ವ್ಯಾಪಾರಸ್ಥರ ವೇಷದಲ್ಲಿ ಹೋಗಿ ಕಾಳಸಂತೆಕೋರರನ್ನು, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಪಡಿತರ ರಾಗಿ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವ ಮಾಹಿತಿಯನ್ನು ಆಧರಿಸಿ, ತಾವೇ ವ್ಯಾಪಾರಸ್ಥರಂತೆ ಮಾರುವೇಷದಲ್ಲಿ ಹೋಗಿ ರಾಗಿ ಖರೀದಿ ಮಾಡಿದ್ದಾರೆ.
ಕೋಲಾರದ ಬಂಗಾರಪೇಟೆಯ ಎಪಿಎಂಸಿ ವರ್ತಕರನ್ನು ಸಂಪರ್ಕಿಸಿ, 100 ಟನ್ ರಾಗಿ ಬೇಕೆಂದು ಕೇಳಿದ್ದಾರೆ. ಪಡಿತರ ರಾಗಿ, ಪಡಿತರ ಚೀಲದಲ್ಲೇ ಬರುತ್ತದೆಂದು ಆಶ್ವಾಸನೆ ನೀಡಿದ್ದಾನೆ ವರ್ತಕ.
ಯಾವುದೇ ದಾಖಲೆ ಪತ್ರ ಇರುವುದಿಲ್ಲವೆಂದು, ಆದರೆ ತೂಕದ ಪ್ರಮಾಣ ಪತ್ರ ಮಾತ್ರ ಸಿಗಲಿದೆ ಎಂದು ವರ್ತಕ ತಿಳಿಸಿದ್ದಾನೆ. ನಂತರ ಬಂಗಾರಪೇಟೆ ಎಪಿಎಂಸಿಯಿಂದ ಲೋಡ್ ಆಗಿ, 12 ಚಕ್ರದ ಲಾರಿಯಲ್ಲಿ ಮುಂಜಾನೆ 300 ಕ್ವಿಂಟಾಲ್ ಪಡಿತರ ರಾಗಿ ಹಾಸನಕ್ಕೆ ಬಂದಿದೆ. ಎಎಪಿ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಲಾರಿ ತಡೆದ ಕಾರ್ಯಕರ್ತರು, ಪೊಲೀಸ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬಡವರಿಗೆ ನೀಡಬೇಕಿದ್ದ ರಾಗಿ ಹೀಗೆ ಅನಧಿಕೃತವಾಗಿ ದುಪ್ಪಟ್ಟು ಬೆಲೆಗೆ ಮಾರಾಟ ಆಗುತ್ತಿರುವುದು ಬಹಿರಂಗವಾಗಿದೆ. ವಾರದ ಹಿಂದೆ ಹಾಸನ ಜಿಲ್ಲೆ, ಬೇಲೂರಿನಲ್ಲೂ ನೂರಾರು ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿ ಸಾಗಾಟ ಪತ್ತೆಯಾಗಿತ್ತು. ಈಗ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಘಟನೆ ಬಗ್ಗೆ ಸಮಗ್ರ ತನಿಖೆಗೆ ಆಪ್ ನಾಯಕರು ಆಗ್ರಹಿಸಿದ್ದಾರೆ.