ನ್ಯೂಸ್

ಕಾರಿನಲ್ಲಿತ್ತು 30 ಲಕ್ಷ ರೂ. ನಿಷೇಧಿತ ನೋಟು, ಇನ್ನು 70 ಲಕ್ಷಕ್ಕಾಗಿ ಹುಡುಕಾಟ

ಬೆಂಗಳೂರು: ದೇಶದಲ್ಲಿ 1 ಸಾವಿರ ರೂ. ಮತ್ತು 500 ರೂ. ಮುಖಬೆಲೆಯ ನೋಟು ಬ್ಯಾನ್​ ಆಗಿ ಮೂರು ವರ್ಷ ಕಳೆದಿದೆ. ಆದರೀಗ ನಿಷೇಧಿತ 1 ಸಾವಿರ ರೂ. ಮುಖಬೆಲೆಯ ನೋಟುಗಳು ರಾಜ್ಯ ರಾಜಧಾನಿಯಲ್ಲಿ ಸದ್ದು ಮಾಡುತ್ತಿವೆ.

ಜಾಲಹಳ್ಳಿ ಎಚ್​ಎಂಟಿ ಸವಿರ್ಸ್​ ರಸ್ತೆಯಲ್ಲಿ ಮಾರುತಿ ಸುಜುಕಿ ಕಾರಿನಲ್ಲಿದ್ದ ಒಂದು ಸಾವಿರ ಮುಖಬೆಲೆಯ 30 ಲಕ್ಷ ರೂ. ಹಳೆಯ ನೋಟನ್ನು ಜಾಲಹಳ್ಳಿ ಪೊಲೀಸರು ಜಪ್ತಿ ಮಾಡಿದ್ದು, ಮೂವರನ್ನು ಬಂಧಿಸಿದ್ದಾರೆ.

ಜು. 28ರ ಮಧ್ಯಾಹ್ನ 12.30ರ ಸುಮಾರಿನಲ್ಲಿ 1 ಸಾವಿರ ರೂ. ಮುಖಬೆಲೆಯ 30 ಲಕ್ಷ ರೂಪಾಯಿ ನೋಟುಗಳೊಂದಿಗೆ ಮೂವರು ಮಾರುತಿ ಸುಜುಕಿ ಕಾರಿನಲ್ಲಿದ್ದರು. ಈ ವೇಳೆ ದಾಳಿ ಮಾಡಿದ ಪೊಲೀಸರು ನಿಷೇಧಿತ 30 ಲಕ್ಷ ರೂ. ನೋಟುಗಳನ್ನು ವಶಕ್ಕೆ ಪಡೆದು ಕಾರಿನಲ್ಲಿದ್ದ ಮಾಗಡಿ ರಸ್ತೆ ಕೆ.ಪಿ.ಅಗ್ರಹಾರ ನಿವಾಸಿ ಕಿರಣ್​ಕುಮಾರ್​ (31), ನಾಗರಬಾವಿಯ ಪ್ರವಿಣ್​ಕುಮಾರ್​ (29) ಮತ್ತು ಕಾಮಾಕ್ಷಿಪಾಳ್ಯದ ಪವನ್​ಕುಮಾರ್​ (24) ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ, ಮಾಗಡಿ ರಸ್ತೆಯ ಮಾಳಗಾಳದ ಹನುಮಂತೇ ಗೌಡ ಮತ್ತು ವಿಜಯನಗರದ ರಾಜಶೇಖರ್​ ಎಂಬುವರು ನಮಗೆ ನಿಷೇಧಿತ ನೋಟುಗಳನ್ನು ಚಲಾವಣೆಗೆಂದು ಕೊಟ್ಟಿದ್ದರು. ಜನರ ಕಡೆಯಿಂದ ಶೇ.10 ರಂತೆ ಹೊಸ ನೋಟು ಪಡೆದು ಅವರಿಗೆ ಹಳೇ ನೋಟು ಮಾರಾಟ ಮಾಡಲು ಅವರೇ ಸೂಚಿಸಿದ್ದರು. ಅದರಂತೆ ಹಳೇ ನೋಟು ಚಲಾವಣೆಗೆ ಬಂದಿದ್ದೆವು ಎಂದು ಒಪ್ಪಿಕೊಂಡಿದ್ದಾರೆ.