ಪಾಟ್ನಾ: ಬಿಹಾರದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದಿದೆ. ಮೂರನೇ ಬಾರಿಗೆ ಈ ಸೇತುವೆ ಕುಸಿದಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಅಗರ್ವಾರಿ ಸುಲ್ತಂಗಂಜ್ ಗಂಗಾ ಎಂಬ ಹೆಸರಿನ ಈ ಸೇತುವೆಯ ಒಂದು ಭಾಗವು ಗಂಗಾ ನದಿಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಸೇತುವೆ ಕುಸಿಯುತ್ತಿರುವಾಗ ಅಲ್ಲಿದ್ದ ಸ್ಥಳೀಯ ಜನರು ದೃಶ್ಯಗಳನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದಾರೆ.
ಇದೀಗ ಆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಬಿರುಗಾಳಿಯಿಂದಾಗಿ ಸೇತುವೆಯ ಪಿಲ್ಲರ್‌ಗಳು ಕುಸಿದು ಬಿದ್ದಿದ್ದವು. ಆದರೆ ಅಧಿಕಾರಿಗಳು ಸೇತುವೆ ಪುನರ್‌ನಿರ್ಮಾಣಕ್ಕೆ ಮುಂದಾಗಿದ್ದು ಮತ್ತೆ ಮೂರನೇ ಬಾರಿಗೆ ಸೇತುವೆ ಕುಸಿದುಬಿದ್ದಿದೆ.
ಈ ಸೇತುವೆ ನಿರ್ಮಾಣಕ್ಕಾಗಿ ಬಿಹಾರ ಸರ್ಕಾರದಿಂದ 1,717 ಕೋಟಿ ರೂ. ಮೀಸಲಿಡಲಾಗಿದೆ. 2015 ರಲ್ಲಿ ಈ ಸೇತುವೆಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು, 2020 ರ ವೇಳೆಗೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಅದು ಇನ್ನೂ ಪೂರ್ಣಗೊಂಡಿಲ್ಲ. ಒಂದೇ ಸೇತುವೆಯು ಪೂರ್ಣಗೊಳ್ಳುವ ಮೊದಲು ಮೂರು ಬಾರಿ ಕುಸಿದಿರುವುದರಿಂದ, ನಿರ್ಮಾಣದ ಗುಣಮಟ್ಟ ಮತ್ತು ಯೋಜನೆಯ ವ್ಯವಸ್ಥೆಯು ಹೆಚ್ಚು ಟೀಕೆಗೆ ಒಳಗಾಗಿದೆ.
ನಿರ್ಮಾಣ ಹಂತದಲ್ಲಿರುವ ಸೇತುವೆಯ ಕಂಬಗಳು ಕುಸಿದ ನಂತರ ಪ್ರತಿಪಕ್ಷಗಳು ನಿತೀಶ್ ಕುಮಾರ್ ಸರ್ಕಾರವನ್ನು ಟೀಕಿಸುತ್ತಿವೆ. ಇದಕ್ಕೆ ಸ್ಪಂದಿಸಿದ ಸರ್ಕಾರ ಎಸ್. ಕೆ. ಸಿಂಗ್ಲಾ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಗೆ ದಂಡ ವಿಧಿಸಲಾಗಿದೆ. ಸ್ವಂತ ಖರ್ಚಿನಲ್ಲಿ ಸೇತುವೆಯನ್ನು ಪುನರ್ ನಿರ್ಮಿಸಲು ಆದೇಶ ನೀಡಲಾಗಿತ್ತು.