ಬೆಂಗಳೂರು: ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಸಿಸ್) ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ‘ಕುರಾನ್ ಸರ್ಕಲ್’ ಗ್ರೂಪ್ ಸೃಷ್ಟಿಸಿಕೊಂಡಿದ್ದ ಬಂಧಿತ ಶಂಕಿತ ಉಗ್ರಗಾಮಿಗಳ ಬಗ್ಗೆ ಕುತೂಹಲಕಾರಿ ಅಂಶಗಳು ಒಂದೊಂದೇ ಹೊರಗೆ ಬರತೊಡಗಿವೆ. ಬೆಂಗಳೂರಿನಲ್ಲಿ ಸೆರೆಸಿಕ್ಕ ಶಂಕಿತರಾದ ಅಹ್ಮದ್ ಹಾಗೂ ಇರ್ಫಾನ್‌ನನ್ನು ಎನ್‌ಐಎ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಇದೀಗ ದೆಹಲಿಗೆ ಕರೆದೊಯ್ದಿದ್ದಾರೆ.
ಈಗಾಗಲೇ ಐಸಿಸ್ ರಹಸ್ಯ ಅಪ್ಲಿಕೇಷನ್ ಸಿದ್ದಪಡಿಸುತ್ತಿದ್ದ ಪ್ರಕರಣದಲ್ಲಿ ಬಂಧಿತನಾಗಿರುವ ಡಾ. ಅಬ್ದುರ್ ರೆಹಮಾನ್ ಅಲಿಯಾಸ್ ಡಾ. ಬ್ರೇವ್ ಸಹ ಎನ್‌ಐಎ ಕಸ್ಟಡಿಯಲ್ಲಿದ್ದಾನೆ. 2014ರಲ್ಲಿ ಡಾ. ಬ್ರೇವ್‌ನನ್ನು ಸಿರಿಯಾಗೆ ಐಸಿಸ್ ತರಬೇತಿಗೆ ಕಳುಹಿಸಿದ್ದರ ಹಿಂದೆ ಕುರಾನ್ ಸರ್ಕಲ್ ಕೈವಾಡ ಇರುವುದು ಬಯಲಾಗಿದೆ. ಹಾಗಾಗಿ ದೆಹಲಿಯಲ್ಲಿ ಡಾ. ಬ್ರೇವ್ ಮತ್ತು ಕುರಾನ್ ಸರ್ಕಲ್‌ನ ಇಬ್ಬರೂ ಬಂಧಿತ ಸದಸ್ಯರನ್ನು ಎದುರುಬದುರು ಕೂರಿಸಿ ‘ಸಿರಿಯಾ ಯಾತ್ರೆ’ ಕುರಿತು ವಿಚಾರಣೆ ನಡೆಸಲು ಎನ್‌ಐಎ ಅಧಿಕಾರಿಗಳು ಮುಂದಾಗಿದ್ದಾರೆ.