ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮುಂದಿನವಾರ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಲಿದ್ದಾರೆ. ಪ್ರಕರಣ ತನಿಖಾ ವೆಚ್ಚ ಇಲ್ಲಿಯವರೆಗೂ 5. ಲಕ್ಷ ರೂ. ಆಗಿದೆ ಎನ್ನಲಾಗಿದೆ. ಎಲೆಕ್ಟ್ರಾನಿಕ್ ಡಿವೈಸ್ಗಳ ಖರೀದಿಗೆ ಹೆಚ್ಚು ವೆಚ್ಚ ಮಾಡಿರುವುದು ಕಂಡು ಬಂದಿದೆ. ಟ್ರಾನ್ಸ್ಪೋರ್ಟ್, ಹಾರ್ಡ್ ಡಿಸ್ಕ್, ಪೆನ್ ಡ್ರೖೆವ್, ಪೇಪರ್, ಕಾರ್ಡ್ ರೀಡರ್, ಆರೋಪಿಗಳಿಗೆ ಊಟ, ತಿಂಡಿ, ಎಫ್ಎಸ್ಎಲ್ ಸೇರಿ ಹಲವು ಖರ್ಚು-ವೆಚ್ಚ 5 ಲಕ್ಷ ರೂ. ಆಗಿದೆ. ಹಾರ್ಡ್ ಡಿಸ್ಕ್, ಪೆನ್ಡ್ರೖೆವ್, ಖರೀದಿಗೆ ಹೆಚ್ಚು ಹಣ ಖರ್ಚಾಗಿದೆ ಎನ್ನಲಾಗಿದೆ. ಪ್ರಕರಣದ ಖರ್ಚು ವೆಚ್ಚವನ್ನು ಚಾರ್ಜ್ಶೀಟ್ನಲ್ಲಿ ಪೋಲಿಸರು ಉಲ್ಲೇಖಿಸಲು ಚಿಂತಿಸಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್ ಬೇಲ್ಗೆ ಕಂಟಕ: ಪರಪ್ಪನ ಅಗ್ರಹಾರದಲ್ಲಿದ್ದಾಗ ನಟ ದರ್ಶನ್ ನಟೋರಿಯಸ್ ರೌಡಿಶೀಟರ್ಗಳ ಜತೆ ಇದ್ದ ಫೋಟೋ ಮತ್ತು ವಿಡಿಯೋ ವೈರಲ್ ಆಗಿದ್ದು, ಇದು ದರ್ಶನ್ ಬೇಲ್ಗೆ ಕಂಟಕವಾಗಲಿದೆ ಎನ್ನಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಸಲ್ಲಿಸಲು ಪೊಲೀಸರು ಅಂತಿಮ ತಯಾರಿ ನಡೆಸಿದ್ದಾರೆ. ಚಾರ್ಜ್ಶೀಟ್ ಸಲ್ಲಿಕೆ ಆಗುತ್ತಿದ್ದಂತೆ ಜಾಮೀನಿಗೆ ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರು ಮುಂದಾಗಲಿದ್ದಾರೆ. ಆದರೆ, ಅರ್ಜಿ ಸಲ್ಲಿಸಿದಾಗ ರೌಡಿಶೀಟರ್ಗಳ ಜತೆ ದರ್ಶನ್ ಗುರುತಿಸಿಕೊಂಡಿದ್ದ ಫೋಟೋ ಮತ್ತು ವಿಡಿಯೋ ಮುಂದಿಟ್ಟುಕೊಂಡು ಪೊಲೀಸರು ಜಾಮೀನು ಅರ್ಜಿಗೆ ತಕರಾರು ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಇದು ದರ್ಶನ್ ಬೇಲ್ಗೆ ಕಂಟಕವಾಗಬಹುದು ಎನ್ನಲಾಗಿದೆ.
ಸರ್ಜಿಕಲ್ ಚೇರ್ಗೆ ದರ್ಶನ್ ಬೇಡಿಕೆ: ಬಳ್ಳಾರಿ: ನಟ ದರ್ಶನ್ಗೆ ಬೆನ್ನೆಲುಬು ಸಮಸ್ಯೆಯಿದ್ದು, ಶೌಚಕ್ಕಾಗಿ ಸರ್ಜಿಕಲ್ ಚೇರ್ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ ಎಂದು ಕಾರಾಗೃಹ ಇಲಾಖೆಯ ಉತ್ತರ ವಲಯ ಉಪ ಮಹಾನಿರೀಕ್ಷಕ ಟಿ.ಪಿ. ಶೇಷ ತಿಳಿಸಿದರು. ನಗರದ ಕೇಂದ್ರ ಕಾರಾಗೃಹದಲ್ಲಿನ ದರ್ಶನ್ ಸೆಲ್ಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿ ಬಳಿಕ ಮಾತನಾಡಿ, ಜೈಲಿನಲ್ಲಿ ಇಂಡಿಯನ್ ಶೌಚ ಮಾದರಿ ಇದೆ. ತನಗೆ ಬೆನ್ನೆಲುಬು ಸಮಸ್ಯೆಯಿದ್ದು, ಶೌಚಕ್ಕೆ ಕಷ್ಟವಾಗುತ್ತದೆ ಎಂದು ದರ್ಶನ್ ತಿಳಿಸಿದ್ದಾರೆ. ವೆಸ್ಟ್ರರ್ನ್ ಕಮೋಡ್ ಅಥವಾ ಸರ್ಜಿಕಲ್ ಚೇರ್ ಕೊಡಿ ಎಂದು ಮನವಿ ಮಾಡಿದ್ದಾರೆ. ವೈದ್ಯರು ಬೆನ್ನೆಲುಬು ಸಮಸ್ಯೆ ಬಗ್ಗೆ ಖಚಿತಪಡಿಸಿದ ಬಳಿಕ ಸರ್ಜಿಕಲ್ ಚೇರ್ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಪತ್ನಿ ವಿಜಯಲಕ್ಷ್ಮಿ ಭೇಟಿ: ದರ್ಶನ್ ಪತ್ನಿ ವಿಜಯಲಕ್ಷ್ಮೀ ಮೂರು ಬ್ಯಾಗ್ ಸಮೇತ ವಕೀಲರೊಂದಿಗೆ ಶನಿವಾರ ಸಂಜೆ ಭೇಟಿ ನೀಡಿದರು. ಒಂದು ಬ್ಯಾಗ್ನಲ್ಲಿ ಬಟ್ಟೆ, ಇನ್ನು ಎರಡು ಬ್ಯಾಗ್ನಲ್ಲಿ ಡ್ರೖೆ ಫ್ರೂಟ್ಸ್, ಬಿಸ್ಕತ್ ಸೇರಿ ವಿವಿಧ ತಿಂಡಿಗಳನ್ನು ತಂದಿದ್ದರು. ಜೈಲು ಸಿಬ್ಬಂದಿಯು ಮೂರು ಬ್ಯಾಗ್ಗಳನ್ನು ಪರಿಶೀಲಿಸಿದ ಬಳಿಕ ಜೈಲಿನೊಳಗೆ ಪ್ರವೇಶಿಸಲು ಅನುಮತಿಸಿದರು. ದರ್ಶನ್ ನೋಡಿ ವಿಜಯಲಕ್ಷ್ಮೀ ಕಣ್ಣೀರು ಸುರಿಸಿದ್ದು, ಕಾನೂನು ಹೋರಾಟ ಹಾಗೂ ಪ್ರಕರಣದ ಪ್ರತಿ ಮಾಹಿತಿ ವಿವರಿಸಿದರು ಎನ್ನಲಾಗಿದೆ.
ದರ್ಗಾ ಜೈಲ್ಗೆ ವಿನಯ್: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಪ್ರಕರಣದ 10ನೇ ಆರೋಪಿ ವಿನಯ್ನನ್ನು ಶನಿವಾರ ವಿಜಯಪುರದ ದರ್ಗಾ ಜೈಲ್ಗೆ ಸ್ಥಳಾಂತರಿಸಲಾಗಿದೆ.
ಪವಿತ್ರಾಗೌಡ ಜಾಮೀನು ಅರ್ಜಿ ತಿರಸ್ಕಾರ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾಗೌಡ ಮತ್ತು ಅನುಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಗರದ 57ನೇ ಸಿಸಿಎಚ್ ಕೋರ್ಟ್ ಶನಿವಾರ ತಿರಸ್ಕರಿಸಿದೆ. ಪವಿತ್ರಾಗೌಡ ಪರ ವಕೀಲರು, ಪವಿತ್ರಾಗೌಡ ಅವರು ಮಹಿಳೆಯಾಗಿದ್ದು, ಜತೆಗೆ ಅಪ್ರಾಪ್ತ ಬಾಲಕಿಯ ತಾಯಿಯಾಗಿದ್ದಾರೆ. ರೇಣುಕಸ್ವಾಮಿ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿರುವುದೇ ಆತನ ಕೊಲೆಗೆ ಕಾರಣವಲ್ಲ ಎಂದು ವಾದಿಸಿದ್ದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್, ಆರೋಪಿ ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಬಾರದು. ರೇಣುಕಸ್ವಾಮಿಯನ್ನು ಊಹಿಸಲಾಗದಷ್ಟು ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ. ಇದಲ್ಲದೆ, ಇಬ್ಬರು ಪ್ರತ್ಯಕ್ಷದರ್ಶಿಗಳು ಪವಿತ್ರಾ ಅವರನ್ನು ಅಪರಾಧದ ಸ್ಥಳದಲ್ಲಿ ಗುರುತಿಸಿದ್ದಾರೆ. ರೇಣುಕಸ್ವಾಮಿ ರಕ್ತದ ಮಾದರಿ ಪವಿತ್ರಾಗೌಡ ಬಟ್ಟೆಯಲ್ಲಿ ಪತ್ತೆಯಾಗಿದೆ. ಅಲ್ಲದೆ, ಅಪರಾಧಕ್ಕೆ ಬಳಸಿದ ಕಾರಿನಲ್ಲಿ ಅವರು ಪ್ರಯಾಣಿಸಿದ್ದಾರೆ ಎಂದು ವಾದಿಸಿದ್ದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಅಂತಿಮವಾಗಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದೆ.