ನ್ಯೂಸ್

'ಪೋಸ್ಟ್ ಹಾಕಿದ್ರೆ ಪ್ರಯೋಜನವಿಲ್ಲ, ದೂರು ನೀಡಬೇಕು': ಪೂನಂ ಲೈಂಗಿಕ ಕಿರುಕುಳ ಆರೋಪಕ್ಕೆ ಫಿಲಂಚೇಂಬರ್​ ಪ್ರತಿಕ್ರಿಯೆ!

ಹೈದರಾಬಾದ್​: ತೆಲುಗು ರಾಜ್ಯಗಳಲ್ಲಿ ಕೊರಿಯೋಗ್ರಾಫರ್​ ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತೆಲುಗು ಫಿಲಂ ಚೇಂಬರ್ ಕಾರ್ಯದರ್ಶಿ ದಾಮೋದರ್ ಪ್ರಸಾದ್ ಪ್ರತಿಕ್ರಿಯಿಸಿದ್ದು, ಅವರ ಮಾತುಗಳು ವೈರಲ್​ ಆಗಿದೆ.

ಮಹಿಳಾ ಸುರಕ್ಷತೆ ವಿಚಾರದಲ್ಲಿ ಟಾಲಿವುಡ್ ಇತರ ಚಿತ್ರರಂಗಗಳಿಗಿಂತ ಮುಂದಿದ್ದು, ಕೆಲಸದ ಸ್ಥಳದಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳವಾದರೆ ಖಂಡಿತಾ ಹಿರಿಯರನ್ನು ಕೇಳುತ್ತೇವೆ. ಸಮಿತಿಗೆ ವರದಿ ನೀಡದೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.

ಇತ್ತೀಚೆಗೆ ಜಾನಿ ವಿರುದ್ಧ ಪೂನಮ್ ಕೌರ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಇದರ ಬಗ್ಗೆ ದಾಮೋದರ್​ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಅವರು ಫಿಲಂ ಚೇಂಬರ್ ಗೆ ಬಂದು ದೂರು ನೀಡಬೇಕು. ಯಾರು ಎಷ್ಟೇ ಪ್ರಭಾವ ಬೀರಿದರೂ ಸಮಿತಿ ತನಿಖೆಯನ್ನು ಕಾನೂನಾತ್ಮಕವಾಗಿಯೇ ಮಾಡಲಾಗುವುದು ಎಂದರು.

ಜಾನಿ ಮಾಸ್ಟರ್ ಕಿರುಕುಳ ಪ್ರಕರಣದಲ್ಲಿ ಸಮಿತಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೀಗ ದಾಮೋದರ್​ ಮಾತುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿವೆ.