ನ್ಯೂಸ್

ಉಗ್ರರ ಗುಂಡಿನ ದಾಳಿಗೆ ಕಲಬುರಗಿ ಯೋಧ ಹುತಾತ್ಮ...

ಕಲಬುರಗಿ: ಉಗ್ರರು ನಡೆಸಿದ ಗುಂಡಿನ ದಾಳಿಗೆ ಕರ್ನಾಟಕ ಮೂಲದ ಓರ್ವ ಬಿಎಸ್‌ಎಫ್ ಯೋಧ ಹುತಾತ್ಮರಾಗಿರುವ ಘಟನೆ ಭಾರತ-ಬಾಂಗ್ಲಾ ಗಡಿಯಲ್ಲಿರುವ ಧಲಾಯಿ ಪ್ರದೇಶದಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಚಿಂಚನಸೂರ ಗ್ರಾಮದ ಯೋಧ ರಾಜಕುಮಾರ ಎಂ. ಮಾವಿನ್ ಹುತಾತ್ಮರಾಗಿದ್ದಾರೆ. ತ್ರಿಪುರಾ ರಾಜ್ಯದ ಭಾರತ-ಬಾಂಗ್ಲಾ ಗಡಿಯಲ್ಲಿರುವ ಧಲಾಯಿ ಪ್ರದೇಶದಲ್ಲಿ ಯೋಧರು ಗಸ್ತು ತಿರುಗುತ್ತಿರುವಾಗ ಉಗ್ರರಿಂದ ಏಕಾಏಕಿ ಗುಂಡಿನ ದಾಳಿ ನಡೆದಿದೆ.

ಈ ವೇಳೆ ಯೋಧ ರಾಜಕುಮಾರ ಎದೆಗೆ ಗುಂಡು ತಗುಲಿ ಗಂಭೀರ ಗಾಯಗೊಂಡು ನಂತರ ಹುತಾತ್ಮರಾಗಿದ್ದಾರೆ. ಯೋಧ ರಾಜಕುಮಾರ ಹುಟ್ಟೂರು ಚಿಂಚನಸೂರು ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗುರುವಾರ ಸ್ವಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸುವ ಸಾಧ್ಯತೆ ಇದೆ.