ನ್ಯೂಸ್

ಕದನಕ್ಕೆ ಸದನ ಸಜ್ಜು; ನಾಳೆಯಿಂದ ವಿಧಾನಮಂಡಲ ಬಜೆಟ್​ಅಧಿವೇಶನ

ಬೆಂಗಳೂರು: ರಾಜಕೀಯ ಘಟಾನುಘಟಿಗಳ ಮುಖಾಮುಖಿಗೆ ವೇದಿಕೆಯಾಗುವ ವಿಧಾನ ಮಂಡಲದ ಬಜೆಟ್ ಅಧಿವೇಶನ ಸೋಮವಾರ ಆರಂಭವಾಗುತ್ತಿದೆ. ಆರೋಪ-ಪ್ರತ್ಯಾರೋಪಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳು ಸಜ್ಜಾಗಿವೆ.

ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ದೆಹಲಿಯಲ್ಲಿ ಹೋರಾಟ ನಡೆಸಿ ಬಿಜೆಪಿ ಯನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿ ರುವ ರಾಜ್ಯ ಸರ್ಕಾರ ಒಂದು ಕಡೆಯಾದರೆ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹತ್ತಾರು ವಿಷಯ ಇಟ್ಟುಕೊಂಡ ಪ್ರತಿಪಕ್ಷಗಳು ಮುಖಾಮುಖಿಗೆ ಸಜ್ಜಾಗಿವೆ.

ಸಂಪ್ರದಾಯದಂತೆ ವರ್ಷದ ಮೊದಲ ಅಧಿವೇಶನ ರಾಜ್ಯಪಾಲರ ಭಾಷಣದ ಮೂಲಕ ಆರಂಭವಾಗುತ್ತದೆ. ರಾಜ್ಯಪಾಲ ಥಾವರ್​ಚಂದ್ ಗೆಹಲೋತ್ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಉದ್ದೇಶಿಸಿ ಸೋಮವಾರ ಬೆಳಗ್ಗೆ 11 ಗಂಟೆಗೆ ಭಾಷಣ ಮಾಡಲಿದ್ದಾರೆ. ಹೊಸ ಸರ್ಕಾರ ಬಂದಲ್ಲಿಂದ ಇಲ್ಲಿಯವರೆಗೆ ಆಗಿರುವ ಪ್ರಗತಿ, ಗ್ಯಾರಂಟಿ ಅನುಷ್ಠಾನ ಹಾಗೂ ಮುನ್ನೋಟವನ್ನು ನೀಡಲಿದ್ದಾರೆ. ಮಂಗಳವಾರದಿಂದ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಆರಂಭವಾಗಲಿದೆ. ಭಾಷಣದ ಚೌಕಟ್ಟು ಹೊರತಾಗಿಯೂ ಆಗುಹೋಗುಗಳ ಪ್ರಸ್ತಾಪ ಮಾಡುವ ಅನೌಪಚಾರಿಕ ಅವಕಾಶ ಬಳಸಿಕೊಂಡು ಹಲವು ವಿಷಯಗಳು ಪ್ರಸ್ತಾಪವಾಗುವ ಸಾಧ್ಯತೆ ಇದೆ.

ಫೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಗ್ಯಾರಂಟಿ ಅನುಷ್ಠಾನದ ಹೊರೆಯ ನಡುವೆ ಹೊಸತೇನನ್ನು ಕೊಡಲಿದ್ದಾರೆ ಎಂಬ ಕುತೂಹಲವೂ ಇದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಈ ಅಧಿವೇಶನ ನಡೆಯುತ್ತಿರುವ ಕಾರಣ ಸಹಜವಾಗಿ ಮೂರು ಪಕ್ಷಗಳು ಎದುರಾಳಿಗಳನ್ನು ಹಣಿಯವ ಕೆಲಸ ನಡೆಸುತ್ತವೆ. ಆಡಳಿತಾರೂಢ ಪಕ್ಷ ಕೇಂದ್ರದತ್ತ ಬೊಟ್ಟು ಮಾಡಿ ಪ್ರತಿಪಕ್ಷ ಬಿಜೆಪಿಯ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದರೆ, ಬಿಜೆಪಿಯು ರಾಜ್ಯದ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಕಟ್ಟಿಹಾಕಲು ಪ್ರಯತ್ನ ನಡೆಸಲಿದೆ. ಜೆಡಿಎಸ್ ಸಹಜವಾಗಿ ತನ್ನ ಅಸ್ತಿತ್ವವನ್ನು ತೋರ್ಪಡಿಸಲು ಒಂದಷ್ಟು ಹೋರಾಟ ನಡೆಸುವ ಉದ್ದೇಶ ಹೊಂದಿದೆ.

ಪ್ರಮುಖ ವಿಧೇಯಕಗಳ ಮಂಡನೆ: ವಾಣಿಜ್ಯ ಮಳಿಗೆ ನಾಮಫಲಕದಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡುವುದು, ಸಹಕಾರ ಸಂಘಗಳ ಆಡಳಿತ ಮಂಡಳಿಯಲ್ಲಿ ಮೀಸಲಾತಿ ಕಲ್ಪಿಸುವುದು, ಮುಖ್ಯಮಂತ್ರಿ ರಾಜಕೀಯ ಸಲಹೆಗಾರರ ರಕ್ಷಣೆಗೆ ಕಾನೂನು ಬಲ ಕಲ್ಪಿಸುವುದು, ಅಸಂಘಟಿತ ಕಾರ್ವಿುಕರ ಕಲ್ಯಾಣಕ್ಕೆ ಪ್ರತ್ಯೇಕ ವ್ಯವಸ್ಥೆ, ಕೈಗಾರಿಕೆ ಹಾಗೂ ವಾಣಿಜ್ಯ ಬಳಕೆ ನೀರಿನ ಕರ ಹೆಚ್ಚಿಸುವುದು ಸೇರಿ ಮಹತ್ವದ ವಿಧೇಯಕಗಳು ಈ ಅಧಿವೇಶನದಲ್ಲಿ ಮಂಡನೆಯಾಗಲಿದೆ.

ಜಾತಿ ಗಣತಿಗೆ ಮುಕ್ತಿ?: ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಸಂಗ್ರಹಿಸಿದ್ದ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ಜಾತಿ ಗಣತಿ ವರದಿ ಸಿದ್ಧಪಡಿಸಿಕೊಂಡಿದೆ. ವರದಿ ಮಂಡನೆಗೆ ಸರ್ಕಾರದ ಕಡೆಯಿಂದ ಸೂಚನೆ ನಿರೀಕ್ಷಿಸುತ್ತಿದ್ದು, ವಿಧಾನ ಮಂಡಲ ಅಧಿವೇಶನ ಕೊನೆಯ ಹಂತದಲ್ಲಿ ವರದಿ ಸ್ವೀಕಾರ ಪ್ರಕ್ರಿಯೆ ನಡೆಯಬಹುದು ಎಂಬ ಚರ್ಚೆ ಕಾಂಗ್ರೆಸ್​ನಲ್ಲಿದೆ.

ಪ್ರತಿಪಕ್ಷದ ಅಸ್ತ್ರಗಳೇನು?

  • ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡಿರುವ 40 ಪರ್ಸೆಂಟ್ ಕಮೀಷನ್ ಆರೋಪ.
  • ಮಂಡ್ಯದ ಹನುಮ ಧ್ವಜ ಪ್ರಕರಣ, ಹಾನಗಲ್ ಅತ್ಯಾಚಾರ ಪ್ರಕರಣ ಸೇರಿ ವಿವಿಧ ಪ್ರಕರಣಗಳನ್ನು ಸರ್ಕಾರ ನಿಭಾಯಿಸಿದ ರೀತಿ.
  • ಮೂಲಸೌಕರ್ಯ, ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಯಾಗದ ವಿಚಾರ ಹಾಗೂ ಗ್ಯಾರಂಟಿ ಯೋಜನೆ ಗಳ ಸಮರ್ಪಕ ಅನುಷ್ಠಾನ ಕೊರತೆ
  • ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಕೇಂದ್ರದಿಂದ ಆಗಿರುವ ತೆರಿಗೆ ಹಂಚಿಕೆ ಮತ್ತು ಅನುದಾನ ಕುರಿತು ಪರಸ್ಪರ ದಾಖಲೆ ಬಿಡುಗಡೆ ನಿರೀಕ್ಷೆ
  • ಬರ ಪರಿಹಾರ ಬಿಡುಗಡೆ ಆಗದೇ ಇರುವುದು ಮತ್ತು ನಾಡಿನ ವಿವಿಧ ಕಡೆ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ತಾಳುತ್ತಿರುವುದು.
  • ಲ್ಯಾಪ್​ಟಾಪ್ ಖರೀದಿ ಅಕ್ರಮ, ಗ್ರಂಥಾಲಯ ಇಲಾಖೆಯಲ್ಲಿನ ಅವ್ಯವಹಾರ ಸೇರಿ ವಿವಿಧ ಇಲಾಖೆ ಪ್ರಕರಣಗಳು
  • ಕೆಪಿಎಸ್ಸಿ ಅಧ್ಯಕ್ಷರು- ಕಾರ್ಯದರ್ಶಿ ನಡುವಿನ ಕಿತ್ತಾಟ, ಉಂಟಾಗಿರುವ ಗೊಂದಲ, ತಡೆಯಾಗಿರುವ ನೇಮಕ ಪ್ರಕ್ರಿಯೆ ಮತ್ತು ಪರಿಣಾಮಗಳು.

ಪ್ರತ್ಯಸ್ತ್ರಕ್ಕೆ ಸರ್ಕಾರ ಸಿದ್ಧ

  • ಕೇಂದ್ರದಿಂದ ಆಗುತ್ತಿರುವ ತೆರಿಗೆ ಹಂಚಿಕೆಯ ತಾರತಮ್ಯ
  • ಬರ ನಿರ್ವಹಣೆಗೆ ಬಿಡುಗಡೆಯಾಗದ ಕೇಂದ್ರದ ಅನುದಾನ
  • ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿ
  • ಹಿಂದಿನ ಬಿಜೆಪಿ ಅವಧಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆ
  • ಪಿಎಸ್​ಐ ಪರೀಕ್ಷೆ ಅಕ್ರಮದ ತನಿಖಾ ಆಯೋಗದ ವರದಿ ಸಲ್ಲಿಕೆಯಾಗಿರುವುದು
  • ಮಂಡ್ಯದಲ್ಲಿ ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಕೆ ಮಾಡಿದ ಬಿಜೆಪಿ ನಾಯಕರ ಹೇಳಿಕೆ
  • ಬಿಜೆಪಿ ಅವಧಿಯಲ್ಲಿ ಕಿಯೋನಿಕ್ಸ್​ನಲ್ಲಿ ನಡೆದಿರುವ ಅಕ್ರಮಗಳು