ನ್ಯೂಸ್

ಇಂದು ಭಾರತೀಯ ವಾಯುಸೇನಾ ದಿನ: ಈ ಬಾರಿಯ ಪರೇಡ್​ನ ಮುಖ್ಯ ಆಕರ್ಷಣೆ ರಫೇಲ್​​

ನವದೆಹಲಿ: ಭಾರತೀಯ ವಾಯುಸೇನೆಯು ಇಂದು 88ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. 1932ರ ಅಕ್ಟೋಬರ್ 8ರಂದು ಬ್ರಿಟಿಷ್ ಆಡಳಿತದಲ್ಲಿ ವಾಯುಸೇನೆಯನ್ನು ಸ್ಥಾಪಿಸಲಾಯಿತು. 1933ರ ಏಪ್ರಿಲ್​ನಲ್ಲಿ ಮೊದಲ ಸ್ಕಾ್ವಡ್ರನ್ ರೂಪುಗೊಂಡಿತು. ನಾಲ್ಕು ವೆಸ್ಟ್​ಲ್ಯಾಂಡ್ ವಾಪಿಟಿ ಬೈಪ್ಲೇನ್​ಗಳು ಹಾಗೂ ಐದು ಪೈಲಟ್​ಗಳೊಂದಿಗೆ ಅಂದು ಕಾರ್ಯಾಚರಣೆ ಆರಂಭಿಸಿತು. ಅಂದು ಬ್ರಿಟಿಷ್ ಸರ್ಕಾರವತಿಯಿಂದ ಆರಂಭವಾದ ಭಾರತೀಯ ವಾಯಪಡೆ ಇಂದು ವಿಶ್ವದಲ್ಲೇ ನಾಲ್ಕನೇ ಅತ್ಯುತ್ತಮ ವಾಯುಸೇನೆಯಾಗಿ ಹೆಸರು ಪಡೆದಿದೆ. 1.4 ಲಕ್ಷಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1,700ಕ್ಕೂ ಅಧಿಕ ಏರ್​ಕ್ರಾಫ್ಟ್ ಗಳಿವೆ. ನೆರೆ ದೇಶಗಳಾದ ಚೀನಾ, ಪಾಕಿಸ್ತಾನದೊಂದಿಗೆ ನಾಲ್ಕು ಪ್ರಮುಖ ಯುದ್ಧಗಳು, ರಕ್ಷಣಾ ಕಾರ್ಯಾಚರಣೆಗಳಲ್ಲಿ ವಾಯಪಡೆ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ರಾಷ್ಟ್ರಪತಿ ಐಎಎಫ್​ನ ಸುಪ್ರೀಂ ಕಮಾಂಡರ್ ಆಗಿದ್ದಾರೆ. ಚೀಫ್ ಆಫ್ ಏರ್ ಸ್ಟಾಫ್, ಏರ್ ಚೀಫ್ ಮಾರ್ಷಲ್ ವಾಯುಸೇನೆಯ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಐದು ಕಾರ್ಯಕಾರಿ ಕಮಾಂಡ್​ಗಳು ಮತ್ತು ಎರಡು ಕ್ರಿಯಾತ್ಮಕ ಕಮಾಂಡ್ ಇದೆ. ರಷ್ಯಾ, ಫ್ರಾನ್ಸ್, ಬಾಂಗ್ಲಾದೇಶ, ಜಪಾನ್ ಸೇರಿ 20ಕ್ಕೂ ಹೆಚ್ಚು ದೇಶಗಳೊಂದಿಗೆ ರಕ್ಷಣಾ ಸಹಕಾರ ಒಪ್ಪಂದ ಮಾಡಿಕೊಳ್ಳಲಾಗಿದೆ.

ಗರುಡ ಪಡೆ

ಭಾರತೀಯ ವಾಯುಸೇನೆಯು ವಿಶೇಷ ಕಾರ್ಯಾ ಚರಣೆಗಳಿಗಾಗಿ 2004ರಲ್ಲಿ ಗರುಡ ಪಡೆಯನ್ನು ಸ್ಥಾಪಿಸಿತು. ವಾಯುಸೇನೆಯ ಮಹತ್ವದ ತಾಣಗಳ ರಕ್ಷಣೆ, ಶೋಧನೆ ಮತ್ತು ರಕ್ಷಣೆ ಕಾರ್ಯಗಳಿಗೆ ಹಾಗೂ ವಿಪತ್ತು ಪರಿಹಾರಕ್ಕೆ ಈ ಪಡೆಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗುತ್ತದೆ. 1,500 ಸಿಬ್ಬಂದಿಯಿರುವ ಈ ಪಡೆ ವಾಯುಸೇನೆಯಲ್ಲಿ ಅತ್ಯಂತ ಮಹತ್ವ ಹೊಂದಿದೆ. ಅದಕ್ಕೆಂದೇ ವಿಶೇಷ ತರಬೇತಿ ಸಹ ನೀಡಲಾಗುತ್ತದೆ.

ರಾಯಲ್ ಏರ್​ಫೋರ್ಸ್

ಭಾರತೀಯ ವಾಯುಸೇನೆಯನ್ನು ಸ್ಥಾಪಿಸಿದ ಬ್ರಿಟಿಷ್ ಸರ್ಕಾರ 2ನೇ ಮಹಾಯುದ್ಧದ ಸಮಯದಲ್ಲಿ 9 ಕೋಟಿ ಭಾರತೀಯರೊಂದಿಗೆ ವಾಯುಸೇನೆಯನ್ನೂ ತನ್ನೊಂದಿಗೆ ಯುದ್ಧದಲ್ಲಿ ಸೇರಿಸಿಕೊಂಡಿತು. ಯುದ್ಧದಲ್ಲಿ ಸೇನೆ ತೋರಿದ ಸಾಮರ್ಥ್ಯವನ್ನು ಗುರುತಿಸಿ ರಾಯಲ್ ಎನ್ನುವ ಹೆಸರನ್ನು ಪಡೆಗೆ ಸೇರಿಸಲಾಯಿತು. 1947ರಲ್ಲಿ ಸ್ವಾತಂತ್ರ್ಯ ಸಿಕ್ಕ ನಂತರ ವಾಯುಸೇನೆಯನ್ನು ರಾಯಲ್ ಇಂಡಿಯನ್ ಏರ್​ಫೋರ್ಸ್ ಎನ್ನುವ ಹೆಸರಿನಲ್ಲಿ ಗುರುತಿಸಲಾಯಿತು. 1950ರಲ್ಲಿ ಸಂವಿಧಾನ ರಚನೆಯಾದ ನಂತರ ರಾಯಲ್ ಹೆಸರನ್ನು ಕೈ ಬಿಟ್ಟು ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಯಿತು.

2020ರ ವಿಶೇಷತೆಪ್ರತಿ ವರ್ಷದಂತೆ ಈ ಅಕ್ಟೋಬರ್ 8ರಂದು ಗಾಜಿಯಾಬಾದ್​ನ ಹಿಂಡನ್ ವಾಯುನೆಲೆಯಲ್ಲಿ ಭಾರತೀಯ ವಾಯುಸೇನೆ ದಿನಾಚರಣೆ ನಡೆಯಲಿದೆ. ಈ ವರ್ಷ ರಫೇಲ್ ಯುದ್ಧ ವಿಮಾನಗಳು ಪರೇಡ್​ನ ಮುಖ್ಯ ಆಕರ್ಷಣೆಯಾಗಲಿದೆ. ಸುಕೋಯ್, ತೇಜಸ್, ಅಪಾಚೆ, ಮಿಗ್ ಸೇರಿ ಅನೇಕ ಯುದ್ಧ ವಿಮಾನಗಳು ಶಕ್ತಿ ಪ್ರದರ್ಶನ ಮಾಡಲಿವೆ. ವಿಶೇಷ ಹೆಲಿಕಾಫ್ಟರ್​ಗಳು ಸಾಹಸ ಪ್ರದರ್ಶಿಸಲಿವೆ. ಒಟ್ಟಾರೆ 56 ಏರ್​ಕ್ರಾಫ್ಟ್​ಗಳು, 19 ಫೈಟರ್ ಜೆಟ್​ಗಳು, 19 ಹೆಲಿಕಾಫ್ಟರ್​ಗಳು ಈ ವರ್ಷದ ಪರೇಡ್​ನಲ್ಲಿ ಕಾಣಿಸಿಕೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.10 ವರ್ಷದಲ್ಲಿ 400 ವಿಮಾನ ಸೇರ್ಪಡೆವಾಯುಸೇನೆಯ ಇನ್ನಷ್ಟು ಬಲ ತುಂಬುವ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿರುವುದಾಗಿ ಏರ್ ಚೀಫ್ ಮಾರ್ಷಲ್ ಆರ್​ಕೆಎಸ್ ಭದೌರಿಯಾ ತಿಳಿಸಿದ್ದಾರೆ. 10 ವರ್ಷಗಳಲ್ಲಿ 400ಕ್ಕೂ ಹೆಚ್ಚು ವಿಮಾನಗಳನ್ನು ಪಡೆಗೆ ಸೇರಿಸಲಾಗುವುದು ಎಂದಿದ್ದಾರೆ.