ನ್ಯೂಸ್

ಮತ್ತೆ ದಾಳಿ ಮಾಡಿದ ಚಿರತೆ; ನಿನ್ನೆ ಬಾಲಕಿ, ಇಂದು ರೈತನ ಮೇಲೆ ದಾಳಿ!

Webdesk - Savina Naik

ಚಾಮರಾಜನಗರ: ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ಬಾಲಕಿಯ ಮೇಲೆ ಚಿರತೆ ದಾಳಿ ನಡೆಸಿದ ಬೆನ್ನಲ್ಲೇ ಸಮೀಪದ ಕಂಚಗಳ್ಳಿ ಗ್ರಾಮದಲ್ಲಿ ರೈತರ ಮೇಲೆ ದಾಳಿ ನಡೆಸಿದೆ.

ಮೋಡಹಳ್ಳಿ ಗ್ರಾಮದ ನಂಜಪ್ಪಗೆ ಗಾಯಗಳಾಗಿವೆ. ಜೋಳದ ಫಸಲನ್ನು ಕಾವಲು ಕಾಯಲು ಮಂಗಳವಾರ ರಾತ್ರಿ ಜಮೀನಿನಲ್ಲಿ ಮಲಗಿದ್ದ ನಂಜಪ್ಪನ ಮೇಲೆ ಚಿರತೆ ದಾಳಿ ನಡೆಸಿ ಪರಚಿ ಗಾಯಗೊಳಿಸಿದೆ. ಗಾಯಾಳು ಸಮೀಪದ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಡಿವೈಎಸ್ಪಿ ಸೋಮೇಗೌಡ ಇನ್ಸ್ಪೆಕ್ಟರ್ ಶಶಿಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಕಗ್ಗಲಿಗುಂದಿಯಲ್ಲಿ ಸೋಮವಾರ ರಾತ್ರಿ ಬಾಲಕಿ ಮೇಲೆ ದಾಳಿ ಮಾಡಿದ್ದ ಪ್ರಾಣಿಯನ್ನು ಚಿರತೆ ಎಂದು ಅರಣ್ಯ ಇಲಾಖೆ ದೃಢಪಡಿಸಿತು. ಗ್ರಾಮಸ್ಥರು ರಾತ್ರಿ ವೇಳೆ ಒಬ್ಬರೇ ಓಡಾಡಬೇಡಿ, ಜಮೀನುಗಳಿಗೆ ಹೋಗಬೇಡಿ ಎಂದು ಮನವಿ ಮಾಡಿತ್ತು.

ಕಾಡಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳ ದಾಳಿ ತಪ್ಪಿಸಲು ಎಷ್ಟೆಲ್ಲಾ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ ಜನರ ಜೀವಗಳಿಗೆ “ಗ್ಯಾರಂಟಿ” ಸಿಗುತ್ತಿಲ್ಲ. ಕತ್ತಲಿನ ಕಾರಣಕ್ಕೆ ದಾಳಿ ಮಾಡೋ‌ ಕಾಡು ಪ್ರಾಣಿ ಯಾವುದು ಎಂದು ತಿಳಿದುಕೊಳ್ಳೋಕೂ ಆಗುತ್ತಿಲ್ಲ.  ವನ್ಯಪ್ರಾಣಿ ದಾಳಿ ಇಡೀ ಗ್ರಾಮಸ್ಥರಲ್ಲಿ ತಲ್ಲಣ ಸೃಷ್ಟಿಸಿದೆ.‌ ಜಮೀನುಗಳಿಗೆ ಹೋಗುವುದಿರಲಿ‌ ಮನೆ ಮುಂದೆ ಕೂರುವುದಕ್ಕೂ ಹೆದರುತ್ತಿದ್ದಾರೆ.