ವಿಯೆನ್ನಾ : ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಆರು ಬೇರೆ ಪ್ರದೇಶಗಳಲ್ಲಿ ಶಸ್ತ್ರಧಾರಿ ಆಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಒಬ್ಬ ದಾಳಿಕೋರ ಸೇರಿ ಮೂವರು ಮೃತಪಟ್ಟಿದ್ದಾರೆ. ಇದೊಂದು ಭೀಕರ ಉಗ್ರ ದಾಳಿ ಎಂದು ಆಸ್ಟ್ರಿಯನ್ ಚಾನ್ಸಲರ್ ಸೆಬಾಸ್ಟಿಯನ್ ಕುರ್ಝ್ ಖಂಡಿಸಿದ್ದಾರೆ. ಉಗ್ರದಾಳಿಗೆ ಜಾಗತಿಕಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ.
ಕರೊನಾ ವೈರಸ್ ಸೋಂಕು ತಡೆಗೆ ಮತ್ತೊಮ್ಮೆ ರಾಷ್ಟ್ರವ್ಯಾಪಿ ಲಾಕ್ಡೌನ್ ಆರಂಭವಾಗುವುದಕ್ಕೆ ಕೆಲವೇ ಗಂಟೆಗಳ ಮೊದಲು ಈ ದಾಳಿ ನಡೆದಿದೆ. ಲಾಕ್ಡೌನ್ ಹೋಗುವ ಮುನ್ನ ರೆಸ್ಟೋರೆಂಟ್, ಬಾರ್ಗಳಲ್ಲಿ ಜನಸಂದಣಿ ಇದ್ದ ಸಂದರ್ಭ ನೋಡಿಯೇ ಉಗ್ರರು ದಾಳಿ ನಡೆಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ರಕ್ಷಣಾ ಪಡೆ ಸಿಬ್ಬಂದಿ ಉಗ್ರ ನಿಗ್ರಹಕ್ಕೆ ಮುಂದಾಗಿ ಪ್ರತಿದಾಳಿ ನಡೆಸಿದೆ. ಇದೇ ವೇಳೆ ಒಬ್ಬ ದಾಳಿ ಕೋರ ಗುಂಡಿಗೆ ಬಲಿಯಾಗಿದ್ದಾನೆ. ಇನ್ನೊಬ್ಬ ಓಡಿ ಹೋದ ಎಂದು ಗೃಹ ಸಚಿವ ಕಾರ್ಲ್ ನೆಹ್ಮರ್ ತಿಳಿಸಿದ್ದಾರೆ.
ಹತ ಉಗ್ರ ಇಸ್ಲಾಮಿಕ್ ಸ್ಟೇಟ್ ಗ್ರೂಪ್ನ ಹಿತೈಷಿಯಾಗಿದ್ದ. ಆತ ಧರಿಸಿದ್ದ ಬೆಲ್ಟ್ನಲ್ಲಿ ಬಾಂಬ್ ಇತ್ತಾದರೂ, ಅದನ್ನು ನಿಷ್ಕ್ರಿಯಗೊಳಿಸಲಾಗಿದೆ. ಅದು ಸ್ಪೋಟಗೊಳ್ಳದ ಕಾರಣ ಆತ್ಮಾಹುತಿ ದಾಳಿ ಯತ್ನ ವಿಫಲವಾಗಿದೆ. ಇನ್ನೊಬ್ಬ ದಾಳಿಕೋರ ಕೂಡ ಐಎಸ್ ಹಿತೈಷಿಯೇ ಆಗಿದ್ದಾನೆ ಎಂದು ಕಾರ್ಲ್ ನೆಹ್ಮರ್ ಹೇಳಿದರು. (ಏಜೆನ್ಸೀಸ್)