ನ್ಯೂಸ್

ತೀವ್ರ ಸಂಕಷ್ಟಕ್ಕೆ ಸಿಲುಕಿದ ಕ್ಷೌರಿಕರ ಬದುಕು: ಹಲವು ದಿನಗಳಿಂದ ಹೇರ್ ಸಲೂನ್​ಗಳು ಬಂದ್ | ಆದಾಯವಿಲ್ಲದೆ ದಿನನಿತ್ಯ ಪರದಾಟ

ಬೆಂಗಳೂರು: ಕರೊನಾ ಲಾಕ್​ಡೌನ್​ನಿಂದ ದೇಶಾದ್ಯಂತ ಕೋಟ್ಯಂತರ ಕಾರ್ವಿುಕರು ತೀವ್ರ ಸಂಕಷ್ಟ ಎದುರಿಸುತ್ತಿರುವ ಬೆನ್ನಲ್ಲೇ, ಕ್ಷೌರಿಕರು ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ. ಸುಮಾರು 2.5 ಲಕ್ಷ ಕ್ಷೌರಿಕರಿಗೆ ಭವಿಷ್ಯದ ಚಿಂತೆ ಎದುರಾಗಿದೆ.

ಲಾಕ್​ಡೌನ್ ಹಿನ್ನೆಲೆಯಲ್ಲಿ ಸಲೂನ್​ಗಳನ್ನು ತೆರೆಯುವಂತಿಲ್ಲ. ಹೀಗಾಗಿ ಹಲವು ದಿನಗಳಿಂದ ಆದಾಯ ಸ್ಥಗಿತಗೊಂಡಿದೆ. ಮನೆ, ಅಂಗಡಿ ಬಾಡಿಗೆ ಪಾವತಿ, ಮಕ್ಕಳ ಶಾಲಾ ಶುಲ್ಕ, ಆಹಾರ ಸಾಮಗ್ರಿ ಖರೀದಿಗೂ ದಾನಿಗಳ ಮೊರೆ ಹೋಗುವಂತಾಗಿದ್ದು, ದಿಕ್ಕು ತೋಚದಂತಾಗಿದ್ದಾರೆ.

ನಿತ್ಯ 15 ಲಕ್ಷ ರೂ. ವಹಿವಾಟು: ರಾಜ್ಯದ 2.5 ಲಕ್ಷ ಕ್ಷೌರಿಕರ ಪೈಕಿ ಶೇ.60 ಮಂದಿ ಸಣ್ಣ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿರುವವರು. ಅವರು ನಿತ್ಯ 300 ರೂ.ನಿಂದ 600 ರೂ. ಗಳಿಸುತ್ತಿದ್ದರು. ದೊಡ್ಡ ನಗರಗಳ ಕ್ಷೌರಿಕರು ಗರಿಷ್ಠ 1,500 ರೂ.ವರೆಗೆ ದುಡಿಯುತ್ತಿದ್ದರು. ನಿತ್ಯ 15 ಲಕ್ಷ ರೂ.ಗೂ ಅಧಿಕ ವಹಿವಾಟು ನಡೆಯುತ್ತಿತ್ತು. ರಾಜ್ಯದಲ್ಲಿ ತೆರಿಗೆ ಪಾವತಿಸುವ ವಲಯಗಳಲ್ಲಿ ಸೌಂದರ್ಯ ವರ್ಧಕ ಉತ್ಪನ್ನಗಳು 4ನೇ ಸ್ಥಾನದಲ್ಲಿದೆ. ಸೌಂದರ್ಯ ವರ್ಧಕಗಳ ಮಾರಾಟದಿಂದ ಮಾಸಿಕ 100 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ಆದರೆ, ಲಾಕ್​ಡೌನ್​ನಿಂದಾಗಿ ಆ ತೆರಿಗೆಯೂ ಸರ್ಕಾರಕ್ಕೆ ಬರದಂತಾಗಿದೆ.

ಆದಾಯ ಗಳಿಕೆ ಕಷ್ಟ: ಲಾಕ್​ಡೌನ್ ನಂತರ ಸಲೂನ್ ತೆರೆದರೂ, ಮೊದಲಿನಂತೆ ವಹಿವಾಟು ನಡೆಯಲು ತಿಂಗಳುಗಳೇ ಬೇಕು. ಕ್ಷೌರಿಕರು ಜನರ ನಿಕಟ ಸಂಪರ್ಕದಲ್ಲಿ ಕೆಲಸ ಮಾಡಬೇಕಾಗುತ್ತದೆ. ಕರೊನಾ ಹರಡುವ ಭಯ ಇರುವ ಕಾರಣ ಜನರು ಸಲೂನ್​ಗೆ ಬರಲು ಹಿಂಜರಿಯುತ್ತಾರೆ. ಹೀಗಾಗಿ ಲಾಕ್​ಡೌನ್ ಮುಗಿದರೂ, ಮೊದಲಿನಷ್ಟು ಆದಾಯ ಬರುವುದು ಕಷ್ಟ ಎನ್ನುವಂತಾಗಿದೆ.

ಜನರಿಗೂ ಸಮಸ್ಯೆ: ಅನೇಕರು ನಿತ್ಯ ಶೇವಿಂಗ್ ಮಾಡಿಸಿ ಕೊಳ್ಳುವುದು, ಕೆಲವರು ನಿಗದಿತ ದಿನಕ್ಕೊಮ್ಮೆ ಕ್ಷೌರ ಮಾಡಿಸಿಕೊಳ್ಳುವ ಪರಿಪಾಠ ಹೊಂದಿದ್ದಾರೆ. ಆದರೆ ಈಗ ಅದು ಸಾಧ್ಯವಾಗದೇ ಮಾನಸಿಕವಾಗಿ ವ್ಯಥೆ ಪಡುವಂತಾಗಿದೆ. ಗ್ರಾಮೀಣ ಭಾಗದಲ್ಲಿಯೂ ಮನೆಮನೆಗೆ ಭೇಟಿನೀಡುತ್ತಿದ್ದ ಹಳೆ ಪದ್ಧತಿ ಈಗ ಮತ್ತೆ ಜೀವ ಪಡೆದಿದೆ. ಕೆಲವರು ತಮ್ಮ ಪರಿಚಯದ ಕ್ಷೌರಿಕರನ್ನು ಮನೆಗೆ ಕರೆಸಿಕೊಂಡು ಕ್ಷೌರ ಮಾಡಿಸಿಕೊಳ್ಳುತ್ತಿದ್ದಾರೆ.

ಪಿಪಿಇಗೆ ಆಗ್ರಹ: ಜನರೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಕೆಲಸ ಮಾಡಬೇಕಿರುವ ಕಾರಣ ಪಿಪಿಇ ಕಿಟ್ ನೀಡುವಂತೆ ಕ್ಷೌರಿಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜತೆಗೆ ಆರ್ಥಿಕ ಸಮಸ್ಯೆ ನೀಗಿಸಲು ಪ್ಯಾಕೆಜ್ ಘೋಷಿಸುವಂತೆಯೂ ಆಗ್ರಹಿಸಲಾಗುತ್ತಿದೆ.

ಲಾಕ್​ಡೌನ್ ಮತ್ತು ಕರೊನಾ ಭೀತಿಯಿಂದಾಗಿ ಕ್ಷೌರಿಕರಿಗೆ ದುಡಿಮೆಯೇ ಇಲ್ಲದಂತಾಗಿದೆ. ರಾಜ್ಯದಲ್ಲಿನ 2.5 ಲಕ್ಷ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ ಈಗಲಾದರೂ ಕ್ಷೌರಿಕರ ಸಮಸ್ಯೆಗಳನ್ನು ನೀಗಿಸಲು ಆರ್ಥಿಕ ನೆರವು ನೀಡಬೇಕು.

| ಬೈಲಪ್ಪ ನಾರಾಯಣಸ್ವಾಮಿ ಸವಿತಾ ಕ್ಷೇಮಾಭಿವೃದ್ಧಿ ಮತ್ತು ಜಾಗೃತಿ ವೇದಿಕೆ ಕಾರ್ಯಾಧ್ಯಕ್ಷ