Friendship Recession : ಸ್ನೇಹ... ಈ ಪದ ಕೇಳಿದ್ರೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಒಂದು ಪಾಸಿಟಿವ್ ಎನರ್ಜಿ ಹುಟ್ಟಿಕೊಳ್ಳುತ್ತೆ. ಆಪತ್ತಿಗಾಗುವವನೇ ನಿಜವಾದ ಸ್ನೇಹಿತ ಎಂಬ ಮಾತನ್ನು ನೀವು ಕೇಳಿರುತ್ತೀರಿ. ಏನೇ ಕಷ್ಟ ಅಥವಾ ಸಮಸ್ಯೆ ಬಂದರೂ ಮೊದಲ ಜೊತೆಗೆ ನಿಲ್ಲುವವನೇ ಸ್ನೇಹಿತ. ಎಲ್ಲ ಸಂಬಂಧಗಳಿಗೆ ಮಿಗಿಲಾದ ಶ್ರೇಷ್ಠ ಸಂಬಂಧವೆಂದರೆ ಸ್ನೇಹ ಸಂಬಂಧ. ಸ್ನೇಹಿತರಿಲ್ಲದ ಬದುಕು ಬದುಕೇ ಅಲ್ಲ ಮತ್ತು ಸ್ನೇಹ ಸಂಬಂಧ ಬೇಡ ಎನ್ನುವವರೇ ಇಲ್ಲ. ಹೀಗಿರುವಾಗ ಇತ್ತೀಚಿನ ವರದಿಯೊಂದು ಎಲ್ಲರನ್ನು ಚಿಂತನೆಗೆ ದೂಡುವುದಂತೂ ಖಚಿತ.
ಹಾರ್ವರ್ಡ್ ಬಿಸಿನೆಸ್ ರಿವ್ಯೂವ್ ಮ್ಯಾಗಜಿನ್ನಲ್ಲಿ ಕಳೆದ ಫೆಬ್ರವರಿಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿ ಬರೆಯಲಾಗಿರುವ ವಿಷಯವು ನಿಮ್ಮ ಮನಸ್ಸನ್ನು ಖಂಡಿತವಾಗಿ ಕದಡಲಿದೆ. ಸ್ನೇಹ ಹಿಂಜರಿತ ಅಥವಾ ಅರ್ಥಪೂರ್ಣ ಸ್ನೇಹಗಳ ಕ್ಷೀಣಿಸುತ್ತಿರುವ ಟ್ರೆಂಡ್, ನಮ್ಮ ಜೀವನದಲ್ಲಿ ನಿಧಾನವಾಗಿ ಹೇಗೆ ಬೇರೂರುತ್ತಿದೆ ಎಂಬುದನ್ನು ಈ ಲೇಖನದಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ.
ಅಮೆರಿಕನ್ ಪರ್ಸ್ಪೆಕ್ಟಿವ್ಸ್ ಸಮೀಕ್ಷೆಯ ಪ್ರಕಾರ, "ಆಪ್ತ ಸ್ನೇಹಿತರಿಲ್ಲ" ಎಂದು ಹೇಳುವ ಅಮೆರಿಕನ್ ವಯಸ್ಕರ ಸಂಖ್ಯೆ 1990 ರಿಂದ ನಾಲ್ಕು ಪಟ್ಟು ಹೆಚ್ಚಾಗಿ ಶೇ. 12ಕ್ಕೆ ತಲುಪಿದೆ. ಇದೇ ಸಮಯದಲ್ಲಿ ಸುಮಾರು 10ಕ್ಕಿಂತಲೂ ಹೆಚ್ಚು ಆಪ್ತ ಸ್ನೇಹಿತರನ್ನು ಹೊಂದಿದ್ದ ಜನರು ಇದೀಗ 1 ರಿಂದ 3 ಆಪ್ತ ಸ್ನೇಹಿತರಿಗೆ ಇಳಿದಿದ್ದಾರೆ. ಇದೇ ರೀತಿಯ ಟ್ರೆಂಡ್ ಭಾರತದ ನಗರ ಪ್ರದೇಶಗಳಲ್ಲಿ ಉದಯಿಸುತ್ತಿದ್ದು, ಪರಿಚಯಸ್ಥರ ಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ಆಪ್ತ ಸ್ನೇಹಿತರು ವಿರಳವಾಗುತ್ತಿದ್ದಾರೆ.
ಈ ಹಿಂದೆ ಜನರು ಕೆಫೆ ಮತ್ತು ಬಾರ್ಗಳಲ್ಲಿ ಅಪರಿಚಿತ ವ್ಯಕ್ತಿಗಳ ಜೊತೆ ಸುಲಭವಾಗಿ ಮಾತುಕತೆ ನಡೆಸಿ, ಸ್ನೇಹ ಬೆಳೆಸುತ್ತಿದ್ದರು. ಆದರೆ, ಈಗ ಜನರು ಜನಸಂದಣಿಯಿಂದ ದೂರವಿದ್ದು, ಏಕಾಂಗಿಯಾಗಿ ಕುಳಿತುಕೊಳ್ಳುತ್ತಿದ್ದಾರೆ. ಕಳೆದ 2 ವರ್ಷಗಳಲ್ಲಿ ಅಮೆರಿಕದಲ್ಲಿ ಒಂಟಿಯಾಗಿ ಊಟ ಮಾಡುವವರ ಸಂಖ್ಯೆ ಶೇ.29 ರಷ್ಟು ಹೆಚ್ಚಾಗಿದೆ. ಈ ಟ್ರೆಂಡ್ ಅನ್ನು ಗಂಭೀರವಾಗಿ ಪರಿಗಣಿಸಿರುವ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಡಿಸೈನ್ ಫಾರ್ ಹೆಲ್ದಿ ಫ್ರೆಂಡ್ಶಿಪ್ (ಆರೋಗ್ಯಕರ ಸ್ನೇಹಕ್ಕಾಗಿ ವಿನ್ಯಾಸ) ಎಂಬ ಹೊಸ ಕೋರ್ಸ್ ಅನ್ನೇ ಪರಿಚಯಿಸಿದೆ. ಸ್ನೇಹವನ್ನು ರೂಪಿಸಲು ಮತ್ತು ನಿರ್ವಹಿಸಲು ಪ್ರಸ್ತುತ ಕಲಿಕೆ ಮತ್ತು ಪ್ರಯತ್ನದ ಅಗತ್ಯವಿದೆ ಎಂಬುದನ್ನು ಈ ಕೋರ್ಸ್ ಎತ್ತಿ ತೋರಿಸುತ್ತದೆ.
ಇದನ್ನೂ ಓದಿ: ಇಂಗ್ಲೆಂಡ್ ವಿಕೆಟ್-ಕೀಪರ್ ಈಗ ಚಿತ್ರ ಕಲಾವಿದ!: ಕ್ರಿಕೆಟ್ಗಿಂತ ಪೇಂಟಿಂಗ್ನಲ್ಲೇ ಹೆಚ್ಚು ಹಣ ಸಂಪಾದನೆ
ಅಂದಹಾಗೆ, ಈ ಸ್ನೇಹ ಹಿಂಜರಿತ ಎಂಬುದು ಕೇವಲ ಸಾಮಾಜಿಕ ಸಮಸ್ಯೆಯಲ್ಲ, ಸಾಂಸ್ಕೃತಿಕ ಬಿಕ್ಕಟ್ಟು ಕೂಡ ಹೌದು. ಸ್ನೇಹಕ್ಕಾಗಿ ಸಮಯ ಮೀಸಲಿಡುವುದು ಇನ್ನು ಮುಂದೆ ಐಷಾರಾಮಿಯಾಗಿರಬಾರದು, ಬದಲಾಗಿ ಆದ್ಯತೆಯಾಗಬೇಕಿದೆ. ಪ್ರಸ್ತತ ಟ್ರೆಂಡ್ ನೋಡಿದರೆ ಒಂಟಿತನ ಎಂಬುದು ಇನ್ನು ಮುಂದೆ ಕೇವಲ ಆಯ್ಕೆಯಲ್ಲ, ನಿಧಾನವಾಗಿ ಜನರ ಅಭ್ಯಾಸವಾಗಿ ಬದಲಾಗುತ್ತಿದೆ. ನಾವು ಪ್ರಜ್ಞಾಪೂರ್ವಕವಾಗಿ ಸ್ನೇಹಕ್ಕೆ ಆದ್ಯತೆ ನೀಡದಿದ್ದರೆ, ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಕಷ್ಟಕರವಾಗುವುದಲ್ಲದೆ, ಹಳೆಯ ಸಂಪರ್ಕಗಳನ್ನು ಸಹ ಕಳೆದುಕೊಳ್ಳುತ್ತೇವೆ.
ಒಂದು ಕಾಲದಲ್ಲಿ ಸ್ನೇಹವನ್ನು ಬೆಳೆಸುತ್ತಿದ್ದ ಧಾರ್ಮಿಕ ಕೂಟಗಳು, ಕ್ಲಬ್‌ಗಳು, ಕ್ರೀಡೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಇಂದು ಕ್ಷೀಣಿಸುತ್ತಿವೆ. ನಾವು ಸಾಮಾಜಿಕ ಜಾಲತಾಣ, ಕುಟುಂಬದ ಜವಾಬ್ದಾರಿಗಳು ಮತ್ತು ಸಾಕುಪ್ರಾಣಿಗಳಿಗೆ ಮಾತ್ರ ಸೀಮಿತರಾಗಿದ್ದೇವೆ. ಹೌದು, ಕೆಲವರಂತೂ ತಮ್ಮ ಸ್ನೇಹಿತರನ್ನು ಸಹ ಭೇಟಿಯಾಗುವುದಿಲ್ಲ ಏಕೆಂದರೆ ತಮ್ಮ ಸಾಕುಪ್ರಾಣಿಗಳನ್ನು ಒಂಟಿಯಾಗಿ ಬಿಡಲು ಸಾಧ್ಯವಿಲ್ಲ ಎಂಬ ಭಾವನೆ.
ಅಂದಹಾಗೆ, ಇಂದು, ಸ್ನೇಹವು ದೈನಂದಿನ ಜೀವನದ ಒಂದು ಭಾಗವಲ್ಲ, ಅದು ಇತರ ಜವಾಬ್ದಾರಿಗಳನ್ನು ಪೂರೈಸಿದಾಗ ಮಾತ್ರ ಸಂಭವಿಸುವ ಒಂದು ಪವಿತ್ರ ಬಂಧ. ಆದರೂ, ಪ್ರಸ್ತುತ ಸಂಶೋಧನೆಯು ಸ್ನೇಹದ ಮಹತ್ವವನ್ನು ಒತ್ತಿಹೇಳುತ್ತದೆ. ಬೋನಿ ವೇರ್ ಅವರ "ದಿ ಟಾಪ್ ಫೈವ್ ರಿಗ್ರೆಟ್ಸ್ ಆಫ್ ದಿ ಡೈಯಿಂಗ್" ಪುಸ್ತಕದಲ್ಲಿ, ಒಂದು ಹೃದಯಸ್ಪರ್ಶಿ ವಿಷಾದವು ಎದ್ದು ಕಾಣುತ್ತದೆ. ಅದೇನೆಂದರೆ ನಾನು ನನ್ನ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತೇನೆ ಎಂಬ ಮಾತು. ಅದೇ ರೀತಿ ನಿಮ್ಮ ಹೇಳಿಕೆ ಆಗಬಾರದೆಂದರೆ, ನಿಮ್ಮ ಸ್ನೇಹವನ್ನು ಉಳಿಸಿಕೊಳ್ಳುವ ಕೆಲಸ ಮಾಡಿ.
* ಸಾಮಾಜಿಕವಾಗಿ ಪ್ರತ್ಯೇಕವಾಗಿರುವುದು ಹೃದ್ರೋಗ, ಬುದ್ಧಿಮಾಂದ್ಯತೆ ಮತ್ತು ಮರಣದ ಅಪಾಯವನ್ನು ಹೆಚ್ಚಿಸುತ್ತದೆ.
* ಇದು ದಿನಕ್ಕೆ 15 ಸಿಗರೇಟ್ ಸೇದುವಷ್ಟೇ ಹಾನಿಕಾರಕ.
* ಸ್ನೇಹವು ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಸುಧಾರಿಸುತ್ತದೆ.
* ಹಾರ್ವರ್ಡ್‌ನ 80 ವರ್ಷಗಳ ಅಧ್ಯಯನವು ಜೀವನದಲ್ಲಿ ಸಂತೋಷ ಮತ್ತು ಆರೋಗ್ಯದ ಶ್ರೇಷ್ಠ ಮೂಲವೆಂದರೆ ಸಂಪತ್ತು ಅಥವಾ ವೃತ್ತಿಯಲ್ಲ, ಬದಲಾಗಿ ನಿಕಟ ಸಂಬಂಧಗಳು ಎಂಬುದನ್ನು ಕಂಡುಹಿಡಿದಿದೆ.
ಕೊನೆಯ ಮಾತು ಏನೆಂದರೆ, ನಿಜವಾದ ಸ್ನೇಹವು ಹೂಡಿಕೆಯಂತೆ. ಹೀಗಾಗಿ ಸಾಧ್ಯವಾದರೆ, ಕ್ಷಮಿಸಿ, ಕರೆ ಮಾಡಿ, ನೆನಪುಗಳನ್ನು ಮಾಡಿಕೊಳ್ಳಿ ಮತ್ತು ಒಟ್ಟಿಗೆ ಸಮಯ ಕಳೆಯಿರಿ. ಸ್ನೇಹವನ್ನು ಪಾಲಿಸಿ, ಸಮಯವನ್ನು ಮೀಸಲಿಡಿ ಮತ್ತು ಅರ್ಥಪೂರ್ಣ ಸಂಬಂಧಗಳಿಂದ ನಿಮ್ಮ ಜೀವನವನ್ನು ಶ್ರೀಮಂತಗೊಳಿಸಿ.