ಬೆಂಗಳೂರು: ಕರೊನಾ ಸೋಂಕು ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನವನ್ನು ಮೊಟಕುಗೊಳಿಸಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಮಾ.31ರ ತನಕ ನಡೆಯಬೇಕಾಗಿದ್ದ ವಿಧಾನಸಭೆ ಅಧಿವೇಶನ ಮಾ.24ಕ್ಕೆ ಅಂತ್ಯಗೊಳ್ಳಲಿದೆ. ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತರ ನೀಡಿದ ಬಳಿಕ ಸದನ ಬಜೆಟ್ ಅಂಗೀಕಾರ ಮಾಡಲಿದೆ. ನಂತರ ಅಧಿವೇಶನವನ್ನು ಅನಿರ್ಧಿಷ್ಟ್ಟಾವಧಿಗೆ ಮುಂದೂಡಲು ನಿರ್ಧರಿಸಲಾಗಿದೆ. ಕರೊನಾ ವೈರಾಣು ವ್ಯಾಪಕವಾಗಿ ಹರಡುತ್ತಿರುವ ಹೊತ್ತಿನಲ್ಲಿ ಅಧಿವೇಶನ ನಡೆಸುವುದು ಸರಿಯಲ್ಲ ಎನ್ನುವ ಅಭಿಪ್ರಾಯಗಳನ್ನು ವಿರೋಧ ಪಕ್ಷಗಳು ವ್ಯಕ್ತಪಡಿಸಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
ಕರೊನಾ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಕೊಡಬೇಕೆಂದು ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿದ ಪ್ರಸಂಗ ನಡೆಯಿತು. ಒಂದು ಹಂತದಲ್ಲಿ ಸ್ಪೀಕರ್ ಅವಕಾಶ ನಿರಾಕರಿಸಿದಾಗ, ಇದು ರಾಕ್ಷಸ ಸರ್ಕಾರ ಎಂದು ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು. ಕಲಾಪ ಆರಂಭವಾಗುತ್ತಿದ್ದಂತೆ ಆರ್.ವಿ.ದೇಶಪಾಂಡೆ, ಕರೊನಾ ಹಿನ್ನೆಲೆ ಕಲಾಪವನ್ನು ಶೀಘ್ರ ಮುಗಿಸಬೇಕು ಮತ್ತು ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಪಟ್ಟು ಹಿಡಿದರು. ಸಿದ್ದರಾಮಯ್ಯ, ಅಜಯ್ ಸಿಂಗ್, ದಿನೇಶ್ ಗುಂಡೂರಾವ್ ಸೇರಿ ಹಲವರು ಒತ್ತಾಯಿಸಿದರು. ಸ್ಪೀಕರ್ ಚರ್ಚೆಗೆ ಅವಕಾಶ ನೀಡದೆ, ‘ನೀವು ಲಿಖಿತವಾಗಿ ಅವಕಾಶ ಕೇಳದೆ ಏಕಾಏಕಿ ಚರ್ಚೆ ಮಾಡುತ್ತೇನೆಂದರೆ ನಿಯಮಗಳಲ್ಲಿ ಅವಕಾಶವಿಲ್ಲ’ ಎಂದರು. ಈ ವೇಳೆ ವಾಗ್ವಾದ ಉಂಟಾಯಿತು. ಅಂಜಲಿ ನಿಂಬಾಳ್ಕರ್, ಗಂಭೀರ ವಿಷಯ ಚರ್ಚೆಗೆ ನಿಯಮಗಳು ಬೇಕೆ ಎಂದು ಪ್ರಶ್ನಿಸಿದರು. ಯತೀಂದ್ರ ಸಿದ್ದರಾಮಯ್ಯ ಕೂಡ ಚರ್ಚೆಗೆ ಅವಕಾಶ ಕೊಡಲೇಬೇಕೆಂದು ಹಠ ಹಿಡಿದರು. ಮಧ್ಯಾಹ್ನದ ನಂತರ ಅವಕಾಶ ಕೊಡುವುದಾಗಿ ಸ್ಪೀಕರ್ ಭರವಸೆ ನೀಡಿ ಸಮಾಧಾನಪಡಿಸಿದರು.
ದೇಶಪಾಂಡೆ ಎಚ್ಚರಿಕೆ: ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿದ್ದು, ದೇಶ, ರಾಜ್ಯದ ಮೇಲು ಗಂಭೀರ ಪರಿಣಾಮ ಬೀರಲಿದೆ ಎಂದು ಆರ್.ವಿ.ದೇಶಪಾಂಡೆ ಸರ್ಕಾರವನ್ನು ಎಚ್ಚರಿಸಿದರು.