ನ್ಯೂಸ್

ಸೌಂದರ್ಯಕ್ಕೆ ಮರುಳಾಗಿ ಲೇಡಿ ಕಾನ್ಸ್​ಟೆಬಲ್​ ಪ್ರೀತಿಯ ಬಲೆಯಲ್ಲಿ ಬಿದ್ದ ಎಸ್​ಐಗೆ ಕಾದಿತ್ತು ಬಿಗ್​ ಶಾಕ್​!

ಭೋಪಾಲ್​: ಮಹಿಳಾ ಕಾನ್ಸ್​ಟೆಬಲ್​ ಒಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಸಬ್​ ಇನ್ಸ್​ಪೆಕ್ಟರ್​ನನ್ನು ಕೊಂದಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಬಯೋರಾದಲ್ಲಿ ನಡೆದಿದೆ.

ದೀಪಂಕರ್​ ಗೌತಮ್ ಕೊಲೆಯಾದ ಎಸ್​ಐ. ಮಹಿಳಾ ಪೇದೆ ಪಲ್ಲವಿ ಸೋಲಂಕಿ ತನ್ನ ಪ್ರಿಯಕರ ಕರಣ್​ ಠಾಕೂರ್​ ಜತೆ ಸೇರಿ  ಕಾರಿನಲ್ಲಿ ಡಿಕ್ಕಿ ಹೊಡೆಸಿ ಕೊಂದಿದ್ದಾರೆ.​ ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

ರಾಜಗಢ್ ಜಿಲ್ಲೆಯ ಮಹಿಳಾ ಪೇದೆ ಪಲ್ಲವಿ ಸೋಲಂಕಿ, ಕರಣ್ ಠಾಕೂರ್​ನನ್ನು ಪ್ರೀತಿಸುತ್ತಿದ್ದಳು. ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಗೆ ಏನಾಯಿತೋ ಏನೋ ಮಧ್ಯದಲ್ಲಿ ಬೇರ್ಪಟ್ಟಿದ್ದರು. ಕರಣ್ ಜೊತೆಗಿನ ಸಂಬಂಧ ಕಡಿದುಕೊಂಡ ನಂತರ ಪಲ್ಲವಿ ಅದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಎಸ್‌ಐ ದೀಪಂಕರ್ ಗೌತಮ್ ಸಂಪರ್ಕಕ್ಕೆ ಬಂದಳು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿ ಆತ್ಮೀಯವಾಗಿ ಮಾತನಾಡುತ್ತಿದ್ದರು. ಇಬ್ಬರ ನಡುವೆ ವಿವಾಹೇತರ ಸಂಬಂಧ ಕೂಡ ಬೆಳೆಯಿತು. ಈ ಬಗ್ಗೆ ಮಾಜಿ ಪ್ರಿಯಕರನಿಗೆ ಅನುಮಾನ ಬಂದಿದ್ದರಿಂದ ಪಲ್ಲವಿಯನ್ನು ತರಾಟೆಗೆ ತೆಗೆದುಕೊಂಡಿದ್ದ. ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಇದಾದ ಬಳಿಕ ಮತ್ತೆ ಮಾಜಿ ಪ್ರಿಯಕರನೊಂದಿಗೆ ಒಂದಾದ ಪಲ್ಲವಿ, ಪ್ಲಾನ್​ ಮಾಡಿ ಎಸ್​ಐ ಅನ್ನು ಕೊಂದಿದ್ದಾಳೆ.

ಇಬ್ಬರ ಪ್ರೀತಿಗೆ ದೀಪಂಕರ ಅಡ್ಡಿಯಾಗುತ್ತಾನೆಂದು ಪ್ಲಾನ್ ಮಾಡಿ ಕೊಲೆ ಮಾಡಿದ್ದಾಳೆ. ಕಳೆದ ಮಂಗಳವಾರ ಎಸ್​ಐ ದೀಪಂಕರ್ ಗೌತಮ್ ಮನೆಯಲ್ಲಿದ್ದಾಗ ಪಲ್ಲವಿ ಫೋನ್ ಮಾಡಿ ಭೋಪಾಲ್ ಬೈಪಾಸ್​ ರಸ್ತೆಗೆ ಬರುವಂತೆ ಹೇಳಿದ್ದಾಳೆ. ಬಯೋರಾ-ದೇವಾಸ್ ಹೆದ್ದಾರಿಯಲ್ಲಿ ದೇಹತ್ ಪೊಲೀಸ್ ಠಾಣೆ ಕಡೆಗೆ ಬೈಕ್​ನಲ್ಲಿ ಹೋಗುತ್ತಿದ್ದಾಗ ಕರಣ್ ಮತ್ತು ಪಲ್ಲವಿ ಕಾರಿನಲ್ಲಿ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ದೀಪಂಕರ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ತಮ್ಮ ಕಾರಿನೊಂದಿಗೆ ಅವರನ್ನು 30 ಮೀಟರ್ ಎಳೆದೊಯ್ದಿದ್ದಾರೆ. ಇದರಿಂದ ದೀಪಂಕರ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಆಂಬ್ಯುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಎಸ್‌ಐ ದೀಪಂಕರ್ ಗೌತಮ್ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು.

ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಎಸ್‌ಐಗೆ ಡಿಕ್ಕಿ ಹೊಡೆದ ಕಾರಿನ ನಂಬರ್ ಗುರುತಿಸಿ, ತನಿಖೆ ನಡೆಸಿದಾಗ ಪೇದೆ ಪಲ್ಲವಿ ಮತ್ತು ಆಕೆಯ ಗೆಳೆಯ ಕರಣ್ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಬಂಧನದ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಇಬ್ಬರು ಒಪ್ಪಿಕೊಂಡಿದ್ದಾರೆ ಎಂದು ದೇಹತ್ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಗೋವಿಂದ್ ಮೀನಾ ತಿಳಿಸಿದ್ದಾರೆ. ಪ್ರೀತಿಗೆ ಅಡ್ಡಿಯಾಗುತ್ತಾರೆ ಅಂತ ಕೊಲೆ ಮಾಡಿದ್ದಾಗಿ ಹೇಳಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)