ನವದೆಹಲಿ: ಜಮ್ಮು- ಕಾಶ್ಮೀರದ ರಾಜೌರಿಯಲ್ಲಿ ಬುಧವಾರ ನಡೆದ ಎನ್ಕೌಂಟರ್ನಲ್ಲಿ ಸೇನೆಯ ನಾಲ್ವರು ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಇವರಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಮತ್ತು ಇಬ್ಬರು ಸೈನಿಕರಾಗಿದ್ದಾರೆ. ಧರ್ಮಸಾಲ್ನ ಬಾಜಿಮಲ್ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಭದ್ರತಾ ಪಡೆ ಶೋಧ ಕಾರ್ಯಾಚರಣೆ ನಡೆಸಿತ್ತು.
ಕಾಡಿನಲ್ಲಿ ಅಡಗಿದ್ದ ಉಗ್ರರು, ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆದರು. ಈ ಮೂಲಕ ಎನ್ಕೌಂಟರ್ ಆರಂಭವಾಯಿತು. ಗುಂಡಿನ ಚಕಮಕಿ ವೇಳೆ ಉಗ್ರರಿಗೂ ಗಾಯವಾಗಿದೆ. ಈ ಪ್ರದೇಶವನ್ನು ಸುತ್ತವರಿದಿರುವ ಭದ್ರತಾ ಪಡೆ ಉಗ್ರರಿಗೆ ಹುಡುಕಾಟ ನಡೆಸುತ್ತಿದೆ. ನ. 19ರಂದು ಕಲಕೋಟ್ ಪ್ರದೇಶದ ಅರಣ್ಯದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಂದಿನಿಂದ ಈ ಪ್ರದೇಶದಲ್ಲಿ ನಿರಂತರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಲಷ್ಕರ್ ಉಗ್ರರ ಬಂಧನ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಬುಧವಾರ ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಅವರಿಂದ 2 ಪಿಸ್ತೂಲ್ಗಳು, 4 ಮ್ಯಾಗಜಿನ್ಗಳು ಮತ್ತು 8 ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮುಮ್ತಾಜ್ ಅಹ್ಮದ್ ಲೋನ್ ಮತ್ತು ಜಹಾಂಗೀರ್ ಅಹ್ಮದ್ ಲೋನ್ ಕುಪ್ವಾರದ ನಿವಾಸಿಗಳು.
ಉಗ್ರ ಚಟುವಟಿಕೆ ಏರಿಕೆ?
ಕಾಶ್ಮೀರದಲ್ಲಿ ನವೆಂಬರ್ ತಿಂಗಳಲ್ಲಿ ನಡೆದ ಎರಡನೇ ದೊಡ್ಡ ಉಗ್ರ ದಾಳಿ ಇದಾಗಿದೆ. ಜಮ್ಮು - ಕಾಶ್ಮೀರಕ್ಕೆ ಸ್ವಾಯತ್ತೆ ನೀಡುವ 370ನೇ ವಿಧಿ ರದ್ದು ಪಡಿಸಿದ ನಂತರ ಇಲ್ಲಿ ಉಗ್ರ ಚಟುವಟಿಕೆ ಗಣನೀಯವಾಗಿ ಇಳಿಕೆ ಕಂಡಿತ್ತು. ಆದರೆ ಈಗ ಮತ್ತೆ ಏರಿಕೆ ಕಾಣುತ್ತಿರುವುದು ಕಳವಳ ಮೂಡಿಸಿದೆ. ನ. 17ರಂದು ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ನಲ್ಲಿ 6 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ರಜೌರಿ ಮತ್ತು ಕುಲ್ಗಾಮ್ಲ್ಲಿ ಎನ್ಕೌಂಟರ್ ನಡೆದಿತ್ತು.