Donald Trump and Vladimir Putin : ಅಮೆರಿಕದ ಅಲಾಸ್ಕಾದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ನಿರ್ಣಾಯಕ ಸಭೆ ಕೊನೆಗೊಂಡಿದೆ. ಇಡೀ ಜಗತ್ತೇ ಈ ಸಭೆಯನ್ನು ಎದುರು ನೋಡುತ್ತಿತ್ತು. ಇಬ್ಬರು ಜಾಗತಿಕ ನಾಯಕರು ಏನೆಲ್ಲ ವಿಷಯಗಳ ಬಗ್ಗೆ ಚರ್ಚಿಸುತ್ತಾರೆ ಎಂಬ ಕುತೂಹಲವಿತ್ತು. ಯೂಕ್ರೇನ್ ಜತೆಗಿನ ರಷ್ಯಾ ಯುದ್ಧ ಕೊನೆಗಳ್ಳಬಹುದು ಎಂಬ ಭರವಸೆಯು ಇತ್ತು. ಆದರೆ, ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಯೂಕ್ರೇನ್ ಯುದ್ಧದ ಬಗ್ಗೆ ಯಾವುದೇ ಒಪ್ಪಂದವಿಲ್ಲದೆ ಕೊನೆಗೊಂಡಿತು. ಇಡೀ ಜಗತ್ತು ಬಹಳ ಕಾತರದಿಂದ ಕಾದರೂ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಆದರೆ, ಸಭೆಯ ಕೊನೆಯಲ್ಲಿ ಪುಟಿನ್ ಅವರು ರಷ್ಯಾದಲ್ಲಿ ಉಭಯ ನಾಯಕರ ನಡುವೆ ಮತ್ತೊಂದು ಮಹತ್ವದ ಸಭೆ ನಡೆಯಲಿದೆ ಎಂದು ಟ್ವಿಸ್ಟ್ ನೀಡಿದರು.
ನಿರ್ಣಾಯಕ ಸಭೆಯ ನಂತರ, ಇಬ್ಬರೂ ನಾಯಕರು ಜಂಟಿ ಸುದ್ದಿಗೋಷ್ಠಿಯಲ್ಲಿ ಸಭೆಯ ವಿವರಗಳನ್ನು ಬಹಿರಂಗಪಡಿಸಿದರು. ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಆದರೆ, ಯೂಕ್ರೇನ್ ಯುದ್ಧದ ಕುರಿತು ಅಂತಿಮ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಮಾತುಕತೆಗಳ ಮೂಲಕ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಆದಾಗ್ಯೂ, ಕೆಲವು ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ನಾವಿಬ್ಬರೂ ಅನೇಕ ವಿಷಯಗಳ ಬಗ್ಗೆ ಒಪ್ಪಿಕೊಂಡಿದ್ದೇವೆ. ಆದಾಗ್ಯೂ, ಕೆಲವು ವಿಷಯಗಳಯ ಇನ್ನೂ ಬಾಕಿ ಉಳಿದಿವೆ. ಎಲ್ಲಾ ಸಮಸ್ಯೆಗಳು ಬಗೆಹರಿದು ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕುವವರೆಗೆ, ಯಾವುದೇ ಒಪ್ಪಂದ ಇರುವುದಿಲ್ಲ. ಶೀಘ್ರದಲ್ಲೇ ಯೂಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಯುರೋಪಿಯನ್ ಒಕ್ಕೂಟದ ನಾಯಕರೊಂದಿಗೆ ಮಾತನಾಡುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದರು. ಅಲ್ಲದೆ, ಮತ್ತೊಮ್ಮೆ ಪುಟಿನ್ ಅವರನ್ನು ಭೇಟಿಯಾಗುವುದಾಗಿ ಹೇಳಿದರು.
ಇದನ್ನೂ ಓದಿ: ಈ ಮೂರು ರಾಶಿಯವರು ತುಂಬಾ ಮೃದು ಹೃದಯದವರು, ಯಾರಿಗೂ ನೋವುಂಟು ಮಾಡುವುದಿಲ್ಲವಂತೆ! Zodiac Signs ನಂತರ ಮಾತನಾಡಿದ ಪುಟಿನ್, ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಸಭೆ ತುಂಬಾ ರಚನಾತ್ಮಕವಾಗಿತ್ತು ಎಂದರು. ಅಲ್ಲದೆ, ಭೇಟಿಗೆ ಅವಕಾಶ ನೀಡಿದ್ದಕ್ಕಾಗಿ ಟ್ರಂಪ್ ಅವರಿಗೆ ಧನ್ಯವಾದ ಅರ್ಪಿಸಿದರು. ಯೂಕ್ರೇನ್ ಜೊತೆಗಿನ ಯುದ್ಧವನ್ನು ಕೊನೆಗೊಳಿಸಲು ತಾವು ಪ್ರಾಮಾಣಿಕರಾಗಿರುವುದಾಗಿ ಹೇಳಿದರು. ಈ ಹಿಂದೆ ಟ್ರಂಪ್ ಅಧಿಕಾರದಲ್ಲಿದ್ದರೆ, ರಷ್ಯಾ, ಯೂಕ್ರೇನ್ ಜೊತೆ ಯುದ್ಧವನ್ನೇ ಮಾಡುತ್ತಿರಲಿಲ್ಲ ಎಂದು ಪುಟಿನ್ ಮತ್ತೊಮ್ಮೆ ಹೇಳಿದ್ದಾರೆ. ಸಂಘರ್ಷವನ್ನು ಕೊನೆಗೊಳಿಸಲು ಈ ಸಭೆಯನ್ನು ಆರಂಭಿಕ ಹಂತವೆಂದು ಬಣ್ಣಿಸಿದರು. ಅಲ್ಲದೆ, ಈ ಯುದ್ಧವನ್ನು "ದುರಂತ" ಎಂದು ಕರೆದರು. ಆದರೆ ರಷ್ಯಾ ಯುದ್ಧದ "ಪ್ರಾಥಮಿಕ ಕಾರಣಗಳನ್ನು" ಪರಿಹರಿಸುವ ಅಗತ್ಯವಿದೆ ಎಂದು ಪುಟಿನ್ ಪುನರುಚ್ಚರಿಸಿದರು. ಟ್ರಂಪ್ ಅವರೊಂದಿಗಿನ ಅವರ ಸಂಬಂಧವು ವ್ಯವಹಾರದಂತಿದೆ. ಮುಂದಿನ ಸಭೆ ಮಾಸ್ಕೋದಲ್ಲಿ ನಡೆಯಲಿದೆ ಎಂದು ಪುಟಿನ್ ಹೇಳಿದರು. ಯೂಕ್ರೇನ್ ಕುರಿತು ನಾನು ಮತ್ತು ಟ್ರಂಪ್ ಅರ್ಥ ಮಾಡಿಕೊಂಡಿದ್ದೇವೆ. ಸದ್ಯಕ್ಕೆ ಹೊಸ ಬೆಳವಣಿಗೆಗೆ ಕಿಡಿ ಹಚ್ಚಬೇಡಿ ಎಂದು ಯುರೋಪ್‌ಗೆ ಪುಟಿನ್ ಎಚ್ಚರಿಕೆ ನೀಡಿದರು.
ಅಂದಹಾಗೆ ಈ ಮಹತ್ವದ ಸಭೆಗೆ ಅಮೆರಿಕದ ಅಲಾಸ್ಕಾ ಸ್ಥಳ ವೇದಿಕೆಯಾಯಿತು. ಅಮೆರಿಕದ ಪರವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿದೇಶಾಂಗ ಕಾರ್ಯದರ್ಶಿ ಮೈಕ್ ರುಬಿಯೊ ಮತ್ತು ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಭಾಗವಹಿಸಿದ್ದರು. ಇತ್ತ ರಷ್ಯಾ ಪರವಾಗಿ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಮತ್ತು ವಿದೇಶಾಂಗ ನೀತಿ ಸಲಹೆಗಾರ ಯೂರಿ ಯುಶಕೋವ್ ಭಾಗವಹಿಸಿದ್ದರು. ಪ್ರತಿ ದೇಶದಿಂದ ಮೂವರು ಪ್ರತಿನಿಧಿಗಳು ಭಾಗವಹಿಸಿದ್ದರು. ಟ್ರಂಪ್ ಮತ್ತು ಪುಟಿನ್ ನಡುವೆ ಮಾತುಕತೆ ನಡೆಯಲಿದೆ ಎಂದು ಆರಂಭದಲ್ಲಿ ವರದಿಗಳಿದ್ದರೂ, ಎರಡೂ ದೇಶಗಳ ನಿಯೋಗಗಳು ಈ ಸಭೆಯಲ್ಲಿ ಭಾಗವಹಿಸಿದ್ದವು. ಶ್ವೇತಭವನ ಮತ್ತು ಕ್ರೆಮ್ಲಿನ್ ತಮ್ಮ ಸಭೆ ಕೊನೆಗೊಂಡಿದೆ ಎಂದು ಘೋಷಿಸಿದವು. ಇದಕ್ಕೂ ಮೊದಲು, ಇಬ್ಬರು ನಾಯಕರು ಮೊದಲು ಅಲಾಸ್ಕಾದ ಆಂಕಾರೇಜ್‌ಗೆ ಪ್ರತ್ಯೇಕವಾಗಿ ಆಗಮಿಸಿದರು. ಅಲ್ಲಿ ಟ್ರಂಪ್ ಅವರು ಪುಟಿನ್ ಅವರನ್ನು ಸ್ವಾಗತಿಸಿದರು. ಟ್ರಂಪ್ ಅವರ ವಾಹನದಲ್ಲಿ ಇಬ್ಬರು ನಾಯಕರು ಸಭೆಯ ಕಟ್ಟಡಕ್ಕೆ ಬಂದರು. ಈ ಸಂದರ್ಭದಲ್ಲಿ, ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳು ಇಬ್ಬರು ನಾಯಕರಿಗೆ ಹಲವು ಪ್ರಶ್ನೆಗಳನ್ನು ಕೇಳಿದವು ಆದರೆ, ಅವರು ಉತ್ತರಿಸದೆ ಹೊರಟುಹೋದರು. ಪ್ರಪಂಚದ ಎಲ್ಲಾ ದೇಶಗಳು ಈ ಸಭೆಯನ್ನು ಬಹಳ ಆಸಕ್ತಿಯಿಂದ ವೀಕ್ಷಿಸಿದವು. ಈ ಸಂದರ್ಭದಲ್ಲಿ ಯಾವುದೇ ಘೋಷಣೆ ಮಾಡದ ಕಾರಣ, ಯೂಕ್ರೇನ್ ಯುದ್ಧದ ಕಥೆ ಮತ್ತೆ ಮುನ್ನೆಲೆಗೆ ಬಂದಿದೆ. (ಏಜೆನ್ಸೀಸ್)