| ಕೀರ್ತಿನಾರಾಯಣ ಸಿ. ಬೆಂಗಳೂರು
ರಾಜ್ಯದ ಕರಾವಳಿ, ಮಲೆನಾಡ ದಟ್ಟಾರಣ್ಯಗಳಲ್ಲಿ ಉಪಗ್ರಹ ಆಧಾರಿತ ಫೋನ್ ಆಗೀಗ ರಿಂಗಣಿಸುತ್ತಿರುವ ಆತಂಕದ ನಡುವೆಯೇ ಉಗ್ರರು ಮತ್ತಷ್ಟು ಹೈಟೆಕ್ ಆಗಿದ್ದಾರೆ. ಉಗ್ರ ಚಟುವಟಿಕೆ ಮಾಹಿತಿ ವಿನಿಮಯಕ್ಕೆ ಸ್ಯಾಟಲೈಟ್ ಫೋನ್ ಬಳಸುತ್ತಿದ್ದ ಭಯೋತ್ಪಾದಕರು ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಪೊಲೀಸರಿಗೂ ಸುಳಿವು ಸಿಗದಂತಹ ವಿಓಐಪಿ (ವಾಯ್್ಸ ಓವರ್ ಇಂಟರ್ನೆಟ್ ಪ್ರೋಟೋಕಾಲ್) ತಂತ್ರಜ್ಞಾನ ಬಳಸಿಕೊಂಡು ಪರಸ್ಪರ ಸಂವಹನ ನಡೆಸುತ್ತಿರುವ ವಿಚಾರ ಬಯಲಾಗಿದೆ.
ಸುಳಿವು ಕಷ್ಟ ಏಕೆ?: ನಕಲಿ ಸಿಮ್ಾರ್ಡ್ ಹಾಗೂ ಚೀನಾ ನಿರ್ವಿುತ ವಸ್ತುಗಳನ್ನು ಬಳಸಿಕೊಂಡು ವಿಓಐಪಿ ವ್ಯವಸ್ಥೆಯಡಿ ವಿದೇಶಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿಕೊಂಡು ಸಂವಹನ ನಡೆಸಲಾಗುತ್ತಿದೆ. ದೇಶದ ಯಾವುದೇ ಭಾಗದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆಯಾದರೆ ಅದರ ಸಿಗ್ನಲ್ ಆಧರಿಸಿ ಎಲ್ಲಿ ಬಳಕೆಯಾಗಿದೆ ಎಂದು ಕೇಂದ್ರ ಗುಪ್ತದಳದ ‘ಅಶೋಕ’ ಸಾಫ್ಟ್ವೇರ್ ಮೂಲಕ ಪತ್ತೆಹಚ್ಚಬಹುದು. ಆದರೆ, ವಿಓಐಪಿ ಕರೆಗಳ ಜಾಡು ಪತ್ತೆಹಚ್ಚಲು ಸಾಧ್ಯವಿಲ್ಲ. ಎಲ್ಲಿಂದ, ಯಾರು, ಯಾರಿಗೆ ಕರೆ ಮಾಡಿದ್ದಾರೆ ಎಂಬ ವಿಚಾರ ಗುಪ್ತದಳ ಅಧಿಕಾರಿಗಳಿಗೆ ಗೊತ್ತಾಗುವುದೇ ಇಲ್ಲ. ಕೆಲ ವರ್ಷಗಳಿಂದಲೇ ವಿಓಐಪಿ ತಂತ್ರಜ್ಞಾನ ಬಳಕೆಯಾಗುತ್ತಿದೆಯಾದರೂ ಇತ್ತೀಚೆಗೆ ಭಯೋತ್ಪಾದಕರು ಉಪಯೋಗಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ.
ಹೊಸ ನೀತಿ ಅಗತ್ಯ: ರಾಜ್ಯ ಗುಪ್ತದಳ, ಆಂತರಿಕ ಭದ್ರತಾ ವಿಭಾಗ , ಮಿಲಿಟರಿ ಇಂಟಲಿಜೆನ್ಸ್ ವಿಭಾಗದ ಮಾಹಿತಿ ಆಧರಿಸಿ ಬೆಂಗಳೂರು, ಮೈಸೂರಿನಲ್ಲಿ ನಾಲ್ಕು ಪ್ರಕರಣ ಬಯಲಿಗೆಳೆಯಲಾಗಿದೆ. ಹೈದರಾಬಾದ್, ಮುಂಬೈ ಸೇರಿ ಇತರ ಕೆಲ ರಾಜ್ಯಗಳಲ್ಲಿ ಅಕ್ರಮವಾಗಿ ವಿಓಐಪಿ ಬಳಸುತ್ತಿದ್ದ ಜಾಲಗಳನ್ನು ಪತ್ತೆಹಚ್ಚಿ, ಆರೋಪಿಗಳನ್ನು ಬಂಧಿಸಲಾಗಿದೆ.
ನಿಯಮಬಾಹಿರವಾಗಿ ಬಳಕೆಯಾಗುತ್ತಿರುವ ವಿಓಐಪಿ ವ್ಯವಸ್ಥೆ ದೇಶದ ಭದ್ರತೆಗೆ ಮಾರಕವಾಗಿದ್ದು, ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಆದಷ್ಟು ಬೇಗ ಹೊಸ ನೀತಿ ತರಬೇಕು ಎಂದು ಗುಪ್ತದಳದ ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
60 ಸೆಕೆಂಡ್ ಯಾರೂ ಮಾತಾಡಿಲ್ಲ!: ಸೆಪ್ಟಂಬರ್ನಲ್ಲಿ ಮಂಗಳೂರು, ಭಟ್ಕಳ, ಉಡುಪಿ, ಕಾರವಾರ ಸೇರಿದಂತೆ ರಾಜ್ಯದಲ್ಲಿ 28 ಸ್ಯಾಟಲೈಟ್ ಕರೆಗಳನ್ನು ಮಾಡಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಪರಿಶೀಲನೆ ನಡೆಸಿದಾಗ ಈ 28 ಕರೆಗಳ ಪೈಕಿ 26 ಕರೆಗಳು ಭೂ ಭಾಗದಲ್ಲಿ ಹಾಗೂ 2 ಕರೆಗಳು ಸಮುದ್ರ ಭಾಗದಲ್ಲಿ ಬಳಕೆಯಾಗಿರುವುದು ಗೊತ್ತಾಗಿದೆ. ಯಾವ ಕರೆಯೂ 50 ರಿಂದ 60 ಸೆಕೆಂಡ್ಗಳವರೆಗೆ ಮಾತನಾಡಿಯೇ ಇಲ್ಲ ಎಂಬುದು ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಗುಪ್ತದಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಕ್ಷಣಾ ಮಾಹಿತಿಗೆ ಪಾಕ್ನಿಂದ ಕರೆ: 2020 ಮೇನಲ್ಲಿ ಮುಂಬೈ ಹಾಗೂ ಮಿಲಿಟರಿ ಇಂಟಲಿಜೆನ್ಸ್ ಅಧಿಕಾರಿಗಳು ವಿಓಐಪಿ ಜಾಲವನ್ನು ಭೇದಿಸಿದ್ದರು. ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಸೇನಾಧಿಕಾರಿಯ ಹೆಸರಲ್ಲಿ ಕರೆ ಮಾಡಿ ಮಿಲಿಟರಿ ಮಾಹಿತಿ ಸಂಗ್ರಹಿಸುತ್ತಿದ್ದ ವಿಚಾರ ಬಯಲಾಗಿತ್ತು. ಪಾಕಿಸ್ತಾನದ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಡಿಸಿ ಮಾತನಾಡಲಾಗುತ್ತಿತ್ತು. ದೇಶದ ಇತರೆಡೆಯೂ ಈ ಜಾಲ ವಿಸ್ತರಿಸಿರುವ ಬಗ್ಗೆ ಆಗ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು.
ಬೆಂಗ್ಳೂರಲ್ಲಿ 9 ಕಡೆ ತಂತ್ರಜ್ಞಾನ: ಇತ್ತೀಚೆಗೆ ಬೆಂಗಳೂರಲ್ಲಿ ಸಕ್ರಿಯವಾಗಿದ್ದ ಗ್ಯಾಂಗ್ ಸಿಸಿಬಿಯ ಭಯೋತ್ಪಾದನ ನಿಗ್ರಹ ದಳದ ಬಲೆಗೆ ಬಿದ್ದಿತ್ತು. ಬಿಟಿಎಂ ಲೇಔಟ್, ಸದ್ದುಗುಂಟೆ ಪಾಳ್ಯ, ಮಡಿವಾಳದಲ್ಲಿ 9 ಕಡೆ 109 ಸಿಮ್ ಬಾಕ್ಸ್ಗಳನ್ನು ಅಳವಡಿಸಿ, 3000 ಸಿಮ್ ಕಾರ್ಡ್ ಬಳಸಿ ಐಎಸ್ಡಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಧಿತರು ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಸಂಗತಿ ತನಿಖೆಯಲ್ಲಿ ದೃಢಪಟ್ಟಿತ್ತು.
161 ದೇಶಗಳಲ್ಲಿ ಸ್ಯಾಟ್ ಸರ್ವೀಸ್: ಯುಎಇಯ ತುರಾಯಿ ಸಂಸ್ಥೆ 161 ದೇಶಗಳಲ್ಲಿ ಸ್ಯಾಟಲೈಟ್ ಫೋನ್ ಸರ್ವೀಸ್ ನೀಡುತ್ತಿದೆ. 2011ರ ಮುಂಬೈ ದಾಳಿಯ ನಂತರ ಭಾರತದಲ್ಲಿ ಸ್ಯಾಟ್ಫೋನ್ ಬಳಕೆ ನಿಷೇಧಿಸಲಾಗಿದೆ. ದೇಶದಲ್ಲಿ ಸ್ಯಾಟ್ ಫೋನ್ ಬಳಕೆ ಮೇಲೆ ಐಬಿ ಹಾಗೂ ರಾ ನಿರಂತರವಾಗಿ ನಿಗಾ ವಹಿಸಿರುತ್ತವೆ. ಸ್ಯಾಟ್ ಫೋನ್ ಬಳಸಿದರೆ ಸಿಗ್ನಲ್ ಮೂಲಕ ಗೊತ್ತಾಗುತ್ತದೆ. ಕೂಡಲೇ ಸ್ಥಳೀಯ ಗುಪ್ತದಳ ಅಧಿಕಾರಿಗಳಿಗೆ ಅಲರ್ಟ್ ನೀಡಿ, ಅವರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ವರದಿ ನೀಡುತ್ತಾರೆ.
ನಷ್ಟದ್ದೇ ಚಿಂತೆ: ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಇಲ್ಲಿನವರ ಜತೆ ಮಾತನಾಡಲು ಐಎಸ್ಡಿ ಕರೆಗಳನ್ನು ಮಾಡಬೇಕು. ಐಎಸ್ಡಿ ಕರೆಗಳ ದರ ದುಬಾರಿಯಾಗಿರುವುದರಿಂದ ಸ್ಥಳೀಯ ಕರೆಗಳಾಗಿ ಪರಿವರ್ತಿಸಿಕೊಡುವ ಜಾಲವೂ ಸಕ್ರಿಯವಾಗಿದೆ. ಇದರಿಂದ ಸರ್ಕಾರಕ್ಕೆ ಆದಾಯ ನಷ್ಟವಾಗು ತ್ತದೆ. ದೂರಸಂಪರ್ಕ ಇಲಾಖೆ ಆದಾಯ ನಷ್ಟದ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದೆ. ಆದರೆ, ದೇಶದ್ರೋಹಿಗಳಿಂದ ಆಗಬಹುದಾದ ಸಂಭವನೀಯ ದಾಳಿಯ ಬಗ್ಗೆ ಎಚ್ಚರಿಕೆ ನೀಡುತ್ತಿ ದ್ದರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಓಐಪಿ ಬಳಕೆ ಹೇಗೆ?: ನಕಲಿ ಸಿಮ್ ಪಡೆದು ಚೀನಾದ ಕಿಟ್ ಬಳಸಿಕೊಂಡು ಸ್ಥಳೀಯ ಕರೆಗಳನ್ನು ಅಂತಾರಾಷ್ಟ್ರೀಯ ಕರೆಗಳಾಗಿ ಬದಲಿಸಬಹುದು. ಇದರ ಜಾಡು ಯಾರಿಗೂ ತಿಳಿಯುವುದಿಲ್ಲ.
ಸಿಮ್ ಖರೀದಿಸುವಾಗ ಎಚ್ಚರ: ಯಾರದ್ದೋ ಹೆಸರಲ್ಲಿರುವ ಸಿಮ್ಗಳನ್ನು ಉಗ್ರರು ಅಕ್ರಮ ಚಟುವಟಿಕೆಗೆ ಬಳಸಿದ್ದಾರೆ. ರಸ್ತೆ ಬದಿ ಟೆಂಟ್ ಹಾಕಿಕೊಂಡು ಸಿಮ್ ಮಾರುವವರು, ಉಚಿತವಾಗಿ ಸಿಮ್ ಕಾರ್ಡ್ ಕೊಡುತ್ತೇವೆ ಎನ್ನುವವರ ಬಗ್ಗೆ ಎಚ್ಚರವಿರಲಿ. ಉಚಿತ ಸಿಮ್ ಕಾರ್ಡ್ ಕೊಡುವ ಹೆಸರಲ್ಲಿ ವೈಯಕ್ತಿಕ ದಾಖಲಾತಿ, ಹಲವು ಬಾರಿ ಬೆರಳಚ್ಚು ಪಡೆದು, ಅವರ ಹೆಸರಲ್ಲೇ ಸಿಮ್ ಕಾರ್ಡ್ ಸೃಷ್ಟಿಸಿ ದೇಶದ್ರೋಹಿ ಕೃತ್ಯಗಳಿಗೆ ಬಳಸಲಾಗುತ್ತಿದೆ. ಆದ್ದರಿಂದ ಸಿಮ್ ಖರೀದಿಸುವಾಗ ಸಾರ್ವಜನಿಕರು ಎಚ್ಚರಿಕೆಯಿಂದರಬೇಕು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಸ್ಯಾಟ್ ಫೋನ್ ಸುಳಿವಿಲ್ಲ: ರಾಜ್ಯದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಬಗ್ಗೆ ಹಲವು ವರ್ಷಗಳಿಂದ ಮಾಹಿತಿ ಇದೆ. 2020ರಲ್ಲಿ 256 ಸ್ಯಾಟ್ ಫೋನ್ ಕರೆ ಹಾಗೂ 2021ರಲ್ಲಿ 220 ಕರೆ ಮಾಡಿರುವ ಬಗ್ಗೆ ರಾಜ್ಯ ಸರ್ಕಾರವೇ ಅಧಿವೇಶನದಲ್ಲಿ ಮಾಹಿತಿ ಕೊಟ್ಟಿದೆ. ಆದರೆ, ಸಿಗ್ನಲ್ ಆಧರಿಸಿ ಪೊಲೀಸರು ಫೋನ್ ಪತ್ತೆಹಚ್ಚುವ ಕೆಲಸ ಮಾಡಿದ್ದಾರಾದರೂ ಈವರೆಗೂ ಒಂದೇ ಒಂದು ಸ್ಯಾಟಲೈಟ್ ಫೋನ್ ಪತ್ತೆಯಾಗದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.