ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಕಂದಕಕ್ಕೆ ಬಿದ್ದ ಬೊಲೆರೊ ವಾಹನದ ರಕ್ಷಣಾ ಕಾರ್ಯಾಚರಣೆ 
ನ್ಯೂಸ್

ಉತ್ತರಾಖಂಡದಲ್ಲಿ ಭೀಕರ ರಸ್ತೆ ಅಪಘಾತ: ಕಂದಕಕ್ಕೆ ಬಿದ್ದ ಬೊಲೆರೊ, 6 ಮಂದಿ ದುರ್ಮರಣ! | Uttarakhand Accident

Uttarakhand Accident: ಉತ್ತರಾಖಂಡದಲ್ಲಿ ಸರಣಿ ರಸ್ತೆ ಅಪಘಾತಗಳು ಸಂಭವಿಸಿವೆ. ರುದ್ರಪ್ರಯಾಗದಲ್ಲಿ ಬೊಲೆರೊ ವಾಹನ ಕಂದಕಕ್ಕೆ ಉರುಳಿ ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇತ್ತ ಋಷಿಕೇಶದ ಬಳಿ ಸೇತುವೆಯಿಂದ ಬಸ್ ಕಂದಕಕ್ಕೆ ಬಿದ್ದ ಪರಿಣಾಮ 20 ಮಂದಿ ಗಾಯಗೊಂಡಿದ್ದಾರೆ.

ಸೋಮವಾರ ರಾತ್ರಿ ಬನ್ಸ್‌ವಾಡಾ-ಮೋಹನಖಾಲ್ ಮೋಟಾರು ರಸ್ತೆಯ ಭಟ್ವಾರಿ-ಕಂದಾರಾ ಬಳಿ ಈ ದುರ್ಘಟನೆ ಸಂಭವಿಸಿದೆ. ಪೋಖ್ರಿ ಪ್ರದೇಶದಿಂದ ರಾನ್ಸಿ ಕಡೆಗೆ ತೆರಳುತ್ತಿದ್ದ ಬೊಲೆರೊ ವಾಹನದ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದಿದೆ. ವಾಹನದಲ್ಲಿ ಸುಮಾರು 9ರಿಂದ 10 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಆರು ಮಂದಿ ಸ್ಥಳದಲ್ಲೇ ಸಾವು

ರಾತ್ರಿ 10 ಗಂಟೆ ಸುಮಾರಿಗೆ ಡಯಲ್ 112 ಮೂಲಕ ಪೊಲೀಸರಿಗೆ ಅಪಘಾತದ ಮಾಹಿತಿ ಲಭಿಸಿದೆ. ತಕ್ಷಣ ಅಗಸ್ತ್ಯಮುನಿ ಪೊಲೀಸರು, ಎಸ್‌ಡಿಆರ್‌ಎಫ್, ಡಿಡಿಆರ್‌ಎಫ್ ಹಾಗೂ 108 ಆಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ರಾತ್ರಿಯಿಡೀ ನಡೆದ ಕಾರ್ಯಾಚರಣೆಯಲ್ಲಿ ಕಂದಕದಲ್ಲಿ ಸಿಲುಕಿದ್ದ ಎಲ್ಲರನ್ನೂ ಹೊರಗೆ ತರಲಾಗಿದೆ. ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಋಷಿಕೇಶದಲ್ಲೂ ಬಸ್ ಅಪಘಾತ: 20 ಮಂದಿ ಗಾಯ

ಇನ್ನೊಂದೆಡೆ, ಮಂಗಳವಾರ ಬೆಳಗ್ಗೆ ಋಷಿಕೇಶದ ಗುಲರ್ ಬಜಾರ್ ಬಳಿ ಸೇತುವೆಯಿಂದ ಸುಮಾರು 100 ಮೀಟರ್ ಕೆಳಗಿನ ಕಂದಕಕ್ಕೆ ಬಸ್ ಉರುಳಿದೆ. ಬಸ್‌ನಲ್ಲಿ ಸುಮಾರು 30ರಿಂದ 35 ಮಂದಿ ಪ್ರಯಾಣಿಸುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಘಟನೆಯಲ್ಲಿ ಸುಮಾರು 20 ಮಂದಿ ಗಾಯಗೊಂಡಿದ್ದು, ಎಸ್‌ಡಿಆರ್‌ಎಫ್ ತಂಡ ಗಾಯಾಳುಗಳನ್ನು ರಕ್ಷಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದೆ.

ಇದನ್ನೂ ಓದಿ: ನನ್ನ ತಂದೆ ಅವಳಿಗೆ ಸೇರಿದವರು, ಅವಳು ತಂದೆಗೆ ಸೇರಿದವಳು!' ಸೋನಿಯಾ-ರಾಜೀವ್ ಪ್ರೀತಿಯ ಕಥೆ ಬಿಚ್ಚಿಟ್ಟ ರಾಹುಲ್ ಗಾಂಧಿ | Rahul Gandhi Speech

ಬೈಯಾಸಿ ಮತ್ತು ಧಾಲ್‌ವಾಲಾ ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಕಮಾಂಡೆಂಟ್ ಅರ್ಪಣ್ ಯದುವಂಶಿ ಅವರ ನಿರ್ದೇಶನದಂತೆ ಹೆಚ್ಚುವರಿ ತಂಡಗಳನ್ನೂ ಸ್ಥಳಕ್ಕೆ ಕಳುಹಿಸಲಾಗಿದೆ. ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ