ಪ್ರಶಾಂತ ರಿಪ್ಪನ್‌ಪೇಟೆ ಬೆಂಗಳೂರು: ಒಂದೆಡೆ ಅರಮನೆ ದಸರಾವು ಸಾಂಸ್ಕೃತಿಕ, ಚಾರಿತ್ರಿಕ ಹಿನ್ನೆಲೆಯನ್ನು ಸಾರಿದರೆ; ಮತ್ತೊಂದೆಡೆ ಗುರುಮನೆ ದಸರಾವು ನಾಡಿನ ಸುದೀರ್ಘ ಧಾರ್ಮಿಕ ಪರಂಪರೆಯ ಪ್ರತೀಕವಾಗಿದೆ. ಶ್ರೀರಂಭಾಪುರಿ ಜಗದ್ಗುರಗಳ 33ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು ಅ.3ರಿಂದ ಹತ್ತು ದಿನಗಳ ಕಾಲ ಗದಗ ಜಿಲ್ಲೆಯ ಅಬ್ಬಿಗೇರಿಯಲ್ಲಿ ನಡೆಯಲಿದೆ.
ನವರಾತ್ರಿ ಎಂದರೆ ದುಷ್ಟರನ್ನು ಸಂಹರಿಸಿದ ಆದಿಶಕ್ತಿಯ ಆರಾಧನೆಗೆ ಮೀಸಲಾದ ಕಾಲ. ಧರ್ಮಪೀಠಗಳು ಅಧರ್ಮದ ನಾಶಕ್ಕಾಗಿ ಸಂಕಲ್ಪ ಮಾಡಿ ಧರ್ಮ ಪ್ರಚಾರವನ್ನು ಕೈಗೊಳ್ಳುವ ಪರ್ವಕಾಲ. ಈ ಹಿನ್ನೆಲೆಯಲ್ಲಿ ನಾಡಿನ ವಿವಿಧ ಮಠ-ಪೀಠಗಳು ಶರನ್ನವರಾತ್ರಿಯನ್ನು ವಿಶೇಷವಾಗಿ ಆಚರಿಸುತ್ತವೆ. ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ 1008 ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಶ್ರೀ ಪೀಠದ ಪೂರ್ವಾಚಾರ್ಯರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ದಸರಾ ಧರ್ಮ ಸಮ್ಮೇಳನವನ್ನು ನಾಡಹಬ್ಬದ ಸ್ವರೂಪದಲ್ಲಿ ವಿಸ್ತರಿಸಿದ್ದಾರೆ. ಪ್ರತಿವರ್ಷ ನಾಡಿನ ಬೇರೆ ಬೇರೆ ಭಾಗದಲ್ಲಿ ಆಚರಿಸುವ ಮೂಲಕ ಜಾತಿ, ಮತ, ಪಂಥಗಳ ಎಲ್ಲೆಯನ್ನು ಮೀರಿ ಸರ್ವಧರ್ಮೀಯರ ಸಾರ್ವತ್ರಿಕ ಉತ್ಸವವನ್ನಾಗಿ ಮಾರ್ಪಡಿಸಿದ್ದಾರೆ.
ಸನಾತನ ವೀರಶೈವ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಮಹಾಪೀಠವು ಶ್ರೀಜಗದ್ಗುರು ರೇಣುಕಾಚಾರ್ಯರಿಂದ ಸಂಸ್ಥಾಪಿತಗೊಂಡು 120 ಪೀಠಾಧೀಶರನ್ನು ಕಂಡಿದೆ. ಪೀಠದ ಪರಿಸರದಲ್ಲಿ ಆಚರಣೆಗೊಳ್ಳುತ್ತಿದ್ದ ದಸರಾ ಮಹೋತ್ಸವವು ಮೈಸೂರು ಮಹಾರಾಜರ ಬಿನ್ನಹದ ಮೇರೆಗೆ 118ನೇ ಜಗದ್ಗುರು ಶ್ರೀಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಕಾಲಘಟ್ಟದಲ್ಲಿ ಪೀಠದ ಹೊರಾಂಗಣಕ್ಕೆ ಸ್ಥಳಾಂತರಗೊಂಡಿತು. ನಂತರ 119ನೇ ಲಿಂ.ವೀರಗಂಗಾಧರ ಜಗದ್ಗುರುಗಳ ಕಾಲದಲ್ಲಿ ದಸರಾ ದರ್ಬಾರದ ವ್ಯಾಖ್ಯಾನವನ್ನು ವೈಭವೀಕರಿಸಿದರು. 120ನೇ ಲಿಂ.ವೀರರುದ್ರಮುನಿ ಜಗದ್ಗುರುಗಳು ದಸರಾ ಮಹೋತ್ಸವದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದರು. ಪ್ರಸ್ತುತ ಶ್ರೀರಂಭಾಪುರಿ ಜಗದ್ಗುರುಗಳು ಧಾರ್ಮಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ದಸರಾ ಮಹೋತ್ಸದ ಖ್ಯಾತಿಯನ್ನು ಹೆಚ್ಚಿಸಿದ್ದು, ಎರಡು ಮೂರು ವರ್ಷಗಳ ಮೊದಲೇ ಮುಂದಿನ ಸಮ್ಮೇಳನದ ಸ್ಥಳ ನಿಗದಿಯಾಗುವಷ್ಟರ ಮಟ್ಟಿಗೆ ಸಮ್ಮೇಳನದ ಜನಪ್ರಿಯತೆ ಹೆಚ್ಚಿಸಿದ್ದಾರೆ.
ನಾಡಿನ ಮುದ್ರಣ ಕಾಶಿ ಎಂಬ ಹೆಗ್ಗಳಿಕೆ ಹೊಂದಿರುವ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯ ಶ್ರೀ ಅನ್ನದಾನೇಶ್ವರ ಪೌಢಶಾಲೆಯ ಆವರಣದಲ್ಲಿ 2024ನೇ ಸಾಲಿನ ಶ್ರೀರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಆಯೋಜಿಸಲಾಗಿದೆ.
ಉತ್ತರ ಕರ್ನಾಟಕದಲ್ಲಿ ಪ್ರಥಮ ಸಂಸ್ಕೃತ ಪಾಠಶಾಲೆ ಸ್ಥಾಪಿಸಿದ ಕೀರ್ತಿ ಶ್ರೀರಂಭಾಪುರಿ ಶಾಖಾ ಅಬ್ಬಿಗೇರಿ ಹಿರೇಮಠಕ್ಕಿದೆ. ಶ್ರೀರಂಭಾಪುರಿ ಪೀಠದ ನವನಿರ್ಮಾಣ ಶಿಲ್ಪ ಶ್ರೀಶಿವಾನಂದ ಜಗದ್ಗುರುಗಳು ಅಬ್ಬಿಗೇರಿ ಮಠದಲ್ಲಿ ಸಂಸ್ಕೃತಾಭ್ಯಾಸ ಮಾಡಿದ್ದರು. 1901ರಲ್ಲೇ ಸಂಸ್ಕೃತ ಪಾಠಶಾಲೆಯನ್ನು ತೆರೆದಿದ್ದ ಅಂದಿನ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮಿಗಳು ಬಹುದೊಡ್ಡ ಸಂಸ್ಕೃತ ಪಂಡಿತರು ಹಾಗೂ ಸಪ್ತಭಾಷಾ ಪ್ರವೀಣರಾಗಿದ್ದರು.
ಕಾಶಿಯಲ್ಲಿ ಅಧ್ಯಯನ ಮಾಡಿದ್ದ ಪೂಜ್ಯರಿಗೆ ಮೈಸೂರಿನ ಖ್ಯಾತ ವಿದ್ವಾಂಸರಾಗಿದ್ದ ಪಂಡಿತ ಕಾಶೀನಾಥ ಶಾಸಿಗಳು, ಗದಗ ಪಂಚಾಂಗ ಕರ್ತೃಗಳಾಗಿದ್ದ ಪಂಡಿತ ಬಸಯ್ಯ ಶಾಸಿಗಳು, ಸಿಂಧಗಿ ಪಟ್ಟಾಧ್ಯಕ್ಷರು ಮತ್ತು ಅನೇಕ ಪಂಡಿತರು ಶಿಷ್ಯರಾಗಿದ್ದರು. ಅಬ್ಬಿಗೇರಿ ಹಿರೇಮಠದ ಸಂಸ್ಕೃತ ಪಾಠಶಾಲೆಗೆ ಆ ಕಾಲದಲ್ಲಿ ಮುಂಬೈ ಸರ್ಕಾರದ ಅನುದಾನ ದೊರೆಯುತ್ತಿತ್ತು. ಇಂತಹ ಸುದೀರ್ಘ ಧಾರ್ಮಿಕ ಪರಂಪರೆಯಿರುವ ಅಬ್ಬಿಗೇರಿಯಲ್ಲಿ ಈ ಬಾರಿ ದಸರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮತ್ತು ಅಧ್ಯಾತ್ಮದ ಅರಿವು ಅವಶ್ಯಕ. ಭೌತಿಕ ಸಂಪತ್ತು ಅಳಿದರೂ ಅಧ್ಯಾತ್ಮ ಸಂಪತ್ತು ಶಾಶ್ವತ. ಈ ಅಂತಿಮ ಸತ್ಯದ ಅರಿವುಳ್ಳ ಪ್ರಸ್ತುತ ಜಗದ್ಗುರುಗಳು ಆಧ್ಯಾತ್ಮದ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಸಂವರ್ಧನೆ ಆ ಮೂಲಕ ಸರ್ವರಿಗೂ ಶಾಂತಿ ಸಮೃದ್ಧಿಯನ್ನು ಸಾರುವ ಉದಾತ್ತ ಸಂದೇಶವನ್ನು ತಮ್ಮ ಪ್ರತಿ ಕಾರ್ಯಕ್ರಮದ ಮೂಲಕ ಅನಾವರಣಗೊಳಿಸುತ್ತಿದ್ದಾರೆ.
ದಸರಾ ಸಮ್ಮೇಳನದ 10 ದಿನಗಳೂ ಧರ್ಮ-ಸಂಸ್ಕಾರವನ್ನು ಉದ್ದೀಪನಗೊಳಿಸುವ ಉಪದೇಶಾಮೃತಗಳು, ತಜ್ಞರ ಉಪನ್ಯಾಸ, ಸಾಹಿತ್ಯವನ್ನು ಉತ್ತೇಜಿಸುವ ಕೃತಿಗಳ ಲೋಕಾರ್ಪಣೆ, ಸಂಗೀತ, ನೃತ್ಯ, ಜನಪದ ಕಲೆಯನ್ನು ಪ್ರೋತ್ಸಾಹಿಸುವ ಪ್ರದರ್ಶನಗಳು ಅನಾವರಣಗೊಳ್ಳಲಿವೆ.
ಜೊತೆಗೆ ಸಮಾಜದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಸಾಧಕರನ್ನು ಗುರುತಿಸಿ ಪ್ರತಿವರ್ಷ ಪ್ರಶಸ್ತಿ ನೀಡಲಾಗುತ್ತದೆ. ಅಂತೆಯೇ ಎಡೆಯೂರು, ಸವದತ್ತಿ ಶ್ರೀಗಳು ಸೇರಿದಂತೆ ವಿವಿಧ ಸಾಧಕರಿಗೆ ಶಿವಾಚಾರ್ಯ ರತ್ನ, ಸಾಧನಾ ಸಿರಿ, ಸಾಹಿತ್ಯ ಸಿರಿ, ವೀರಶೈವ ಸಿರಿ ಮತ್ತು ಶ್ರೀರಂಭಾಪುರಿ ಯುವಸಿರಿ ಪ್ರಶಸ್ತಿಗಳನ್ನು ಸಮಾರಂಭದಲ್ಲಿ ನೀಡಿ ಗೌರವಿಸಲಾಗುತ್ತದೆ.
ಆಶ್ವೀಜ ಶುದ್ಧ ಪ್ರತಿಪದೆ ಅ.3ರಿಂದ ಆಶ್ವೀಜ ಶುದ್ಧ ದಶಮಿ ಅ.12ರವರೆಗೆ ಹತ್ತು ದಿನಗಳ ಕಾಲ ದಸರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಬೆಳಗ್ಗೆ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಸಂಜೆ ಧರ್ಮ ಸಮ್ಮೇಳನ, ಸಭೆಯ ನಂತರ ಪೀಠದ ಪರಂಪರೆಯಂತೆ ನಜರ್ ಸಮರ್ಪಣೆ ನಡೆಯಲಿದೆ.
ಅ.12ರಂದು ವಿಶೇಷವಾಗಿ ಸ್ವತಃ ಜಗದ್ಗುರುಗಳು ಅಗ್ರೋದಕವನ್ನು ತಂದು ಮಹಾಪೂಜೆ ನಡೆಸಲಿದ್ದಾರೆ. ಅದೇ ದಿನ ಸಂಜೆ ಶ್ರೀರಂಭಾಪುರಿ ಜಗದ್ಗುರುಗಳ ಬೆಳ್ಳಿಪಲ್ಲಕ್ಕಿ ಮಹೋತ್ಸವ ನಡೆಯಲಿದ್ದು, ನಂತರ ಶಮೀಪೂಜೆಯೊಂದಿಗೆ ಸೀಮೋಲ್ಲಂಘನೆ ಮೂಲಕ ಶ್ರೀರಂಭಾಪುರಿ ಜಗದ್ಗುರುಗಳು ವೀರಸಿಂಹಾಸನಾರೋಹಣ ಮಾಡಿ ನಾಡಿಗೆ ದಸರಾ ಧರ್ಮ ಸಂದೇಶವನ್ನು ನೀಡಲಿದ್ದಾರೆ.