ನ್ಯೂಸ್

ಮೇ10ಕ್ಕೆ ಕೇದಾರನಾಥ ಬಾಗಿಲು ಓಪನ್; ಊಖಿಮಠದಿಂದ ಹಿಮಗಿರಿಗೆ ಬರುವ ಉತ್ಸವ ಮೂರ್ತಿ

ಊಖಿಮಠ: ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಪ್ರಸಿದ್ಧವಾದ ಕೇದಾರನಾಥ ದೇವಾಲಯದ ಬಾಗಿಲು ಇದೇ ಮೇ.10ಕ್ಕೆ ತೆರೆಯಲಿದೆ. ಚಳಿಗಾಲದಲ್ಲಿ ಅತಿಯಾದ ಹಿಮ ಬೀಳುವುದರಿಂದ 6 ತಿಂಗಳು ಮಾತ್ರ ದೇವಾಲಯ ತೆರೆದಿರುತ್ತದೆ. ಇನ್ನಾರು ತಿಂಗಳು ಕೇದಾರನಾಥನ ಉತ್ಸವ ಮೂರ್ತಿಗೆ ಹಿಮಗಿರಿಯ ತಪ್ಪಲಲ್ಲಿರುವ ಊಖಿಮಠದಲ್ಲಿ ಪೂಜೆ ನಡೆಯುತ್ತದೆ.

ಪಂಚ ಕೇದಾರಗಳ ಪೂಜಾರಿಗಳ ನೇಮಕ, ಕೇದಾರನಾಥ ಬಾಗಿಲು ತೆರೆಯುವ ಮತ್ತು ಮುಚ್ಚುವ ಧಾರ್ಮಿಕ ಅಧಿಕಾರ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ಹಿಮವದ್ಕೇದಾರ ವೈರಾಗ್ಯ ಸಿಂಹಾಸನ ಪೀಠದ ಜಗದ್ಗುರುಗಳಿಗೆ ಇರುತ್ತದೆ. ಆದ್ದರಿಂದ ಊಖಿಮಠ ಎಂದೇ ಪ್ರಸಿದ್ಧವಾಗಿರುವ ಕೇದಾರ ಪೀಠದ ಜಗದ್ಗುರುಗಳನ್ನು ರಾವಲ್ ಎಂದು ಕರೆಯುತ್ತಾರೆ.

ಮೇ.5 ರಂದು ಸಂಜೆ ಊಖಿಮಠದಲ್ಲಿರುವ ಗದ್ದಿಸ್ಥಾನದಲ್ಲಿ ಭೈರವನಾಥನ ಪೂಜೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗುತ್ತವೆ. ಮೇ.6 ರಂದು ಬೆಳಗ್ಗೆ 8.30ಕ್ಕೆ ಕೇದಾರನಾಥನ ಉತ್ಸವ ಮೂರ್ತಿಯ ಪಲ್ಲಕ್ಕಿ ಪ್ರಸ್ಥಾನಗೊಳ್ಳುತ್ತದೆ. ಸಕಲ ಮಿಲಿಟರಿ ಬ್ಯಾಂಡ್ ಸಹಿತವಾಗಿ ಆರಂಭವಾಗುವ ಪಾದಯಾತ್ರೆಯು ಮೊದಲನೇ ದಿನ ಗುಪ್ತಕಾಶಿಯಲ್ಲಿ ಉಳಿಯಲಿದೆ. ಮೇ 7ಕ್ಕೆ ಪಾಠಾದಲ್ಲಿ ತಂಗಿ, ಮೇ.8ಕ್ಕೆ ಗೌರಕುಂಡದಲ್ಲಿ ವಸತಿ ಮಾಡಿ ಮೇ.9ಕ್ಕೆ ಕೇದಾರನಾಥ ಧಾಮವನ್ನು ತಲುಪಲಿದೆ. ಮೇ.10ರ ಅಕ್ಷಯ ತೃತೀಯದ ಶುಭ ಮುಹೂರ್ತದಲ್ಲಿ ಕೇದಾರ ಜಗದ್ಗುರು ರಾವಲ್ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಅಮೃತಹಸ್ತದಿಂದ ಕೇದಾರನಾಥನ ಬಾಗಿಲು ತೆರೆಯಲಾಗುತ್ತದೆ. ಈ ಬಾರಿ ಕೇದಾರನಾಥನ ಪ್ರಧಾನ ಅರ್ಚಕರಾಗಿ ಶಿವಶಂಕರಲಿಂಗ ಅವರು ನೇಮಕಗೊಂಡಿದ್ದು, ಊಖಿಮಠದಲ್ಲಿರುವ ಓಂಕಾರೇಶ್ವರ ಮಂದಿರದ ಪ್ರಧಾನ ಅರ್ಚಕರಾಗಿ ವಾಗೀಶಲಿಂಗ ಅವರು ನೇಮಕಗೊಂಡಿದ್ದಾರೆ.